2019ರ ಜುಲೈನಲ್ಲಿ ದರ್ಶನ್ ಜೊತೆಗೂಡಿ ದೊಡ್ಡ ಬಜೆಟ್‌ನ ‘ಕರುಕ್ಷೇತ್ರ’ ಸಿನಿಮಾ ಮಾಡಿದ್ದ ಮುನಿರತ್ನ, ಅದೇ ವರ್ಷ ಸಿನಿಮಾದ ಆಚೆಗೂ ಭಾರೀ ಸುದ್ದಿಯಲ್ಲಿದ್ದರು. ಆಗ, ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಶಾಸಕನಾಗಿದ್ದ ಮುನಿರತ್ನ ಬಿಜೆಪಿ ಸೇರುವ ಮೂಲಕ, ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವಲ್ಲಿ ಪಾಲುದಾರಿಕೆ ಹೊಂದಿದ್ದರು.
ಬಿಜೆಪಿಗೆ ಪಕ್ಷಾಂತರ ಮಾಡಿದ್ದ ಮುನಿರತ್ನ, ಅಂದು ರಾಜಕೀಯವಾಗಿ ತಮ್ಮನ್ನು ಬೆಳೆಸಿದ ಡಿ.ಕೆ ಸುರೇಶ್ ಮಾತಿಗೂ ಮನ್ನಣೆ ಕೊಡಲಿಲ್ಲ. ಮುಂಬೈನ ಹೋಟೆಲ್ ಬಳಿ ಹೋಗಿ ಅಂಗಲಾಚಿದ ಡಿ.ಕೆ ಶಿವಕುಮಾರ್ ಅವರ ಕೋರಿಕೆಗೂ ಮುನಿರತ್ನ ಕರಗಲಿಲ್ಲ. ಬಿಜೆಪಿ ಸೇರಿದರು. ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕನಾಗಿ, ಸಚಿವರೂ ಆದರು.
ಈಗ, ಭ್ರಷ್ಟಾಚಾರ, ದಲಿತರು ಮತ್ತು ಒಕ್ಕಲಿಗರ ವಿರುದ್ಧದ ಜಾತಿ ನಿಂದನೆ ಆರೋಪದ ಮೇಲೆ ಜೈಲು ಸೇರಿದ್ದಾರೆ. ಮತ್ತೆ, ರಾಜ್ಯ ರಾಜಕಾರಣದಲ್ಲಿ ಸುದ್ದಿಯಾಗುತ್ತಿದ್ದಾರೆ. ದಲಿತರನ್ನು ಸೂ* ಮಕ್ಕಳು ಎಂದಿರುವ ಮುನಿರತ್ನ, ಒಕ್ಕಲಿಗರ ಪತ್ನಿಯನ್ನು ತಮ್ಮೊಂದಿಗೆ ಕಳಿಸಬೇಕೆಂಬ ಅಸಹ್ಯಕರ ಮಾತುಗಳನ್ನಾಡಿದ್ದು, ಅವರ ಆಡಿಯೋವನ್ನು ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಬಿಡುಗಡೆ ಮಾಡಿದ್ದಾರೆ. ಜೊತೆಗೆ, ಎಚ್‌ಐವಿ ಸೋಂಕಿತ ರಕ್ತವನ್ನು ಇಂಜೆಕ್ಟ್ ಮಾಡಲು ಯತ್ನಿಸಿದ್ದ ಆರೋಪ, ಮಹಿಳೆಯರನ್ನು ಬಳಸಿ ಹನಿಟ್ರ್ಯಾಪ್, ಬ್ಲ್ಯಾಕ್‌ಮೇಲ್, ಅತ್ಯಾಚಾರ ಪ್ರಕರಣಗಳೂ ಮುನಿರತ್ನ ವಿರುದ್ಧ ದಾಖಲಾಗಿವೆ.
