ಮಾನವೀಯ ಮೌಲ್ಯಗಳ ಕುಸಿತ ಕಾರಣದಿಂದಾಗಿ ಅತ್ಯಾಚಾರ, ಕೊಲೆಗಳು ಇಂದು ಹೆಚ್ಚಾಗುತ್ತಿದೆ ಎಂದು ಕರ್ನಾಟಕದ ಮಾಜಿ ಲೋಕಾಯುಕ್ತ ಹಾಗೂ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಸಂತೋಷ್ ಹೆಗಡೆ ಹೇಳಿದರು.
ಧಾರವಾಡ ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಆಲ್ ಇಂಡಿಯಾ ಡೆಮೊಕ್ರೆಟಿಕ್ ಯೂತ್ ಆರ್ಗನೈಸೇಷನ್(ಎಐಡಿವೈಒ) ವತಿಯಿಂದ ಮಹಿಳೆಯರ ಘನತೆ ಮತ್ತು ಮಾನವ ಮೌಲ್ಯ ಉಳಿಸೋಣ ವಲಯ ಮಟ್ಟದ ಯುವಜನರ ಸಂಕಲ್ಪ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ಈ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ದೆಹಲಿಯಲ್ಲಿ ನಡೆದ ನಿರ್ಭಯಾ ಘಟನೆಯ ಸಂದರ್ಭದಲ್ಲಿ ಇಡೀ ದೇಶವೇ ಎಚ್ಚೆತ್ತುಕೊಂಡು ಪ್ರತಿಭಟನೆ ನಡೆಸಿತ್ತು. ಅದೇ ರೀತಿ ಈಗಲೂ ಆಗಬೇಕಾಗಿದೆ. ಮಾದಕ ವಸ್ತುಗಳ ಹಾವಳಿ ಸಮಾಜದಲ್ಲಿ ಹೆಚ್ಚಾಗುತ್ತಿದ್ದು, ಅದರ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಹಿಂದೆ ತಪ್ಪು ಮಾಡಿ ಶಿಕ್ಷೆ ಜೈಲು ಶಿಕ್ಷೆ ಅನುಭವಿಸಿ ಬಂದವರನ್ನು ಸಮಾಜ ಬಹಿಷ್ಕಾರ ಮಾಡುತ್ತಿತ್ತು. ಅವರಿಗೆ ಸಾಮಾಜಿಕ ಶಿಕ್ಷೆ ಆಗುತ್ತಿತ್ತು. ಆದರೆ ಅವರನ್ನು ಇಂದು ಸನ್ಮಾನ ಮಾಡುವ ಸ್ಥಿತಿಗೆ ನಮ್ಮ ಸಮಾಜ ತಲುಪಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಶ್ರೀಮಂತಿಕೆಯನ್ನು ಒಂದು ಪೂಜಿಸುವ ಹಂತಕ್ಕೆ ಸಮಾಜ ಬಂದು ನಿಂತಿದೆ. ಪ್ರಾಮಾಣಿಕರನ್ನು ಹುಚ್ಚನೆಂದು ಕರೆಯಲಾಗುತ್ತಿದೆ. ತಪ್ಪು ಯಾರೇ ಮಾಡಿದರೂ ಅವರಿಗೆ ಶಿಕ್ಷೆ ಆಗಬೇಕು. ನ್ಯಾಯಾಲಯದಲ್ಲಿ ತೀರ್ಪು ಹೊರಬರುವಷ್ಟರಲ್ಲಿ ಆರೋಪಿಯೇ ಸತ್ತು ಹೋಗಿರುತ್ತಾನೆ. ಇದರಿಂದ ಅಪರಾಧ ಮಾಡುವವರಿಗೆ ಭಯವಿಲ್ಲವಾಗಿದೆ. ಹಿರಿಯರು ಕಟ್ಟಿ ಬೆಳೆಸಿದ ಮಾನವ ಮೌಲ್ಯಗಳನ್ನು ಅಳವಡಿಸಿಕೊಂಡು ಅಪರಾಧಗಳೇ ಇಲ್ಲದ ಸಮಾಜದ ನಿರ್ಮಾಣಕ್ಕೆ ಯುವಕರು ಮುಂದಾಗಬೇಕು ಎಂದರು.

