ಧ್ಯಾನವನ್ನು ಹೇಳಿಕೊಡುವುದನ್ನೆ ಬ್ಯುಸಿನೆಸ್ ಮಾಡಿಕೊಂಡಿರುವ ಧರ್ಮಗುರುಗಳಿರುವ ಈ ಕಾಲದಲ್ಲಿ ಬುದ್ಧನ ಸರಳ ಧ್ಯಾನ ವಿಧಾನಗಳನ್ನು 'ಧಮ್ಮಯಾನ' ಪುಸ್ತಕದಲ್ಲಿ ಲೇಖಕ ಮೂಡ್ನಕೂಡು ಚಿನ್ನಸ್ವಾಮಿಯವರು ವಿವರಿಸಿದ್ದಾರೆ. ಈ ಧ್ಯಾನಗಳು ಮನಸ್ಸಿನ ಆಲೋಚನೆಗಳನ್ನು ಸರಿದಾರಿಗೆ ತರಲು ಸಹಕಾರಿಯಾಗಿವೆ. ನಮ್ಮನ್ನು ನಾವು ಅರಿಯಲು ಪುಸ್ತಕವು ಒಬ್ಬ ಆಪ್ತ ಸಮಾಲೋಚಕನಂತೆ ನಮ್ಮೊಂದಿಗೆ ಸಂವಾದಕ್ಕಿಳಿಯುತ್ತದೆ.
ಧಮ್ಮಯಾನ- ಈ ಪುಸ್ತಕ ಸಿಕ್ಕಿದ್ದು ಬದುಕಿಗೆ ಒಬ್ಬ ಆಪ್ತ ಸಮಾಲೋಚಕ ಸಿಕ್ಕಂತಾಗಿದೆ. ಅಲ್ಲಿ ಇಲ್ಲಿ ಬೆಟ್ಟ ಕಾಡು, ಹಳ್ಳ ಕಣಿವೆಗಳಲ್ಲಿ ಬೇಕಾಬಿಟ್ಟಿಯಾಗಿ ಹರಿದು ಸಮುದ್ರ ಸೇರುವ ಅನಿರ್ದಿಷ್ಟವಾದ ಜೀವನವೆಂಬ ನದಿಗೆ ಒಂದೆಡೆ ಅಣೆಕಟ್ಟೆ ಕಟ್ಟಿ ಕಾಲುವೆಗಳ ಮೂಲಕ ಹರಿಸಿ ಕೃಷಿ ಮಾಡಿ ಜೀವ ಸಂಕುಲಗಳಿಗೆ ಸಾರ್ಥಕವಾಗಿ ನೆರವಾಗಿ, ನಿಧಾನವಾಗಿ ಸಮುದ್ರಕ್ಕೆ ಹರಿಯುವಂತೆ ಮಾಡುವ ಕ್ರಮಗಳು ನಿಮ್ಮ ಬದುಕಿಗೂ ಬೇಕೆನಿಸಿದರೆ ಈ ಪುಸ್ತಕ ಓದಿ.
