- ಕಳೆದ ವರ್ಷ ಆಗಸ್ಟ್ 15ರಂದು ಬಿಡುಗಡೆಯಾಗಿದ್ದ ಬಿಲ್ಕಿಸ್ ಬಾನೊ ಪ್ರಕರಣದ ಆರೋಪಿಗಳು
- 11 ಅಪರಾಧಿಗಳಿಗೆ ನೀಡಲಾದ ಕ್ಷಮಾಪಣೆಯ ಬಗ್ಗೆ ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ
2002ರ ಗೋಧ್ರಾ ನಂತರದ ಗಲಭೆಯಲ್ಲಿ ಬಿಲ್ಕಿಸ್ ಬಾನೊ ಅವರ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬ ಸದಸ್ಯರ ಹತ್ಯೆ ಪ್ರಕರಣದಲ್ಲಿ ಕಳೆದ ವರ್ಷ 11 ಅಪರಾಧಿಗಳಿಗೆ ನೀಡಲಾದ ಕ್ಷಮಾಪಣೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮೇ 9ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೇಂದ್ರ ಮತ್ತು ಗುಜರಾತ್ ಸರ್ಕಾರದ ಪರವಾಗಿ ಹಾಜರಾಗಿ ಕ್ಷಮಾಪಣೆಗೊಂಡ ಆರೋಪಿಗಳ ಪರ ವಾದ ಮಂಡಿಸಿದರು.
ಇದೇ ಸಂದರ್ಭದಲ್ಲಿ ಅಪರಾಧಿಗಳಿಗೆ ನೀಡಲಾದ ವಿನಾಯಿತಿಗೆ ಸಂಬಂಧಿಸಿ ಮೂಲ ದಾಖಲೆಗಳನ್ನು ಸಲ್ಲಿಸುವಂತೆ ನ್ಯಾಯಾಲಯವು ಗುಜರಾತ್ ಹಾಗೂ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.
ಪ್ರಕರಣದಲ್ಲಿ ಬಿಡುಗಡೆಯಾಗಿರುವ ಅಪರಾಧಿಗಳ ಪರ ಹಲವು ವಕೀಲರು ಬಾನೊ ಅವರ ಮನವಿಗೆ ತಮ್ಮ ಉತ್ತರಗಳನ್ನು ಸಲ್ಲಿಸಲು ಸಮಯ ಬೇಕಾಗುತ್ತದೆ ಎಂದು ನ್ಯಾಯಾಲಯಕ್ಕೆ ಕೋರಿದಾಗ ಪೀಠವು ಮೇ 9 ರಂದು ವಿಚಾರಣೆಯನ್ನು ನಿಗದಿಪಡಿಸಿತು.
“ನಾವು ಕೇವಲ ವೇಳಾಪಟ್ಟಿಗಳನ್ನು ನಿಗದಿಪಡಿಸುತ್ತಿದ್ದೇವೆ. ಆದ್ದರಿಂದ ಯಾವುದೇ ನ್ಯಾಯಾಲಯವು ವಿಚಾರಣೆಯನ್ನು ಕೈಗೆತ್ತಿಕೊಂಡರೂ, ಈ ಕಾರ್ಯವಿಧಾನದ ಸಮಸ್ಯೆಗಳ ಬಗ್ಗೆ ಸಮಯವನ್ನು ವ್ಯರ್ಥ ಮಾಡಬೇಕಾಗಿಲ್ಲ. ನಾನು ಜೂನ್ 16ರಂದು ರಜೆಯ ಸಮಯದಲ್ಲಿ ನಿವೃತ್ತಿ ಹೊಂದುತ್ತಿದ್ದೇನೆ. ನನ್ನ ಕೊನೆಯ ಕೆಲಸದ ದಿನವು ಮೇ 19ರಂದು ಆಗಿರುತ್ತದೆ. ನನ್ನ ಸಹೋದರಿ ನ್ಯಾಯಮೂರ್ತಿ ನಾಗರತ್ನ ಅವರು ಮೇ 25 ರವರೆಗೆ ಸಿಂಗಾಪುರದಲ್ಲಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ನೀವೆಲ್ಲರೂ ಒಪ್ಪಿದರೆ, ನಾವು ರಜೆಯಲ್ಲಿ ವಿಚಾರಣೆ ಆರಂಭಿಸಬಹುದು. ಮತ್ತು ಈ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಬಹುದು” ಎಂದು ನ್ಯಾಯಮೂರ್ತಿ ಕೆ ಎಂ ಜೋಸೆಫ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮೋದಿ ಉಪನಾಮ ಪ್ರಕರಣ | ರಾಹುಲ್‌ಗೆ ಮಧ್ಯಂತರ ರಕ್ಷಣೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಣೆ
ಆದಾಗ್ಯೂ, ಬೇಸಿಗೆ ರಜೆಯ ಮೊದಲು ವಿಚಾರಣೆಯನ್ನು ಪಟ್ಟಿ ಮಾಡಬಹುದು ಎಂದು ಸಾಲಿಸಿಟರ್ ಜನರಲ್ ನ್ಯಾಯಾಲಯವನ್ನು ಒತ್ತಾಯಿಸಿದರು.