ಅಂದಹಾಗೆ, ಮುನಿರತ್ನ ವಿರುದ್ಧದ ಆರೋಪಗಳು, ವಿವಾದಗಳು ಇತ್ತೀಚೆಗೆ ಮಾತ್ರವೇ ಕೇಳಿಬರುತ್ತಿರುವುದಲ್ಲ. ಮುನಿರತ್ನ ಓರ್ವ ನೀಚ ಎಂಬ ಅಭಿಪ್ರಾಯ ಇಡೀ ರಾಜರಾಜೇಶ್ವರಿ ನಗರ ಮತ್ತು ರಾಜಕೀಯ ವಲಯದಲ್ಲಿ ಹಿಂದಿನಿಂದಲೂ ಕೇಳಿಬರುತ್ತಿದೆ.
2010ಕ್ಕೂ ಮುನ್ನ ಮುನಿರತ್ನ ತುಂಡು ಗುತ್ತಿಗೆದಾರನಾಗಿದ್ದರು. ಚರಂಡಿ, ಕಾಂಪೌಂಡ್, ಸಣ್ಣ ಸೇತುವೆ ನಿರ್ಮಾಣಗಳ ಗುತ್ತಿಗೆ ಪಡೆದು ಕಾಮಗಾರಿ ನಡೆಸುತ್ತಿದ್ದರು. ಮುನಿರತ್ನಗೆ ಅವರ ತಮ್ಮ ರೌಡಿಶೀಟರ್ ಪಟ್ಟಿಯಲ್ಲಿ ಕುಖ್ಯಾತಿ ಪಡೆದಿದ್ದ ಕೊರಂಗು ಕೃಷ್ಣ (ಕೃಷ್ಣಮೂರ್ತಿ) ಎಂಬಾತನ ಭಾರೀ ಬೆಂಬಲವೂ ಇತ್ತು. ಆತ ಕೊಲೆ, ಸುಲಿಗೆ ಮಾಡಿ ಜೈಲನ್ನೂ ಸೇರಿದ್ದ. ಆತ ಹೊಡೆದು-ಬಡಿದು-ಕೊಲೆಗೈದು ಸಂಪಾದಿಸುತ್ತಿದ್ದ ಹಣ ಮುನಿರತ್ನರ ಗುತ್ತಿಗೆಗೆ ಬಂಡವಾಳವಾಗಿ ಹರಿದುಬರುತ್ತಿತ್ತು ಎಂಬ ಆರೋಪಗಳಿವೆ. ಬಿಬಿಎಂಪಿ ಗುತ್ತಿಗೆ ಮತ್ತು ರೌಡಿಶೀಟರ್ ಕೃಷ್ಣನಿಂದ ಬರುತ್ತಿದ್ದ ಹಣದಿಂದ ಮುನಿರತ್ನ ಪ್ರವರ್ಧಮಾನಕ್ಕೆ ಬಂದಿದ್ದರು. ಆ ಹಣವನ್ನು ಸಿನಿಮಾಗಳಿಗೆ ಹೆಚ್ಚಿನ ಬಡ್ಡಿದುಡ್ಡಿಗೆ ಸಾಲ ನೀಡಿಕೆ ಮಾಡಲು ಆರಂಭಿಸಿದ ಮುನಿರತ್ನ, ಸಿನಿಮಾ ಕ್ಷೇತ್ರದಲ್ಲಿಯೂ ನೆಲೆಯೂರಿದ್ದರು.
ಇದೆಲ್ಲದರ ನಡುವೆ, 2010ರಲ್ಲಿ ಯಶವಂತಪುರ ವಾರ್ಡ್‌ನಿಂದ ಕಾರ್ಪೊರೇಟರ್ ಆಗಿ ಬಿಬಿಎಂಪಿಗೆ ಆಯ್ಕೆಯಾದರು. ತಾವು ಕಾರ್ಪೊರೇಟರ್ ಆಗಿ ಆಯ್ಕೆಯಾದ ವರ್ಷವೇ (2010) ಅವರು ನಿರ್ಮಿಸಿದ್ದ ಕಾಂಪೌಂಡ್ ಕುಸಿದು 17 ವರ್ಷದ ವಿದ್ಯಾರ್ಥಿನಿಯೊಬ್ಬರು ಸಾವನ್ನಪ್ಪಿದ್ದರು. ಕಳಪೆ ಕಾಮಗಾರಿ ಆರೋಪದ ಮೇಲೆ ಮುನಿರತ್ನ ವಿರುದ್ಧ ದೂರು ಕೂಡ ದಾಖಲಾಗಿತ್ತು.