ಈ ಮೇಲಿನ ಒಗಟನ್ನು ಬಿಡಿಸಿ ಹೇಳಬೇಕೆಂದರೆ, ನಮ್ಮ ಅನಿರ್ದಿಷ್ಟ ದುಃಖಮಯವಾದ ಬದುಕನ್ನು ಆದಷ್ಟೂ ಸರಳ ಸುಲಭಗೊಳಿಸಿಕೊಳ್ಳಲು ಸಂತೋಷದ ಕೃಷಿ ಮಾಡಲು ನಮ್ಮನ್ನು ನಾವು ಆರಿಯಬೇಕು. ನಮ್ಮನ್ನು ನಾವು ಅರಿಯಲು ಧಮ್ಮಯಾನ ಪುಸ್ತಕವು ಒಬ್ಬ ಆಪ್ತ ಸಮಾಲೋಚಕನಂತೆ ನಮ್ಮೊಂದಿಗೆ ಸಂವಾದಕ್ಕಿಳಿಯುತ್ತದೆ. ನಮ್ಮ ನಂಬಿಕೆಗಳು, ನಮ್ಮ ಸಂಸ್ಕೃತಿಯ ಪ್ರಭಾವಗಳು ಅವುಗಳಿಂದ ಹುಟ್ಟುವ ನಮ್ಮ ಆಲೋಚನೆಗಳು ಅವುಗಳ ಪರಿಣಾಮಗಳು ಇವೆಲ್ಲವನ್ನೂ ನಮ್ಮೊಳಗೆ ಪ್ರಶ್ನಿಸಿಕೊಳ್ಳುತ್ತಾ ಸಂವಾದಿಸುತ್ತಾ ಸಾಗುತ್ತದೆ. ಇದೊಂದು ಧಾರ್ಮಿಕ ಪುಸ್ತಕವಾಗಿ ನಾನು ನೋಡ ಬಯಸುವುದಿಲ್ಲ. ತಮ್ಮ ಸ್ವಾಸ್ಥ ಆಲೋಚನೆಗಳನ್ನು ರೂಪಿಸಿಕೊಳ್ಳಲು ಎಲ್ಲಾ ಧರ್ಮದವರಿಗೂ ಈ ಪುಸ್ತಕ ಸಹಾಯವಾಗುತ್ತದೆ. ಇದೊಂದು ಮನೋವೈಜ್ಞಾನಿಕ ಪುಸ್ತಕ. ಪುಸ್ತಕವು ಓದುಗನೊಂದಿಗೆ ಸಂವಾದ ನಡೆಸುವುದರಿಂದ ನಮ್ಮ ಹೃದಯದೊಳಗೊಂದು ತಣ್ಣಗೆ ಮಳೆ ಬಂದಂತೆನಿಸುತ್ತದೆ.
ಯಾರೊಳಗೆ ದುಃಖವಿಲ್ಲ? ಎಲ್ಲರೊಳಗೂ ಇರುತ್ತದೆ. ಯಾರಿಗೆ ದುಃಖ ಬೇಕು ಎಂದರೆ ಯಾರಿಗೂ ಬೇಡ. ಇಂತಹ ದುಃಖಕ್ಕೆ ಕಾರಣಗಳು, ದುಃಖ ನಿರೋಧಕಗಳು, ದುಃಖ ನಿರೋಧಕ ಬುದ್ಧರ ಮಾರ್ಗಗಳು ನಮ್ಮ ಅರಿವನ್ನು ವಿಸ್ತರಿಸುತ್ತವೆ. ಕಾರಣ ಪರಿಣಾಮಗಳನ್ನು ಒಮ್ಮೆ ಅರಿತವರು ಸಂಕೀರ್ಣವಾದ ಬದುಕನ್ನು ಸುಗಮಗೊಳಿಸಿಕೊಳ್ಳಲು ಮುಂದಾಗುತ್ತಾರೆ. ಈ ಪುಸ್ತಕದಲ್ಲಿ ಅದಕ್ಕೆ ಸಂಪೂರ್ಣವಾದ ಮಾಹಿತಿ ಸಿಗುತ್ತದೆ.
ಬುದ್ಧರ ಹುಟ್ಟು, ಕಾಲ, ಜ್ಞಾನೋದಯದ ನಂತರ ಧರ್ಮೋಪದೇಶ, ಸಂಘ ಇನ್ನಿತರ ಬೌದ್ಧ ಧರ್ಮ ಕುರಿತ ಮಾಹಿತಿಯು ಪುಸ್ತಕದಲ್ಲಿ ಸಿಗುತ್ತದೆ. ಲೇಖಕರಾದ ಮೂಡ್ನಾಕೂಡು ಚಿನ್ನಸ್ವಾಮಿಯವರು ಮೂಲ ಮಾಹಿತಿಯನ್ನು ಯಥಾವತ್ತಾಗಿ ತಿಳಿಸಿರುವುದರಿಂದ ಬೌದ್ಧ ಧರ್ಮ ಅಧ್ಯಯನ ಮಾಡುವವರಿಗೂ ಇದೊಂದು ಒಳ್ಳೆಯ ಹ್ಯಾಂಡ್ ಬುಕ್.
