ಸಚಿವ ಕೆ ಎಚ್ ಮುನಿಯಪ್ಪ ನಿವಾಸದ ಮುಂದೆ ಧರಣಿ ಕುಳಿತ 13 ಗ್ರಾಮಗಳ ರೈತರು

Date:

Advertisements

ಆಹಾರ ಇಲಾಖೆ ಸಚಿವ ಕೆ ಎಚ್ ಮುನಿಯಪ್ಪ ಅವರ ನಿವಾಸದ ಮುಂದೆ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಹೋರಾಟಗಾರರು ಶುಕ್ರವಾರ ಬೆಳಿಗ್ಗೆಯಿಂದ ಧರಣಿ ಕುಳಿತಿದ್ದಾರೆ.

ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 13 ಗ್ರಾಮಗಳ ಸುಮಾರು 200 ಜನ ರೈತ ಹೋರಾಟಗಾರರು ದೇವನಹಳ್ಳಿಯ ಸಚಿವರ ನಿವಾಸದ ಮುಂದೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಚಿವ ಕೆ ಎಚ್ ಮುನಿಯಪ್ಪ ಅವರು ಬರುವವರೆಗೂ ಮರಳಿ ಹೋಗುವುದಿಲ್ಲ ಅಂತ ಪಟ್ಟು ಹಿಡಿದಿದ್ದಾರೆ.

ಧರಣಿಯಲ್ಲಿ ಮಹಿಳಾ ಹೋರಾಟಗಾರು ಕೂಡ ಭಾಗಿಯಾಗಿದ್ದು, ಬಿಸಿಲು ಲೆಕ್ಕಿಸದೇ ಸಚಿವರ ಮನೆ ಮುಂದೆ ಗಿಡದ ನೆರಳನ್ನು ಆಶ್ರಯಿಸಿ ಧರಣಿ ನಡೆಸುತ್ತಿದ್ದಾರೆ. ಸಚಿವರು ಬೆಳಿಗ್ಗೆಯೇ ಸಿಗಬಹುದೆಂಬ ನಿರೀಕ್ಷೆಯೊಂದಿಗೆ ಇಂದು (ಸೆ.20) ಬೆಳಿಗ್ಗೆ 8 ಗಂಟೆ ಸುಮಾರಿಗೆ ರೈತರು ಮುನಿಯಪ್ಪ ಅವರನ್ನು ಭೇಟಿಯಾಗಲು ಧಾವಿಸಿದ್ದಾರೆ. ಆದರೆ ರೈತರು ಬರುವುದರೊಳಗೆ ಸಚಿವರು ಮನೆಯಿಂದ ಹೊರಗೆ ಹೋಗಿದ್ದಾರೆ.

Advertisements

ಧರಣಿಯಲ್ಲಿ ಭಾಗಿಯಾಗಿರುವ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ ಈ ದಿನ.ಕಾಮ್‌ ಜೊತೆ ಮಾತನಾಡಿ, “ದೇವನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಹೋರಾಟಗಾರರಿಗೆ ಕೆ ಎಚ್‌ ಮುನಿಯಪ್ಪ ಅವರು ಲೋಕಸಭೆ ಚುನಾವಣೆ ಮುಗಿದ ಬಳಿಕ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಭೂ ಸ್ವಾಧೀನ ರದ್ದು ಪಡಿಸುತ್ತೇವೆ ಎಂದು ಭರವಸೆ ನೀಡಿದ್ದರು. ಲೋಕಸಭೆ ಚುನಾವಣೆ ಮುಗಿದು ಮೂರು ತಿಂಗಳಾದರೂ ಯಾವ ಕ್ರಮವೂ ಆಗಿಲ್ಲ. ಸಚಿವರಿಗೆ ತಾವು ಕೊಟ್ಟ ಭರವಸೆ ನೆನಪಿಸಲು ಬಂದಿದ್ದೇವೆ. ಅವರು ಬಂದು ನಮ್ಮ ಮನವಿ ಆಲಿಸುವವರೆಗೂ ನಾವು ತೆರಳುವುದಿಲ್ಲ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ದೇವನಹಳ್ಳಿ ಕೆಐಎಡಿಬಿ ಭೂಸ್ವಾಧೀನ: ರೈತರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವರೇ ಸಿದ್ದರಾಮಯ್ಯ?

“ಬಲವಂತವಾಗಿ ರೈತರ ಜಮೀನು ತೆಗೆದುಕೊಳ್ಳದಂತೆ ಭೂ ಸ್ವಾಧೀನ ರದ್ದು ಪಡಿಸಬೇಕು ಎಂದು ನಾವು ಮೂರು ವರ್ಷಗಳಿಂದ ಅನಿರ್ದಿಷ್ಟಾವಧಿ ಧರಣಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ನಾಡ ಕಚೇರಿ ಬಳಿ ನಡೆಸುತ್ತಿದ್ದೇವೆ. ಇಂದಿಗೆ ನಮ್ಮ ಧರಣಿಗೆ 901 ದಿನಗಳು. ಸಿಎಂ ಸಿದ್ದರಾಮಯ್ಯ ಅವರು ಹಿಂದೆ ವಿರೋಧ ಪಕ್ಷದಲ್ಲಿ ಇದ್ದಾಗ ಪ್ರತಿಭಟನಾ ಸ್ಥಳಕ್ಕೆ ಬಂದು ದೊಡ್ಡದಾಗಿ ಭಾಷಣ ಮಾಡಿ ಹೋದರು. ಈವರೆಗೂ ಅವರಿಂದ ಯಾವುದೇ ಕ್ರಮ ಆಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ರೈತರು ಬರುವ ವಿಷಯ ಸಚಿವ ಕೆ ಎಚ್‌ ಮುನಿಯಪ್ಪ ಅವರಿಗೆ ಮೊದಲೇ ಗೊತ್ತಿದೆ. ಆದರೂ ನಮ್ಮನ್ನು ನಿರ್ಲಕ್ಷಿಸಿ ಈಗ ಹೊರಗಡೆ ಹೋಗಿದ್ದಾರೆ. ನಾವು ಅವರು ಕೊಟ್ಟ ಭರವಸೆಯನ್ನು ನೆನಪಿಸಲು ಬಂದಿದ್ದೇವೆ ಅಷ್ಟೇ. ಸಚಿವರು ಬಂದು ನಮ್ಮ ಮನವಿಯನ್ನು ಕೇಳಿದ ಮೇಲೆಯೇ ನಾವು ಇಲ್ಲಿಂದ ಹೊರಡುತ್ತೇವೆ” ಎಂದು ಸಿ ಯಶವಂತ ಸ್ಪಷ್ಟಪಡಿಸಿದರು.

ಭೂಸ್ವಾಧಿನ ವಿರೋಧಿ ಹೋರಾಟ ಸಮಿತಿಯ ಸದಸ್ಯ ಕಾರಳ್ಳಿ ಶ್ರೀನಿವಾಸ್ ಈ ಬಗ್ಗೆ ಮಾತನಾಡಿ, “ದೇವನಹಳ್ಳಿ ತಾಲೂಕಿನ ಚೆನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳಲ್ಲಿರುವ 1777 ಎಕರೆ ಜಮೀನು ಭೂಸ್ವಾಧೀನ ಮಾಡಿಕೊಂಡಿರುವುದು ವಿರೋಧಿಸಿ ಕಳೆದ 900 ದಿನಗಳಿಂದ ಹೋರಾಟ ನಡೆಸುತ್ತಿದ್ದೇವೆ. ಇಂದು ಶಾಂತಿಯುತವಾಗಿ ನಮ್ಮ ಪ್ರತಿರೋಧವನ್ನ ವ್ಯಕ್ತಪಡಿಸಲು ನಮ್ಮ ಉಸ್ತುವಾರಿ ಮಂತ್ರಿಗಳಾದ ಕೆ.ಎಚ್,ಮುನಿಯಪ್ಪ ಅವರ ಮನೆ ಮುಂದೆ ಬಂದಿದ್ದೇವೆ. ಸವಾಜವಾದಿ ಹಿನ್ನೆಲೆಯಿಂದ ಬಂದಿರುವ ಸಿದ್ಧರಾಮಯ್ಯನವರು ದಲಿತರ ಪರ, ಹಿಂದುಳಿದವರ ಎಂದು ಹೇಳಿಕೊಂಡ ಬಂದ ಅವರು ಇಂದು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ವಿರೋಧ ಪಕ್ಷದ ನಾಯಕರಾಗಿದ್ದ ಸಮಯದಲ್ಲಿ ಸಿದ್ಧರಾಮಯ್ಯ ಅವರು ನಿಮ್ಮ ಜಮೀನನ್ನು ಉಳಿಸಿಕೊಳ್ಳಿ ನಿಮಗೆ ನಾವು ಬೆಂಬಲವಾಗಿರುತ್ತೇವೆ ಎಂದು ಮಾತು ಕೊಟ್ಟಿದ್ದ ಅವರು ಈಗ ಮಾತು ತಪ್ಪುವ ಹಾದಿಯಲ್ಲಿದ್ದಾರೆ. ಅವರ ಈ ನಡೆ ನಮಗೆ ಭ್ರಮನಿರಸ ಉಂಟುಮಾಡಿದೆ” ಎಂದಿದ್ದಾರೆ.