ಅದಾದ ಮೂರು ವರ್ಷಗಳ ಬಳಿಕ, 2013ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ವಿಧಾನಸಭಾ ಚುನಾವಣೆಗೆ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಸ್ಪರ್ಧಿಸಿ, ಶಾಸಕನಾಗಿ ಮೊದಲ ಬಾರಿಗೆ ಆಯ್ಕೆಯಾದರು. ಅದೇ ಚುನಾವಣೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿಗೆ ‘ಬೆದರಿಕೆ’ ಹಾಕಿದ ಆರೋಪದ ಮೇಲೆ ಮುನಿರತ್ನ ವಿರುದ್ಧ ಪ್ರಕರಣವೂ ದಾಖಲಾಗಿತ್ತು.
ಅಲ್ಲದೆ, 2017ರಲ್ಲಿ ಅಂತ್ಯದಲ್ಲಿ ಬಿಬಿಎಂಪಿ ಕಾರ್ಪೋರೇಟರ್ ಮಂಜುಳಾ ನಾರಾಯಣಸ್ವಾಮಿ ಮೇಲೆ ಮುನಿರತ್ನ ಬೆಂಬಲಿಗರು ಹಲ್ಲೆ ನಡೆಸಿದ್ದರು. ಆಗ, ಮುನಿರತ್ನ ವಿರುದ್ಧ ಭಾರೀ ಪ್ರತಿಭಟನೆಗಳು ನಡೆದವು.
ಜೊತೆಗೆ, 2018ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮುನಿರತ್ನ ವಿರುದ್ಧ ಎರಡು ವಿವಾದಗಳೂ ಮುನ್ನೆಲೆಗೆ ಬಂದಿದ್ದವು. 2018ರ ಮಾರ್ಚ್‌ನಲ್ಲಿ 1,500 ಕೋಟಿ ರೂಪಾಯಿ ನಕಲಿ ಬಿಲ್ ಹಗರಣಕ್ಕೆ ಸಂಬಂಧಿಸಿದಂತೆ ಮುನಿರತ್ನ ವಿರುದ್ಧ ಸಿಐಡಿ ಚಾರ್ಜ್‌ಶೀಟ್ ಸಲ್ಲಿಸಿತ್ತು. ಮಾತ್ರವಲ್ಲದೆ, ವಿಧಾನಸಭಾ ಚುನಾವಣೆಯ ಮತದಾನಕ್ಕೂ ಕೆಲವೇ ದಿನಗಳ ಮೊದಲು ಮುನಿರತ್ನ ಜೊತೆಗೆ ಸಂಬಂಧವಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಮುನಿರತ್ನ ಅವರೇ ಮತದಾರರ ಚೀಟಿಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಪರಿಣಾಮ, ಆರ್.ಆರ್ ನಗರ ಚುನಾವಣೆಯನ್ನು ಮುಂದೂಡಲಾಯಿತು.
ಅಂತಿಮವಾಗಿ 2019ರ ಆರಂಭದಲ್ಲಿ ಆರ್.ಆರ್ ನಗರ ಕ್ಷೇತ್ರಕ್ಕೆ ಮತದಾನ ನಡೆದು, ಮುನಿರತ್ನ 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಕ್ಷೇತ್ರವನ್ನು ಉಳಿಸಿಕೊಂಡರು. ಆದಾಗ್ಯೂ, ಮಂತ್ರಿಗಿರಿಗೆ ಆಸೆಬಿದ್ದು, 2019ರಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದ ಮುನಿರತ್ನ 17 ಮಂದಿ ಶಾಸಕರೊಂದಿಗೆ ಬಿಜೆಪಿ ಸೇರಿದರು. ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದರು.
2020ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ವಿರುದ್ಧ ಮುನಿರತ್ನ ಗೆಲುವು ಸಾಧಿಸಿದರು. ಬಿಜೆಪಿ ಸರ್ಕಾರದಲ್ಲಿ ತೋಟಗಾರಿಕಾ ಸಚಿವರೂ ಆದರು. ಆ ನಂತರ, ಮುನಿರತ್ನ ಮತ್ತು ಡಿ.ಕೆ ಸಹೋದರರ (ಶಿವಕುಮಾರ್ – ಸುರೇಶ್) ನಡುವೆ ಪೈಪೋಟಿ ಆರಂಭವಾಯಿತು. ಏತನ್ಮಧ್ಯೆ ಸಿನಿಮಾ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರೊಂದಿಗೆ ಸಂಬಂಧ ಕುದುರಿಸಿ, ಬೀಗರೂ ಆದರು.
