ನಕಲಿ ದಾಖಲೆ ಸೃಷ್ಟಿಸಿ ನಾಲ್ಕೈದು ದಶಕಗಳಿಂದ ಅನುಭವದಲ್ಲಿರುವ ದಲಿತರ ಭೂಮಿಯನ್ನು ಕಬಳಿಸಲು ಯತ್ನಿಸಲಾಗುತ್ತಿದೆ ಎಂದು ಕೋಲಾರ ಜಿಲ್ಲೆ ಕೋಲಾರ ತಾಲೂಕಿನ ಚೊಕ್ಕಪುರ ಗ್ರಾಮಸ್ಥರು ಆರೋಪಿಸಿದ್ದಾರೆ.
ಕೋಲಾರ ಜಿಲ್ಲೆ ಕೋಲಾರ ತಾಲೂಕಿನ ಚೌಡದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚೊಕ್ಕಪುರ ಗ್ರಾಮಕ್ಕೆ ಸೇರಿದ ಸುಮಾರು 2.24 ಎಕರೆ ಭೂಮಿಯಲ್ಲಿ ನಾಲ್ಕೈದು ದಶಕಗಳಿಂದ ನೂರಾರು ಅನಕ್ಷರಸ್ಥ ದಲಿತ ಕುಟುಂಬಗಳು ಅನುಭವದಲ್ಲಿವೆ. ಕೆಲ ಕುಟುಂಬಗಳು ಈಗಾಗಲೇ ಮನೆ ಹಾಗೂ ಶೆಡ್‌ಗಳನ್ನು ನಿರ್ಮಿಸಿಕೊಂಡಿದ್ದು, ಇನ್ನೂ ಕೆಲವರು ಅವರವರ ಜಾಗದಲ್ಲಿ ತಿಪ್ಪೆ, ಇತ್ಯಾದಿಗಳನ್ನು ಹಾಕಿಕೊಂಡು ನಿವೇಶಾನುಭವದಲ್ಲಿದ್ದಾರೆ.
ಹೀಗಿರುವಾಗ ನಿವೇಶನಾನುಭವದಲ್ಲಿರುವ ದಲಿತ ಕುಟುಂಬಗಳಿಗೆ ತಿಳಿಯದಂತೆ ಅಲ್ಲಿನ ಗ್ರಾಪಂ ಮಾಜಿ ಸದಸ್ಯರೊಬ್ಬರು ಜಾಗವನ್ನು ಖರೀದಿಸಿರುವಂತೆ ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದು, 2.24 ಎಕರೆ ಜಾಗವನ್ನು ದೌರ್ಜನ್ಯದಿಂದ ಪೊಲೀಸರ ರಕ್ಷಣೆಯಲ್ಲಿ ಒತ್ತುವರಿ ಮಾಡಲು ಮುಂದಾಗಿದ್ದಾರೆ.

ಚೊಕ್ಕಪುರ ಗ್ರಾಮ ನಕ್ಷೆಯ ಪ್ರಕಾರ ಆ ಜಾಗವು ಗ್ರಾಮಠಾಣಾ ಜಾಗವಾಗಿದ್ದು, ಇದೀಗ ಸ.ನಂಬರ್ 84 ಆಗಿ ಬದಲಾಗಿರುವುದು ದಶಕಗಳಿಂದ ಅದೇ ಜಾಗದಲ್ಲಿ ವಾಸವಿರುವ ದಲಿತ ಕುಟುಂಬಗಳನ್ನು ಆತಂಕಕ್ಕೆ ದೂಡುವಂತೆ ಮಾಡಿದೆ.
ಅಧಿಕಾರಿಗಳ ಶಾಮೀಲು?:
ನಾಲ್ಕೈದು ದಶಕಗಳಿಂದ ವಾಸವಿರುವ ದಲಿತ ಕುಟುಂಬಗಳು ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಅಧಿಕಾರಿಗಳು ಸ್ಪಂದಿಸದಿರುವುದು, ಸ್ಥಳ ಪರಿಶೀಲನೆಯನ್ನೂ ಮಾಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧವಿಲ್ಲಬೆಂಬಂತೆ ಹಾರಿಕೆ ಉತ್ತರಗಳನ್ನು ನೀಡುತ್ತಿದ್ದಾರೆ. ತುಳಿತಕ್ಕೊಳಗಾದ, ಅನಕ್ಷರಸ್ಥ ಕುಟುಂಬಗಳಿಗೆ ರಕ್ಷಣೆ ಕೊಡಬೇಕಾದ ಪೊಲೀಸ್ ಇಲಾಖೆ ಅನ್ಯಾಯದ ಪರ ನಿಂತಿದೆ. ದಲಿತರ ಮನವಿಯನ್ನು ಲೆಕ್ಕಿಸದೆ ತಾಲೂಕು ಆಡಳಿತ, ಸರ್ವೆ ಇಲಾಖೆ, ಗ್ರಾಪಂ, ಪೊಲೀಸ್ ಇಲಾಖೆಗಳು ಜಾಣಮೌನಕ್ಕೆ ಜಾರಿರುವುದು ಅಧಿಕಾರಿಗಳು ಸಹ ಇದರಲ್ಲಿ ಶಾಮೀಲಾಗಿದ್ದಾರೆ ಎಂಬ ಶಂಕೆಗೆ ಕಾರಣವಾಗಿದೆ.

