ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರ ನೇತ್ರತ್ವದಲ್ಲಿ ಗುರುವಾರ ಹುಲಸೂರ ಪಟ್ಟಣ ಸೇರಿದಂತೆ ತಾಲೂಕಿನ ಮುಚಳಂಬ, ಗೋರ್ಟಾ(ಬಿ) ಗ್ರಾಮಗಳ ಅಂಗನವಾಡಿ ಕೇಂದ್ರ, ಶಾಲಾ-ಕಾಲೇಜು, ಬಾಲಕ-ಬಾಲಕಿಯರ ವಸತಿ ನಿಲಯ ಹಾಗೂ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ವ್ಯವಸ್ಥೆಯ ಕುರಿತು ಪರಿಶೀಲಿಸಿದರು.
ಹುಲಸೂರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಕ್ಕಳ ಹೇರಿಗೆ ಕೋಣೆ ವೀಕ್ಷಿಸಿ, ಸ್ವಚ್ಚತೆ ಬಗ್ಗೆ ಗಮನ ಹರಿಸಿ, ಹೆರಿಗೆಗೆ ಬೇಕಾದ ಸಾಮಗ್ರಿಗಳ ಬಗ್ಗೆ, ಮಕ್ಕಳ ತೂಕ ಹಾಗೂ ಸುರಕ್ಷತೆಗಾಗಿ ಯಾವ ಕ್ರಮ ಕೈಗೊಳ್ಳತ್ತೀರಿ ಎಂದು ಪ್ರಶ್ನಿಸಿದರು. ಸ್ವಚ್ಛತೆ ಕಡೆ ಹೆಚ್ಚಿನ ಗಮನ ಹರಿಸಿ ರೋಗಿಗಳಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ಒದಗಿಸಿ ಯಾವುದೇ ದೂರುಗಳು ಬಾರದಂತೆ ಎಚ್ಚ ವಹಿಸಿ ಎಂದರು. ʼಆಸ್ಪತ್ರೆಗೆ ಈಗ ಕೆಲವು ಸಾಮಗ್ರಿಗಳು ಬಂದಿವೆ, ಅವುಗಳನ್ನು ಕೂಡಲೇ ಉಪಯೋಗಿಸುತ್ತೇವೆʼ ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಶಶಿಕಾಂತ ಕನ್ನಾಡೆ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಹುಲಸೂರ ಪಟ್ಟಣದ ಬಾಲಕ-ಬಾಲಕಿಯರ ವಸತಿ ನಿಲಯ ಹಾಗೂ ಮುಚಳಂಬ ಗ್ರಾಮದ ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ವಾರ್ಡನ್‌ಗೆ ಹಲವು ಪ್ರಶ್ನೆಗಳು ಕೇಳಿದರು. ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸದ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೀಲಿಪಕುಮಾರ ಉತ್ತಮ ಅವರಿಗೆ ತಿಳಿಸಿದರು.
ʼಮುಚಳಂಬ ಸರಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲಾ ಮಕ್ಕಳ ಹಾಜರಾತಿ, ಶಾಲಾ ಬಿಟ್ಟ ಮಕ್ಕಳ ಹಾಜರಾತಿ ಕುರಿತು ಮಾಹಿತಿ ಕೇಳಿದರು. ಆದರೆ, ಶಾಲಾ ವರ್ಗ ಶಿಕ್ಷಕರು ಮತ್ತು ಮುಖ್ಯಗುರು ನಿಖರ ಮಾಹಿತಿ ನೀಡದಿರುವುದಕ್ಕೆ ಶಾಲಾ ಶಿಕ್ಷಕರ, ಮುಖ್ಯಗುರು ಹಾಗೂ ಸಿಆರ್‌ಪಿಗಳ ಮೇಲೆ ದೂರು ದಾಖಲು ಮಾಡುವುದಾಗಿ ಎಚ್ಚರಿಕೆ ನೀಡಿದರು. ಕೂಡಲೇ ಇಂತಹ ಶಿಕ್ಷಕರ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕುʼ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಒಂದೇ ಶಾಲೆಯಲ್ಲಿ ನಾಲ್ಕು ಬಾಲ್ಯವಿವಾಹ :
ಹುಲಸೂರ ಪಟ್ಟಣದ ಅನುದಾನಿತ ಶಾಲೆಯೊಂದಕ್ಕೆ ಭೇಟಿ ನೀಡಿದ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಶಾಲೆಯ 9 ಮತ್ತು 10ನೇ ತರಗತಿಯ ನಾಲ್ಕು ವಿದ್ಯಾರ್ಥಿನಿಯರು ಸತತವಾಗಿ ಗೈರಾಗಿದ್ದು, ಬಾಲ್ಯ ವಿವಾಹ ಆಗಿರುವುದರ ಬಗ್ಗೆ ಮಾಹಿತಿ ಬಂದಿರುವುದಾಗಿ ತಿಳಿಸಿದರು. ಅದನ್ನು ಗಂಭೀರವಾಗಿ ಪರಿಗಣಿಸದ ಅಲ್ಲಿನ ಶಿಕ್ಷಕರಿಗೆ ತರಾಟೆಗೆ ತೆಗೆದುಕೊಂಡರು. ಕೂಡಲೇ ತಪ್ಪಿಸ್ತರ ವಿರುದ್ದ ಸ್ವಯಂ ಪ್ರೇರಿತ ದೂರು ದಾಖಲಿಸಿ ಆಯೋಗಕ್ಕೆ ವರದಿ ಸಲ್ಲಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದನೂರ ಅವರಿಗೆ ಆಯೋಗದ ಸದಸ್ಯ ಶಶಿಧರ ಕೋಸಂಬೆ ಸೂಚಿಸಿದರು.
ಹುಲಸೂರ ತಾ.ಪಂ. ಪ್ರಗತಿ ಪರಿಶೀಲನಾ ಸಭೆ :
ಮಕ್ಕಳ ಹಕ್ಕುಗಳಿಗೆ ಯಾವುದೇ ಧಕ್ಕೆ ಬಾರದಂತೆ ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು. ಮಕ್ಕಳ ಹಕ್ಕು ರಕ್ಷಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಒಂದೇ ಶಾಲೆಯಲ್ಲಿ 4 ಬಾಲ್ಯ ವಿವಾಹ ನಡೆದಿರುವುದು ಪ್ರಾಥಮಿಕ ಮಾಹಿತಿಯಿಂದ ಕಂಡು ಬಂದಿದ್ದು, ಕೂಡಲೇ ತಪ್ಪಿಸ್ತರ ವಿರುದ್ಧ ದೂರು ದಾಖಲಿಸಿ ವರದಿ ನೀಡುವಂತೆ ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳಿಗೆ ಆಯೋಗದ ಸದಸ್ಯ ಶಶಿಧರ ಕೋಸಂಬೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಭಾಲ್ಕಿ | ಅತಿವೃಷ್ಟಿ : ಬೆಳೆ ಹಾನಿ ಪರಿಹಾರಕ್ಕೆ ಮನವಿ
ಈ ಸಂದರ್ಭದಲ್ಲಿ ತಹಸೀಲ್ದಾರ್ ಶಿವಾನಂದ ಮೇತ್ರೆ, ತಾಲೂಕು ಪಂಚಾಯತ್ ಇಒ ವೈಜಣ್ಣ ಫುಲೆ, ಸಿಡಿಪಿಒ ಗೌತಮ ಸಿಂಧೆ, ಸಿಪಿಐ ಅಲಿಸಾಬ್, ಪಿಎಸ್ಐ ಶಿವಪ್ಪಾ ಮೇಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದನೂರು ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.