ಗುತ್ತಿಗೆ, ಸಿನಿಮಾ, ರಾಜಕಾರಣದಿಂದಾಗಿ ಭಾರೀ ಹಣ ಸಂಪಾದಿಸಿರುವ ಮುನಿರತ್ನ, ಆರ್.ಆರ್ ನಗರ ಕ್ಷೇತ್ರದಲ್ಲಿ ತನ್ನದೇ ಪ್ರಾಬಲ್ಯ ಬೆಳೆಸಿಕೊಂಡಿದ್ದಾರೆ. ಚುನಾವಣೆಗಾಗಿ ಮುನಿರತ್ನ ಅವರ ದುಡ್ಡಿನ ಮೇಲೆ ಪಕ್ಷಗಳು ಅವಲಂಬಿತವಾಗಿವೆ ಎಂಬ ಮಾತುಗಳೂ ಇವೆ. ಅಲ್ಲದೆ, ಯಡಿಯೂರಪ್ಪ-ವಿಜಯೇಂದ್ರ, ಕುಮಾರಸ್ವಾಮಿ-ದೇವೇಗೌಡ, ಡಿ.ಕೆ ಶಿವಕುಮಾರ್-ಸುರೇಶ್ – ಈ ಮೂರೂ ಗುಂಪುಗಳನ್ನೂ ನಿಭಾಯಿಸಿ ಸೈ ಎನಿಸಿಕೊಂಡವರು. ಈ ಮೂರೂ ಗುಂಪುಗಳನ್ನೂ ಮೀರಿಸುವ ರಾಜಕಾರಣ ಮಾಡಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ನಾಯಕರೆನಿಸಿಕೊಂಡವರ ಒಡನಾಟ ಹೊಂದಿದ್ದು, ಮಂತ್ರಿಯಾಗಿದ್ದು ಮುನಿರತ್ನ ಪ್ರಭಾವಿ ಎನಿಸಿಕೊಳ್ಳಲು ಕಾರಣವಾಗಿವೆ. ಇದೆಲ್ಲವೂ, ಮುನಿರತ್ನಗೆ ರಾಜಕೀಯದಲ್ಲಿ ಒಂದಷ್ಟು ನೆಲೆ ತಂದುಕೊಟ್ಟಿದೆ.
ಈ ವರದಿ ಓದಿದ್ದೀರಾ?: ವಾಲ್ಮೀಕಿ ನಿಗಮ ಹಗರಣ | ಅಕ್ರಮ ಸ್ಪಷ್ಟ- ತನಿಖೆ ಮೂರು, ತಪ್ಪಿತಸ್ಥರು ಯಾರು?
ಕಾಂಗ್ರೆಸ್‌ನಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರನ್ನು ತೀವ್ರವಾಗಿ ಟೀಕಿಸುತ್ತಿದ್ದ ಮುನಿರತ್ನ, ಬಿಜೆಪಿ ಸೇರಿದ ಬೆನ್ನಲ್ಲೇ ತಮ್ಮ ಮಾತಿನ ವರಸೆಯನ್ನೇ ಬದಲಿಸಿದರು. ಮೋದಿ ಅವರನ್ನೇ ಪರಮಾತ್ಮ ಎಂಬಂತೆ ಮಾತನಾಡಲಾರಂಭಿಸಿದರು.