ಎಐಡಿವೈಓ ಅಖಿಲ ಭಾರತ ಉಪಾಧ್ಯಕ್ಷ ಡಾ. ಜಿ. ಶಶಿಕುಮಾರ್ ಮಾತನಾಡಿ, ಹುಬ್ಬಳ್ಳಿಯ ನೇಹ, ಅಂಜಲಿ, ಉತ್ತರ ಪ್ರದೇಶ ಮಹಾರಾಷ್ಟ್ರ, ಕೊಲ್ಕತ್ತದ ವೈದ್ಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ, ಕೊಲೆ ಘಟನೆಗಳು ಸೇರಿದಂತೆ ಹಲವಾರು ಗುಂಪು ಅತ್ಯಾಚಾರದ ಘಟನೆಗಳು ಸಮಾಜದಲ್ಲಿ ಆಘಾತ ಹಾಗೂ ಆಕ್ರೋಶವನ್ನು ಉಂಟುಮಾಡಿವೆ. ಆ ಘಟನೆಗಳಿಗೆ ಒಂದು ಪ್ರಮುಖ ಕಾರಣವೆಂದರೆ ನಿರುದ್ಯೋಗ ಸಮಸ್ಯೆ, ಬದುಕಿನ ಬಗ್ಗೆ ಇರುವ ಅಭದ್ರತೆಯೇ ಕಾರಣವಾಗಿದೆ ಎಂದರು.
ಯುವಕರಲ್ಲಿ ಮಾನಸಿಕ ಸ್ಥೈರ್ಯ ಹಾಗೂ ವೈಚಾರಿಕತೆಯನ್ನು ಬೆಳೆಸಲು ಈ ರೀತಿಯ ಸಮಾವೇಶವನ್ನು ಸಂಘಟಿಸಬೇಕಾಗಿದೆ. ನಿರ್ಭಯಾ ಘಟನೆ ನಂತರವೂ ಪ್ರತಿನಿತ್ಯ ಅಂತಹ ಘಟನೆಗಳು ನಡೆಯುತ್ತಿವೆ. ಇವುಗಳನ್ನು ತಡೆಯಲು ಯುವಕರು ವೈಯಕ್ತಿಕ ಮಟ್ಟದಲ್ಲಿ ಹಾಗೂ ಸಾಮಾಜಿಕವಾಗಿ ಪ್ರತಿಭಟಿಸಬೇಕಾದ ಅವಶ್ಯಕತೆ ಇದೆ. ಮಾದಕ ವಸ್ತುಗಳು, ಅಶ್ಲೀಲ ಸಿನಿಮಾ, ಪೋರ್ನೋಗ್ರಫಿ ವಿರುದ್ಧ ಧ್ವನಿ ಎತ್ತಬೇಕು ಎಂದರು.
ರಾಜ್ಯ ಅಧ್ಯಕ್ಷ ಶರಣಪ್ಪ ಉದ್ಬಾಳ್ ಮಾತನಾಡಿ, ನಿರುದ್ಯೋಗ ಸಮಸ್ಯೆ ವಿರುದ್ಧ ಹೋರಾಟಗಳನ್ನು ಕಟ್ಟುತ್ತಲೇ ಉನ್ನತ ಮೌಲ್ಯನೀತಿ ಸಂಸ್ಕೃತಿಯನ್ನು ಬೆಳೆಸಲು ಜಾಗೃತ ಕಾರ್ಯಕ್ರಮಗಳ ಹಮ್ಮಿಕೊಳ್ಳಬೇಕು ಎಂದು ಅಭಿಪ್ರಾಯಿಸಿದರು.
ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಕಾರ್ಯಕ್ರಮದ ಆಶಯ ಕುರಿತು ಮಾತನಾಡಿ, ಕೇವಲ ಪ್ರತಿಭಟಿಸಿದರೆ ಸಾಲದು. ಸಮಸ್ಯೆಗಳ ಮೂಲ ಕಾರಣಗಳ ಕುರಿತು ಚರ್ಚೆ ನಡೆಯಬೇಕಾಗಿದೆ ಎಂದರು.
ಇದನ್ನು ಓದಿದ್ದೀರಾ? ಬೆಳಗಾವಿ | ಖಾಸಗಿ ಕೃಷಿ ಮಾರುಕಟ್ಟೆಯ ಕಮಿಷನ್ ವಿರುದ್ಧ ರೈತ ಸಂಘಟನೆಯ ಹೋರಾಟಕ್ಕೆ ಮಣಿದ ಜಿಲ್ಲಾಡಳಿತ
ವೇದಿಕೆಯಲ್ಲಿ ಹಿರಿಯ ಮನೋಚಿಕಿತ್ಸಕ ನಡಹಳ್ಳಿ ವಸಂತ್, ಮನೋವೈದ್ಯರಾದ ಡಾ. ಸುಜ್ಞಾನಿ ದೇವಿ ಪಾಟೀಲ್, ಧಾರವಾಡ ಜನಜಾಗೃತಿ ಅಭಿಯಾನದ ಸಲಹೆಗಾರ ರಾಮಾಂಜನಪ್ಪ ಅಲ್ದಳ್ಳಿ ಇದ್ದರು.