ಧಮ್ಮಪದದ ಮೊಟ್ಟ ಮೊದಲ ಗಾಥೆಯೆ ಮನಸ್ಸಿನ ಬಗ್ಗೆ ಹೇಳುತ್ತದೆ. ”ಮನಸ್ಸು ಮಾನಸಿಕ ಸ್ಥಿತಿಗಳ ಮೂಲ, ಮನಸ್ಸೇ ಅವುಗಳ ಮುಂದಾಳು ಮನಸ್ಸಿನಿಂದಲೇ ಅವುಗಳ ನಿರ್ಮಿತಿ, ಒಬ್ಬನು ಪ್ರಸನ್ನವಾದ ಮನಸ್ಸಿನಿಂದ ಮಾತಾಡಿದರೆ ಅಥವಾ ಕಾರ್ಯ ಮಾಡಿದರೆ ಎಂದಿಗೂ ಬಿಡದೆ ನೆರಳು ಹಿಂಬಾಲಿಸುವ ಹಾಗೆ ಸುಖವು ಆತನನ್ನು ಹಿಂಬಾಲಿಸುತ್ತದೆ.” ಎಲ್ಲಕ್ಕೂ ಕಾರಣ ನಮ್ಮ ಆಲೋಚನೆಗಳು. ಈ ಆಲೋಚನೆಗಳು ರೂಪುಗೊಳ್ಳುವ ಮೂಲ ಕಾರಣಗಳು, ಆ ಆಲೋಚನೆಗಳೇ ನಮ್ಮ ನಮ್ಮ ಮನಸ್ಥಿತಿಯನ್ನ ರೂಪಿಸಿ ನಮ್ಮ ವರ್ತನೆಗಳಿಗೆ ಕಾರಣವಾಗಿವೆ. ಇಂತಹ ಆಲೋಚನೆಗಳು ನಮ್ಮಲ್ಲಿ ಬರುವ ಕಾರಣವನ್ನು ಅರಿಯುವುದು, ಅವುಗಳನ್ನು ನಿರ್ವಹಿಸುವುದು ಬಹಳ ಮುಖ್ಯ. ಇಲ್ಲದೆ ಹೋದರೆ ದುಃಖವೇ ನರಳಾಟವಾಗಿ ನಮ್ಮ ನಿತ್ಯದ ಬದುಕನ್ನು ನರಕವನ್ನಾಗಿಸುತ್ತದೆ. ಆಲೋಚನೆಗಳನ್ನು ಅರಿತು ಅವುಗಳನ್ನು ಸರಿಯಾಗಿ ನಿರ್ವಹಿಸಿ ನಾವೆ ನಿತ್ಯ ಸ್ವರ್ಗವನ್ನು ಸೃಷ್ಟಿಸಿಕೊಳ್ಳುವುದು ಹೇಗೆಂದು ಬುದ್ಧರು ತೋರಿಸಿದ ದಾರಿಗಳು ಹೃದಯವನ್ನು ತಟ್ಟುತ್ತವೆ. ಇಲ್ಲಿರುವ ಪ್ರಸಂಗಗಳು, ಬುದ್ಧರ ಕಥೆಗಳು ನಮ್ಮ ಅರಿವಿನ ಕಣ್ಣು ತೆರೆಸುತ್ತವೆ.
ಈ ಕಥೆಗಳ ಮೂಲಕ ತಮ್ಮ ವಿಚಾರವನ್ನು ಒಪ್ಪಿಸುವ ಬುದ್ಧರ ಕ್ರಮ ತುಂಬಾ ಇಷ್ಟವಾಗುತ್ತದೆ. ನನಗೆ ಇಷ್ಟವಾಗಿದ್ದು ಬುದ್ದರ ಸಂವಾದ ಮಾಡುವ ಗುಣ ಮತ್ತು ರೀತಿ. ಭಿನ್ನ ಭಿನ್ನವಾದ ನಂಬಿಕೆಗಳನ್ನು ಹೊಂದಿರುವ ಜನರೊಂದಿಗೆ ಅವರು ಸಂವಾದ ಮಾಡುತ್ತಿದ್ದರು. ದೇವರ ನಂಬಿಕೆ, ಸ್ವರ್ಗ ನರಕಗಳ ನಂಬಿಕೆ, ಸಾಮಾಜಿಕ ಏಣಿ ಶ್ರೇಣಿ ವ್ಯವಸ್ಥೆ, ಶ್ರೇಷ್ಠ ಕನಿಷ್ಠ, ಮುಂತಾದ ಭಿನ್ನ ಭಿನ್ನ ನಂಬಿಕೆ ಹೊಂದಿದ ಜನರ ಜೊತೆಗೆ ಸಂವಾದಕ್ಕಿಳಿದು ಅವರು ಅರ್ಥಮಾಡಿಸುತ್ತಿದ್ದರು. ಈ ಪ್ರಕ್ರಿಯೆಯನ್ನು ಎಲ್ಲರನ್ನೂ ಗೆಲ್ಲಿಸುವ ಪ್ರಕ್ರಿಯೆ ಎಂದು ಹೇಳುತ್ತೇವೆ. ಶೋಷಿತನೂ ಶೋಷಕನೂ ಇಬ್ಬರೂ ದುಃಖದಲ್ಲಿದ್ದಾರೆ. ಇಬ್ಬರಿಗೂ ಅದರಿಂದ ಹೊರಬರುವ ದಾರಿಯನ್ನು ಬುದ್ಧರು ತೋರಿದ್ದರು. ಆದ್ದರಿಂದಲೇ ಬೌದ್ಧ ಧರ್ಮ ಅಂದು ಭಾರತ ದೇಶದ ಉದ್ದಗಲ ಹರಡಿತ್ತು. ಇಂದು ಸಂವಾದ ಮಾಡಲು ಸಾಧ್ಯವಾಗದ ಪರಿಸ್ಥಿತಿ ಸಮಾಜದಲ್ಲಿದೆ. ಆದರೆ ಅಂದು ಬ್ರಾಹ್ಮಣರೊಂದಿಗೆ, ಮೇಲ್ಜಾತಿ ಎನ್ನುವವರ ಜೊತೆಗೆ ಸಂವಾದ ಸಾಧ್ಯವಾಗುತ್ತಿತ್ತು. ಆದರೆ ಇಂದು ಸಂವಾದವೆ ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದೇವೆ. ಅಸ್ಪೃಶ್ಯನಾದ ಸುನೀತನಿಗೆ ಭಿಕ್ಕು ಮಾಡಿದ ರೀತಿಯನ್ನು ನೋಡಿದಾಗ ಬುದ್ಧರು ಒಬ್ಬ ಗ್ರೇಟ್ ಫೆಸಿಲಿಟೇಟರ್ ಎನಿಸಿತು.
ಕಾರಣ ಪರಿಣಾಮಗಳ ವಿಚಾರವಂತೂ ನಮ್ಮ ಒಳಗಣ್ಣನ್ನು ತೆರೆಸುತ್ತದೆ. ಕಾರಣದಿಂದ ಪರಿಣಾಮ, ಪರಿಣಾಮದಿಂದ ಕಾರಣ, ಇಂತಹ ಒಂದು ಲೂಪ್‌ನಲ್ಲಿ ನಮ್ಮ ನಿತ್ಯದ ಬದುಕು ಸಿಕ್ಕಿರುತ್ತದೆ. ಇಂತಹ ಲೂಪ್‌ನಿಂದ ನಿಧಾನವಾಗಿ ಹೊರಬರಲು ‘ಕಾರಣ ಪರಿಣಾಮ’ದ ವಿಚಾರ ಅರಿಯುವುದು ಸಹಕಾರಿಯಾಗಿದೆ.