ಏಪ್ರಿಲ್ 18ರಂದು, ಸುಪ್ರೀಂ ಕೋರ್ಟ್ ಕಳೆದ ವರ್ಷ 11 ಅಪರಾಧಿಗಳಿಗೆ ನೀಡಲಾದ ಕ್ಷಮಾಪಣೆಯ ಬಗ್ಗೆ ಗುಜರಾತ್ ಸರ್ಕಾರವನ್ನು ಪ್ರಶ್ನಿಸಿತು. ಅಪರಾಧಿಗಳ ಅಕಾಲಿಕ ಬಿಡುಗಡೆಗೆ ಕಾರಣಗಳನ್ನು ಕೇಳಿರುವ ಸುಪ್ರೀಂ ಕೋರ್ಟ್, ಅವರ ಸೆರೆವಾಸದ ಅವಧಿಯಲ್ಲಿ ಅವರಿಗೆ ನೀಡಲಾದ ಪೆರೋಲ್ ಅನ್ನು ಸಹ ಪ್ರಶ್ನಿಸಿದೆ.
ಮಾರ್ಚ್ 27ರಂದು, ಬಿಲ್ಕಿಸ್ ಬಾನೊ ಅವರ ಸಾಮೂಹಿಕ ಅತ್ಯಾಚಾರ ಮತ್ತು 2002ರ ಗೋಧ್ರಾ ಗಲಭೆಯ ಸಮಯದಲ್ಲಿ ಅವರ ಕುಟುಂಬ ಸದಸ್ಯರ ಹತ್ಯೆಯನ್ನು “ಭಯಾನಕ” ಕೃತ್ಯ ಎಂದು ಆಘಾತ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಇತರ ಕೊಲೆ ಪ್ರಕರಣಗಳಲ್ಲಿ ಅನುಸರಿಸಿದಂತೆ ಏಕರೂಪದ ಮಾನದಂಡಗಳನ್ನು ಹೊಂದಿದೆಯೇ ಎಂದು ಗುಜರಾತ್ ಸರ್ಕಾರವನ್ನು ಕೇಳಿತ್ತು.
ಬಿಲ್ಕಿಸ್ ಬಾನೊ ಅತ್ಯಾಚಾರದ ಎಲ್ಲಾ 11 ಅಪರಾಧಿಗಳಿಗೆ ಗುಜರಾತ್ ಸರ್ಕಾರವು ವಿನಾಯಿತಿ ನೀಡಿದ ಕಾರಣ, ಕಳೆದ ವರ್ಷ ಆಗಸ್ಟ್ 15ರಂದು ಆರೋಪಿಗಳೆಲ್ಲರೂ ಬಿಡುಗಡೆಯಾಗಿದ್ದರು.
ಗೋಧ್ರಾ ರೈಲು ದುರಂತದ ನಂತರ ಭುಗಿಲೆದ್ದ ಹಿಂಸಾಚಾರದಿಂದ ತಪ್ಪಿಸಿಕೊಳ್ಳುವಾಗ ಬಾನೊ ಅವರು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ಆಗ ಅವರಿಗೆ 21 ವರ್ಷ ವಯಸ್ಸಾಗಿತ್ತು. ಅಲ್ಲದೆ ಐದು ತಿಂಗಳ ಗರ್ಭಿಣಿಯಾಗಿದ್ದರು. ಗಲಭೆಯಲ್ಲಿ ಸಾವನ್ನಪ್ಪಿದ ಏಳು ಕುಟುಂಬ ಸದಸ್ಯರಲ್ಲಿ ಆಕೆಯ ಮೂರು ವರ್ಷದ ಮಗಳೂ ಸೇರಿದ್ದಳು.
ಅಪರಾಧಿಗಳ ಬಿಡುಗಡೆ ವಿರುದ್ಧ ಸಿಪಿಐಎಂ ನಾಯಕಿ ಸುಭಾಷಿಣಿ ಅಲಿ, ಸ್ವತಂತ್ರ ಪತ್ರಕರ್ತೆ ರೇವತಿ ಲಾಲ್, ಲಖನೌ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ರೂಪ್ ರೇಖಾ ವರ್ಮಾ ಮತ್ತು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.