ಖಾಸಗಿ ಶಾಲಾ ಬಸ್ಸುಗಳ ಚಾಲಕರ ಲೈಸೆನ್ಸ್ ಮತ್ತು ಅವರ ಅನುಭವವನ್ನು ಪರಿಶೀಲಿಸಿ ವಾಹನಗಳ ಚಾಲನೆಗೆ ಅವಕಾಶ ಮಾಡಿಕೊಡಬೇಕೆಂದು ವಿಜಯಪುರ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು ಒತ್ತಾಯಿಸಿದರು.
ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಖಾಸಗಿ ಶಾಲೆಯ ಮಕ್ಕಳ ಬಸ್ಸುಗಳ ಪರ್ಮಿಟ್ ಹಾಗೂ ಸದರಿ ಬಸ್ಸು, ವಾಹನಗಳ ಚಾಲಕರ ಲೈಸನ್ಸ್ ಹಾಗೂ ಅವರ ಅನುಭವವನ್ನು ಪರಶೀಲಿಸಿದ ನಂತರ ಬಸ್ಸು, ವಾಹನಗಳು ಚಾಲನೆಗೆ ಅನುಮತಿ ನೀಡಬೇಕು. ಜಿಲ್ಲೆಯ ಎಲ್ಲ ಸರಕಾರಿ ಶಾಲೆಗಳನ್ನು ಉನ್ನತ ದರ್ಜೆಗೆ ಏರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನ ಬಣ) ವಿಜಯಪುರ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ಎಲ್ಲ ಸಮುದಾಯದ ಶಾಲಾ ಮಕ್ಕಳ ಪಾಲಕರ ಪರವಾಗಿ, ಸಂಘಟನೆಯ ರಾಜ್ಯಾಧ್ಯಕ್ಷ ಪಿ.ಕೃಷ್ಣಗೌಡ ಅವರ ಆದೇಶದ ಮೇರೆಗೆ, ಜಿಲ್ಲೆಯ ಎಲ್ಲ ನಾಗರಿಕರ ಪರವಾಗಿ ಜಿಲ್ಲಾ ಪಂಚಾಯತಿ ಸಿಇಒಗೆ ಮನವಿ ಮಾಡುತ್ತೇವೆ. ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಖಾಸಗಿ ಶಾಲೆಗಳ ಮಕ್ಕಳ ಬಸ್ಸುಗಳು, ಇನ್ನಿತರ ವಾಹನಗಳ ಪರ್ಮಿಟ್, ಇನ್ಸುರೆನ್ಸ್ ಪಡೆಯುವುದು, ಸದರಿ ಬಸ್‌ಗಳು ಹಾಗೂ ವಾಹನಗಳ ಚಾಲಕರ ಲೈಸನ್ಸ್ ಹಾಗೂ ಕಡಿಮೆ ಎಂದರೂ 5 ವರ್ಷದ ಚಾಲನಾ ಅನುಭವ ಸರ್ಟಿಫಿಕೇಟ್‌ಗಳನ್ನು ಪಡೆದ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಚಾಲನೆಗೆ ಒಪ್ಪಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಖಾಸಗಿ ಹಾಗೂ ಸರ್ಕಾರಿ ಬಸ್ ಚಾಲಕರ ಬೇಜವಾಬ್ದಾರಿ ಮತ್ತು ಸರ್ಕಾರಿ ನಿಯಮಗಳನ್ನು ಪಾಲಿಸದೇ ಭಾರಿ ವೇಗವಾಗಿ ವಾಹನ ಚಲಾಯಿಸಿದ ಪರಿಣಾಮ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಹತ್ತಿರ ಲೋಯೋಲ ಶಾಲೆಯ ಖಾಸಗಿ ಶಾಲಾ ಮಕ್ಕಳ ಬಸ್ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ಸಿನ ಮಧ್ಯ ಗಂಭೀರ ಅಪಘಾತವಾಗಿತ್ತು. ಪರಿಣಾಮ 2 ಮಕ್ಕಳು ಸಾವನ್ನಪ್ಪಿ 17 ಮಕ್ಕಳು ಗಂಭೀರ ಗಾಯಕ್ಕೆ ಸಿಲುಕಿ, ಅದರಲ್ಲಿ ನಾಲ್ಕು ಮಕ್ಕಳ ಕೈ ಕಾಲುಗಳು ಕಟ್ ಆಗಿರುವ ಸ್ಥಿತಿ ನೋಡಿ ಎಲ್ಲ ಸಾರ್ವಜನಿಕರು ಚಿಂತಾಕ್ರಾಂತರಾಗಿದ್ದೇವೆ. ಮಕ್ಕಳ ಪೋಷಕರ ಪರಿಸ್ಥಿತಿ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅದಕ್ಕಾಗಿ, ತಕ್ಷಣ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ಒದಗಿಸಬೇಕು. ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿ ಕೂಡ ಇಂತಹ ಘೋರ ದುರಂತ ತಪ್ಪಿಸಲು ದಿಟ್ಟ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಜಿಲ್ಲೆಯ ಎಲ್ಲ ಸರಕಾರಿ ಶಾಲೆಗಳು ಉನ್ನತ ದರ್ಜೆಗೆ ಏರಿಸಲು, ಎಲ್ಲ ಶಾಲೆಯ ಕಟ್ಟಡಗಳ ಜೀರ್ಣೋದ್ದಾರಗೊಳಿಸಲು ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಲ್ಲ ಶಾಲೆಯ ಎಸ್.ಡಿ.ಎಮ್.ಸಿ ಸದಸ್ಯರು ಹಾಗೂ ಎಲ್ಲ ಶಾಲೆಯ ಮಾನ್ಯ ಮುಖ್ಯೋಪಾಧ್ಯಾಯರ ಸಭೆ ಆಯೋಜಿಸಿ, ಸರಕಾರವೇ ಎಲ್ಲವೂ ಮಾಡಲಿ ಎನ್ನುವ ಮನೋಭಾವ ಬಿಟ್ಟು, ಆಯಾ ಗ್ರಾಮಗಳ ಎಲ್ಲ ಸಮುದಾಯದ ಸಾರ್ವಜನಿಕರ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಎಲ್ಲರನ್ನು ಒಗ್ಗೂಡಿಸಿ ಹಾಗೂ ಆಯಾ ಶಾಲೆಯ ಎಲ್ಲ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಬೆಳಗಾವಿ | ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರದಿಂದ ಮೀನಮೇಷ: ದಲಿತ ಸಂಘರ್ಷ ಸಮಿತಿ ಆಕ್ರೋಶ
ಪ್ರತಿಭಟನೆಯಲ್ಲಿ ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷ ಲಕ್ಷ್ಮಣ್ ಕಾಂಬೋಗಿ, ವಿಜಯಪುರ ಜಿಲ್ಲಾ ಮುಖಂಡ ಜಯದೇವ ಸೂರ್ಯವಂಶಿ, ಗಿರೀಶ್ ಕಲಘಟಗಿ, ಲಿಂಗರಾಜ ಬಿದರಕುಂದಿ, ಸಂಕೇಶ್ ಪಟ್ಟಣದ, ಎಂ.ಆರ್.ಗಾರಿಕಾರ, ಮಲ್ಲಯ್ಯ ಹಿರೇಮಠ್ ಇತರರು ಭಾಗವಹಿಸಿದ್ದರು.