ಇದನ್ನು ಓದಿದ್ದೀರಾ?: ‘ವಚನ ಸಂಸ್ಕೃತಿ’ ಸನಾತನಿಗಳಿಗೆ ಎಂದೆಂದಿಗೂ ಮಗ್ಗಲು ಮುಳ್ಳು…
ನಾನೊಬ್ಬ ಜೀವನ ಕೌಶಲ್ಯ ಸುಗಮಗಾರರನಾಗಿ ಬುದ್ಧರೇ ಮೊದಲ ಜೀವನ ಕೌಶಲ್ಯ ಸುಗಮಗಾರರೆನಿಸಿದೆ (ಲೈಫ್ ಸ್ಕಿಲ್ಸ್ ಫೆಸಿಲಿಟೇಟರ್). ಈ ಸುಗಮಗಾರಿಕೆಯಲ್ಲಿ ಅವರು ಮಾತನಾಡುವ ರೀತಿ ಇದೆಯಲ್ಲ ಅದು ಸುಗಮಗಾರಿಕೆಯ ಭಾಷೆ. ಎದುರಿಗಿರುವ ವ್ಯಕ್ತಿಯು ತನ್ನ ಅಹಂನಿಂದ ಒಂದು ಸಿಡಿಲಿನಂತಹ ಪ್ರಶ್ನೆಯನ್ನು ಎಸೆದಾಗ, ಅದನ್ನು ತಾಗಿಸಿಕೊಳ್ಳದೆ ನಯವಾಗಿ ಹಿಡಿದು. ಅವನ ಅಹಂಕಾರಕ್ಕೂ ತಾಗದಂತೆ, ‘ಇರಬಹುದು, ಇಲ್ಲದಿರಲೂಬಹುದು’ ಎಂಬಂತೆ ನಯವಾಗಿ ಅವನ ಉದ್ದೇಶವನ್ನು ಪಕ್ಕಕ್ಕೆ ಸರಿಸಿ, ಆ ವ್ಯಕ್ತಿಯನ್ನು ಸಂವಾದಕ್ಕಿಳಿಸುವ ಬುದ್ಧರ ಕೌಶಲ್ಯವನ್ನು ನಾನು ಮೆಚ್ಚಿದ್ದೇನೆ. ಈ ಸಂವಾದದಲ್ಲಿ ಏನಾದರೂ ಹೊಸದು ಹುಟ್ಟುತ್ತದೆ. ಪರ ವಿರೋಧಗಳ ವಾದವೇ ಒಂದು ಲೂಪ್. ಅಲ್ಲಿ ಯಾವುದೇ ಒಂದು ತಾರ್ಕಿಕ ಅಂತ್ಯಕ್ಕೆ ಬರಲು ಅಹಂ ಅವಕಾಶ ನೀಡದು. ಆದ್ದರಿಂದ ಬುದ್ಧರು ಅಂತಹ ವ್ಯರ್ಥ ಚರ್ಚೆಗಳಿಂದ ನಯವಾಗಿ ತಪ್ಪಿಸಿಕೊಂಡು ಸಂವಾದಕ್ಕಿಳಿಸುತ್ತಿದ್ದುದ ನಾನು ಕಂಡೆ. ಇಂದು ಅನೇಕ ಜೀವನ ಕೌಶಲ್ಯಗಳ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಸ್ವ ಅರಿವು, ಅನುಭೂತಿ, ಸೃಜನಶೀಲ ಚಿಂತನೆ, ನಾಯಕತ್ವ ವಹಿಸುವುದು, ಭಾವನೆಗಳ ಅರಿವು, ಗುಂಪಿನಲ್ಲಿ ಕೆಲಸ ಮಾಡುವುದು, ಆಲಿಸುವುದು ಇಂತಹ ಅನೇಕ ಕೌಶಲ್ಯಗಳನ್ನು ಬುದ್ಧರಲ್ಲಿ ನಾವು ನೋಡಬಹುದು. ಅನೇಕ ಸನ್ನಿವೇಶ, ಕಥೆಗಳಲ್ಲಿ ಇವುಗಳನ್ನು ನಾನು ನೋಡಿದ್ದೇನೆ. ಸುಗಮಗಾರಿಕೆಯು ಪ್ರಕ್ರಿಯೆಗೆ ಹೆಚ್ಚು ಮಹತ್ವ ನೀಡುತ್ತದೆ. ಅದನ್ನು ಬುದ್ದರ ವಿಧಾನದಲ್ಲೂ ನೋಡಬಹುದು. ”ಜೀವನವೆಂದರೆ ಅದು ಆಗುವುದು” ಎನ್ನುವ ಬುದ್ಧರ ಮಾತಿನಲ್ಲೂ ಇದೆ. ಅನೇಕ ಫೆಸಿಲಿಟೇಶನ್ ತಂತ್ರಗಳನ್ನು ಬುದ್ಧರು ಬಳಸಿದ್ದಾರೆ. ಇದನ್ನು ಜೀವನಕೌಶಲ್ಯಗಳ ದೃಷ್ಟಿಯಿಂದ ವಿಶೇಷವಾಗಿ ಅಧ್ಯಯನ ಮಾಡಬಹುದಾದಂತಹ ಕೃತಿ ಇದು.