2023ರ ವಿಧಾನಸಭಾ ಚುನಾವಣೆಗೂ ಮುನ್ನ, ಡಿ.ಕೆ ಸಹೋದರರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಲು ಅರಂಭಿಸಿದರು. ವಿಧಾನಸಭಾ ಚುನಾವಣೆಯು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಮತ್ತು ತಮ್ಮ ನಡುವೆ ನಡೆಯುತ್ತಿಲ್ಲ; ಡಿ.ಕೆ ಸುರೇಶ್ ಮತ್ತು ತಮ್ಮ ನಡುವೆ ನಡೆಯುತ್ತಿದೆ ಎಂದರು. ಚುನಾವಣೆಯಲ್ಲಿ ಮುನಿರತ್ನಗೆ ಕುಸುಮಾ ಭಾರೀ ಪೈಪೋಟಿ ನೀಡಿದರು. ಕೂದಲೆಳೆಯ ಅಂತರದಲ್ಲಿ ಮುನಿರತ್ನ ಮತ್ತೆ ಗೆದ್ದರು.
ಲೋಕಸಭಾ ಚುನಾವಣೆಯಲ್ಲಿ ಸುರೇಶ್ ವಿರುದ್ಧ ಬಿಜೆಪಿ ಅಭ್ಯರ್ಥಿ, ದೇವೇಗೌಡರ ಅಳಿಯ ಸಿ.ಎನ್ ಮಂಜುನಾಥ್ ಗೆಲುವು ಸಾಧಿಸುವಲ್ಲಿ ಮುನಿರತ್ನ ನಿರ್ಣಾಯಕ ಪಾತ್ರ ವಹಿಸಿದ್ದರು. ಇದು, ಮುನಿರತ್ನ ಮತ್ತು ಡಿ.ಕೆ ಸಹೋದರರ ನಡುವಿನ ದ್ವೇಷವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿತು.
ಇದೆಲ್ಲದರ ನಡುವೆ, ದಲಿತರ ಜಾತಿ ನಿಂದನೆ ಮಾಡಿರುವ ಮುನಿರತ್ನ, ಒಕ್ಕಲಿಗರ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ. ಈ ಪ್ರಕರಣದ ಆಡಿಯೋ ಕೂಡ ವೈರಲ್ ಆಗಿದ್ದು, ಮುನಿರತ್ನ ಒಕ್ಕಲಿಗ ವಿರೋಧಿ ಎಂದು ಬಿಂಬಿಸಲು ಡಿ.ಕೆ ಸುರೇಶ್ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಮುನಿರತ್ನ, ಕೇವಲ ಇದೊಂದು ಆಡಿಯೋದಲ್ಲಿ ಮಾತ್ರವೇ ತನ್ನ ವಿಕೃತಿಯನ್ನು ಮೆರೆದಿಲ್ಲ. ಇಂತಹ ಹಲವಾರು ನಿರ್ದಶನಗಳು ಇವೆ ಎಂದು ಆರ್.ಆರ್ ನಗರದ ನಿವಾಸಿಗಳು ಹೇಳುತ್ತಾರೆ. ”ಮೂರು ಜನ ಹೆಣ್ಣು ಮಕ್ಕಳು, ಮೂವರು ಗಂಡು ಮಕ್ಕಳನ್ನ ನನ್ನ ಹಿಂದೆ ಬಿಟ್ಟು, ನಾನು ರೂಮ್‌ನಲ್ಲಿ ಬಟ್ಟೆ ಬದಲಿಸುವುದನ್ನು ವಿಡಿಯೋ-ಫೋಟೋ ತೆಗೆದುಕೊಂಡಿದ್ದರು. ಜ್ಯೂಸ್‌ನಲ್ಲಿ ನಿದ್ರೆ ಮಾತ್ರೆ ಕೊಟ್ಟು, ನಾನು ಯುವಕರೊಂದಿಗೆ ಸಲಿಗೆಯಿಂದ ಇದ್ದೇನೆ ಎಂಬಂತೆ ಫೋಟೋಗಳನ್ನು ತೆಗೆದುಕೊಂಡಿದ್ದರು. ಆ ಮೂಲಕ ಹನಿಟ್ರ್ಯಾಪ್ ಮಾಡಿ, ನನಗೆ ಬ್ಲಾಕ್‌ಮೇಲ್ ಮಾಡಿದ್ದರು. ಮಾತ್ರವಲ್ಲದೆ, ನಾನೇ ಯುವಕರನ್ನ ಬ್ಲಾಕ್‌ಮೇಲ್ ಮಾಡುತ್ತಿದ್ದೇನೆ ಅಂತ ಪೊಲೀಸರಿಗೆ ದೂರನ್ನೂ ಕೊಟ್ಟಿದ್ದರು” ಎಂದು ಆರ್.ಆರ್ ನಗರದ ಮಹಿಳೆಯೊಬ್ಬರು ಆರೋಪಿಸಿದ್ದಾರೆ.