ಗ್ರಾಪಂ ವತಿಯಿಂದ ನಮೂನೆ-9, 11 ವಿತರಣೆ
ಸರ್ವೆ ನಂಬರ್ 84 ಎಂದು ಮಾರ್ಪಾಡಾಗಿರುವ ಜಾಗದಲ್ಲಿರುವ ಕೆಲ ದಲಿತ ಕುಟುಂಬಗಳಿಗೆ ಈಗಾಗಲೇ ಚೌಡದೇನಹಳ್ಳಿ ಗ್ರಾಪಂ ವತಿಯಿಂದ ನಮೂನೆ-9 ಮತ್ತು ನಮೂನೆ-11 ಸಹ ನೀಡಲಾಗಿದ್ದು, 40-50 ವರ್ಷಗಳಿಂದ ಅದೇ ಜಾಗದಲ್ಲಿ ನೆಲೆಸಿರುವ ದಲಿತರನ್ನು ಒಕ್ಕಲೆಬ್ಬೆಸಲು ಹುನ್ನಾರ ಮಾಡಲಾಗಿದೆ. ಈ ಕುರಿತು ತಹಶೀಲ್ದಾರ್, ಎಸಿ, ಡಿಸಿ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದೂ ಇದೂವರೆಗೆ ಯಾರೂ ಸ್ಪಂದಿಸಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ರಂಗಣ್ಣ.
ಈ ಜಾಗವನ್ನು ಬೆಂಗಳೂರಿನ ವ್ಯಕ್ತಿಯೊಬ್ಬರಿಂದ ನಾನು ಖರೀದಿಸಿದ್ದೇನೆ. ಈಗಾಗಲೇ ಸರ್ವೇ ಕಾರ್ಯ ಮುಗಿದಿದ್ದು, ಅದರಂತೆ ನಮ್ಮ ಜಾಗಕ್ಕೆ ಕಾಂಪೌಂಡ್ ಗೋಡೆ ಕಟ್ಟಲು ಮುಂದಾಗಿದ್ದೇವೆ. ಅವರ ಬಳಿ ದಾಖಲೆಗಳಿದ್ದರೆ ನ್ಯಾಯಾಲಯಕ್ಕೆ ಹೋಗಲಿ ಎನ್ನುತ್ತಾರೆ ಒತ್ತುವರಿಗೆ ಮುಂದಾಗಿರುವ ಗ್ರಾಪಂ ಮಾಜಿ ಸದಸ್ಯ ಸದಾನಂದ.
ಒಟ್ಟಾರೆಯಾಗಿ ನಾಲ್ಕೈದು ದಶಕಗಳಿಂದ ವಾಸವಿರುವ ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂಬುದು ದಲಿತ ಕುಟುಂಬಗಳ ಒತ್ತಾಯವಾಗಿದೆ.

ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ ಜಿಲ್ಲಾ ಸಂಯೋಜಕರು. ಪತ್ರಕರ್ತ, ಪರಿಸರ ಪ್ರೇಮಿ.
ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಜ್ಜರಹಳ್ಳಿ ಗ್ರಾಮದವರು.