ಹಲವು ಮಹಿಳೆಯರ ಮೇಲೆ ಲೈಂಗಿ್ ದೌರ್ಜನ್ಯ ಎಸಗಿ, ತನ್ನ ಕೃತ್ಯವನ್ನು ತಾನೇ ವಿಡಿಯೋ ಮಾಡಿಕೊಂಡು ವಿಕೃತಿ ಮೆರೆದಿದ್ದ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲು ಸೇರಿದ್ದಾರೆ. ಆತನ ಲೈಂಗಿಕ ಹಗರಣ ಬೆಳಕಿಗೆ ಬಂದ ಬಳಿಕ ಮೊದಲ ಬಾರಿಗೆ ತಮ್ಮ ಮಗನ ಬಗ್ಗೆ ಮಾಜಿ ಸಚಿವ ಎಚ್.ಡಿ ರೇವಣ್ಣ ಮಾತನಾಡಿದ್ದಾರೆ. “ಪಾಪ ಪ್ರಜ್ವಲ್‌ಗೆ ಏನು ಗೊತ್ತಾಗಲ್ಲ. ಆತ ಒಳ್ಳೆ ಹುಡುಗ” ಎಂದಿದ್ದಾರೆ.
ಅದೇ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯನ್ನು ಅಪಹರಸಿದ್ದ ಪ್ರಕರಣದಲ್ಲಿ ರೇವಣ್ಣ ಅವರನ್ನೂ ಬಂಧಿಸಲಾಗಿತ್ತು. ಜಾಮೀನು ಪಡೆದು ರೇವಣ್ಣ ಹೊರಬಂದಿದ್ದಾರೆ. ಅವರು ಹಾಸನ ಜಿಲ್ಲೆಯ ಆಲೂರಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದರು. “ಇನ್ನು ಮೂರು ವರ್ಷ ಕಾಯಿರಿ, ಎಲ್ಲವನ್ನೂ ಬಡ್ಡಿ ಸಮೇತ ತೀರಿಸುತ್ತೇವೆ. ಇಲ್ಲದಿದ್ದರೆ, ನಾವು ದೇವೇಗೌಡರ ಮಗನೇ ಅಲ್ಲ” ಎಂದು ಪ್ರತಿಕಾರದ ಮಾತನ್ನಾಡಿದ್ದಾರೆ.
ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣೆ ಬಗ್ಗೆ ಮಾತನಾಡಿದ ರೇವಣ್ಣ, “ಹಾಸನದಲ್ಲಿ ಎಚ್.ಎಸ್ ಪ್ರಕಾಶ್ ಅವರು ನಾಲ್ಕು ಬಾರಿ ಗೆದ್ದು ಶಾಸಕರಾಗಿದ್ದರು. ಅವರು 2013ರಲ್ಲಿ ಸೋತಿದ್ದರು. 2023ರ ಚುನಾವಣೆಗೆ ನಾನೇ ಹಾಸನದಿಂದ ಸ್ಪರ್ಧಿಸಬೇಕೆಂಬ ಒತ್ತಾಯವಿತ್ತು. ಕೊನೆಗೆ ಸ್ವರೂಪ್ ಪ್ರಕಾಶ್ ಅವರನ್ನು ಕಣಕ್ಕಿಳಿಸಿದೆವು. ಸ್ವರೂಪ್ ಅವರ ಗೆಲುವಿಗಾಗಿ ಹೆಚ್ಚು ಓಡಾಟ ನಡೆಸಿದ್ದರಿಂದ, ಸಕಲೇಶಪುರದಲ್ಲಿ ಜೆಡಿಎಸ್ ಸೋಲಬೇಕಾಯಿತು” ಎಂದು ಹೇಳಿದ್ದಾರೆ.