”ನನ್ನನ್ನ ಬಂಧಿಸಿದ್ದ ಪೊಲೀಸರು, ಪೊಲೀಸ್ ಠಾಣೆಗೂ ಕರೆದೊಯ್ಯಲಿಲ್ಲ. ನ್ಯಾಯಾಧೀಶರ ಮುಂದೆಯೂ ಹಾಜರುಪಡಿಸಲಿಲ್ಲ. ಬದಲಾಗಿ, ಮುನಿರತ್ನ ಅವರ ಮನೆಗೆ ಕರೆದೊಯ್ದರು. ಅಲ್ಲಿ, ‘ನಾನು ಹೇಳಿದಂತೆ ಕೇಳಬೇಕು. ಇಲ್ಲವೆಂದರೆ, ನೀನು ಇನ್ನೂ ಸಾಕಷ್ಟು ಅನುಭವಿಸಬೇಕಾಗುತ್ತದೆ’ ಅಂತ ಮುನಿರತ್ನ ನನಗೆ ಬೆದರಿಕೆ ಹಾಕಿದ್ದರು” ಎಂದು ಆಕೆ ದೂರಿದ್ದಾರೆ.
ಇದೊಂದೇ ಅಲ್ಲ, ಇಂತಹ ಹಲವು ಕ್ರಿಮಿನಲ್ ಐಡಿಯಾಗಳನ್ನು ರೂಪಿಸುವಲ್ಲಿ ಮುನಿರತ್ನ ಚಾಣಾಕ್ಷನಾಗಿದ್ದಾರೆ. ಹನಿಟ್ರ್ಯಾಪ್, ಎಚ್‌ಐವಿ ಸೋಂಕಿತ ರಕ್ತ ಇಂಜೆಕ್ಟ್ ಮಾಡುವುದು, ಯುವಕ-ಯುವತಿಯನ್ನು ಬಳಸಿ ಸಿಡಿ ಮಾಡುವುದು, ಸಿಡಿ ಬಳಸಿ ಬ್ಲಾಕ್‌ಮೇಲ್ ಮಾಡುವುದು, ಸರ್ಕಾರಿ ಅಧಿಕಾರಿಗಳನ್ನ ಮನೆಗೆ ಕರೆಸಿ ರೂಮ್‌ನಲ್ಲಿ ಊಟ-ತಿಂಡಿ ಕೊಡದೆ ಕೂಡಿಹಾಕಿ ಹಿಂಸೆಕೊಟ್ಟು ಫೈಲ್‌ಗಳಿಗೆ ಸಹಿ ಮಾಡಿಸಿಕೊಳ್ಳುವಂತಹ ನಾನಾ ಪ್ರಕರಣಗಳಲ್ಲಿ ಮುನಿರತ್ನ ಭಾಗಿಯಾಗಿದ್ದಾರೆ ಎಂಬ ಆರೋಪಗಳೂ ಇವೆ.
ಈಗ ಮುನಿರತ್ನ ಅವರ ಪಾಪದ ಕೊಡ ತುಂಬಿದ್ದು, ಹೊರಬಂದ ಒಂದು ಆಡಿಯೋದಿಂದ ಮುನಿರತ್ನ ಜೈಲು ಸೇರಿದ್ದಾರೆ. ಇಂತಹ ಇನ್ನೂ ಹಲವಾರು ಪ್ರಕರಣಗಳು ಹೊರಬರಲಿವೆ. ಮುಂದಿನ ದಿನಗಳಲ್ಲಿ ಮುನಿರತ್ನ ಅವರ ಇನ್ನೂ ಹಲವಾರು ಪ್ರಕರಣಗಳು ಬೆಳಕಿಗೆ ಬರಲಿವೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಮುಂದಿನ ದಿನಗಳಲ್ಲಿ ಏನಾಗಲಿದೆ, ಕಾದುನೋಡೋಣ.