“ನಮ್ಮ ಭೂಮಿಯನ್ನ ಉಳಿಸಿಕೊಳ್ಳಲಿಕ್ಕೆ ನಾವು ಎಲ್ಲ ರೀತಿಯ ತ್ಯಾಗಕ್ಕೆ ಸಿದ್ಧವಾಗಿ ಬಂದಿದ್ದೇವೆ. ಕೂಡಲೇ ಉಸ್ತುವಾರಿ ಮಂತ್ರಿಗಳು ಈ ಭೂಸ್ವಾಧೀನ ಪ್ರಕ್ರಿಯೆಯನ್ನ ಕೈ ಬಿಡಿಸಿ, ಈ ತಾಲೂಕಿನ ಋಣವನ್ನ ತೀರಿಸಿಕೊಳ್ಳುವ ಕೆಲಸವನ್ನ ಮಾಡಬೇಕು” ಎಂದು ಹೇಳಿದ್ದಾರೆ.

ಚೆನ್ನರಾಯಪಟ್ಟಣದ ರೈತ ಮುನಿವೆಂಕಟಪ್ಪ ಈ ದಿನ.ಕಾಮ್ ಜತೆಗೆ ಮಾತನಾಡಿ, “ನಮ್ಮದು 2 ಎಕರೆ ಜಮೀನು ಇದೆ. ಈ ಭೂಮಿನೇ ನಂಬಿಕೊಂಡು ನಮ್ಮ ಕುಟುಂಬದಲ್ಲಿ 9 ಜನ ಬದುಕುತ್ತಿದ್ದೇವೆ. ನಮ್ಮ ಭೂಮಿಯನ್ನ ಕಿತ್ತುಕೊಳ್ಳಬೇಡಿ. ನಮ್ಮ ಜೀವನ ಹಾಳುಗುತ್ತೆ, ನಾವು ಅನಾಥರಾಗುತ್ತೇವೆ. ಕಾಂಗ್ರೆಸ್ ಸರ್ಕಾರ ಬಂದರೆ, ಭೂಮಿಯನ್ನ ಉಳಿಸಿಕೊಡತೀವಿ ಎಂದು ಹೇಳಿದ್ದರು. ಆದರೆ, ಇನ್ನೂ ಏನೂ ಹೇಳಿಲ್ಲ. ನಮ್ಮ ಇರುವ ಜಮೀನನ್ನ ಯಾಕೆ ಕಿತ್ತುಕೊಳ್ಳುತ್ತೀರಿ?” ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ರೈತ ನಂಜೇಗೌಡ ಈ ದಿನ.ಕಾಮ್ ಜತೆಗೆ ಮಾತನಾಡಿ, “2 ಎಕರೆ 10 ಗುಂಟೆ ಜಮೀನನ್ನ ನಂಬಿಕೊಂಡು ನಾವು 12 ಜನ ಬದುಕುತ್ತಿದ್ದೇವೆ. ಇಷ್ಟು ಜಮೀನಿನಲ್ಲಿ ಬದುಕುವುದು ಕೂಡ ಕಷ್ಟವಾಗಿದೆ. ನಾವು ಮಾಡುವುದೇ ವ್ಯವಸಾಯ. ವ್ಯವಸಾಯ ಬಿಟ್ಟು ಬೇರೆ ಕೆಲಸ ನಮಗೆ ಗೊತ್ತಿಲ್ಲ. ಕಳೆದ 900 ದಿನಗಳಿಂದ ನಮ್ಮ ಭೂಮಿಯನ್ನ ಉಳಿಸಿಕೊಳ್ಳಲು ನಾವು ಹೋರಾಟ ಮಾಡುತ್ತಿದ್ದೇವೆ. ಈ ಬಗ್ಗೆ ನಮಗೆ ಸಹಾಯ ಮಾಡುವಂತೆ ಸಚಿವರು, ಶಾಸಕರು ಎಲ್ಲರ ಮನೆಗೂ ಹೋಗಿದ್ದೇವೆ. ಕೆ.ಎಚ್ ಮುನಿಯಪ್ಪ ಅವರು ನಮ್ಮ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೀಗ, ಯಾರಿಂದಲೂ ಸ್ಪಂದನೆ ಇಲ್ಲ” ಎಂದಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಗಸ್ಟ್ 26ರಿಂದ ರಾಜ್ಯದಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಾದ್ಯಂತ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಆಗಸ್ಟ್ 26ರಿಂದ ಭಾರೀ ಮಳೆಯಾಗಲಿದೆ...

ಧರ್ಮಸ್ಥಳ ಪ್ರಕರಣ | ನನ್ನ ಬಂಧನ ರಾಜಕೀಯ ಪಿತೂರಿಯ ಭಾಗ: ಮಹೇಶ್ ಶೆಟ್ಟಿ ತಿಮರೋಡಿ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಸರ್ಕಾರದಿಂದ ನಷ್ಟ ಸರಿದೂಗಿಸಲಾಗದು, ರೈತರೇ ಕಷ್ಟಕ್ಕೆ ಒಗ್ಗಿಕೊಳ್ಳಬೇಕು: ಬಿಜೆಪಿ ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ

ಇತ್ತೀಚಿಗೆ ಆದ ಅತಿವೃಷ್ಟಿಯಿಂದ ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಲು...

Download Eedina App Android / iOS

X