ದೇವರ ಬಗ್ಗೆ ಹೆಚ್ಚು ಚರ್ಚೆಗಿಳಿಯದೆ. ಸ್ವರ್ಗ ನರಕ ಇಲ್ಲ, ಪ್ರಶ್ನಿಸದೆ ಒಪ್ಪಿಕೊಳ್ಳಬೇಡ, ನಿನಗೆ ನೀನೆ ಅರಿವು, ಅಸವಗಳು, ಮೈಂಡ್ ಫುಲ್ ನೆಸ್, ಪಂಚ ನೀವರಣಗಳು, ಆರ್ಯ ಸತ್ಯಗಳು, ಪಂಚಶೀಲಗಳು ಇಂತಹ ಬುದ್ಧರ ವಿವೇಕಗಳು ದಿನಕ್ಕೊಂದಾದರೂ ಬರೆದು ಮನೆಯಲ್ಲಿ ಅಂಟಿಸಿ ನೋಡುವ ಪ್ರಯತ್ನ ಮಾಡುತ್ತಿದ್ದೇನೆ. ಅವುಗಳನ್ನು ಪುಸ್ತಕದಲ್ಲಿ ಅಂಡರ್ ಲೈನ್ ಮಾಡಿ ಇಟ್ಟಿದ್ದೇನೆ. ಇಲ್ಲಿ ಓದಿದ ವಿಷಯಗಳು ಮರೆತು ಹೋಗುತ್ತವೆ. ಅವುಗಳನ್ನು ನಿರಂತರ ಪ್ರಜ್ಞಾಪೂರ್ವಕವಾಗಿ ಅಭ್ಯಾಸ ಮಾಡಲು ಸಹಕಾರಿಯಾಗಲಿವೆ.
‘ಬುದ್ಧರ ಧರ್ಮ ಸ್ವೀಕಾರ ಮಾಡಿದ್ದೇವೆ’ ಎಂದು ಹೇಳಿಕೊಳ್ಳುವ ಅನೇಕರನ್ನು ನಾನು ನೋಡಿದ್ದೇನೆ. ನೀವೆಲ್ಲರೂ ಮೊದಲು ಈ ಪುಸ್ತಕವನ್ನು ಓದಲೇಬೇಕೆಂದು ನಾನು ತಾಕೀತು ಮಾಡುತ್ತೇನೆ. ಧರ್ಮ ಸ್ವೀಕಾರಕ್ಕಿಂತ ಹೆಚ್ಚು ಮಹತ್ವದ್ದು ಅವರ ವಿಚಾರಗಳನ್ನು ಎದೆಯಲ್ಲಿ ಅನುಷ್ಠಾನ ಮಾಡಿಕೊಳ್ಳುವುದು. ಹೀಗೆ ಎದೆಯಲ್ಲಿ ಅನುಷ್ಠಾನ ಮಾಡಿಕೊಳ್ಳಲು ಈ ಪುಸ್ತಕ ನಿಮಗೆ ಸಹಾಯಕವಾಗುತ್ತದೆ. ಧರ್ಮದ ಉದ್ದೇಶವೇನೆಂದು ಹೇಳುವಾಗ ಬುದ್ದರು ”ದುಖಃಕ್ಕೆ ಅಸಮತೆಯೆ ಮೂಲ ಕಾರಣ, ಋಜುಮಾರ್ಗವು ಅಸಮತೆಯನ್ನು ದೂರ ಮಾಡುತ್ತದೆ. ಆದಕಾರಣ ಧರ್ಮಗಳು ಕೇವಲ ಉಪದೇಶ ನೀಡದೆ ಋಜುತ್ವವನ್ನು ಅಳವಡಿಸಿಕೊಂಡು ಅದನ್ನು ಪಾಲಿಸುವಂತೆ ಮನಸ್ಸಿನಲ್ಲಿ ಮನನ ಮಾಡಿಸಬೇಕು” ಎಂದು ಹೇಳುತ್ತಾರೆ. ಇದನ್ನು ಇಂದು ಅಸಮಾನತೆಗಾಗಿ ಹೋರಾಡುವ ನನ್ನ ಸಂಗಾತಿಗಳೆಲ್ಲಾ ಅರಿಯಬೇಕಾಗಿದೆ.
ಒಡೆದು ಆಳುವ ಉದ್ದೇಶದಿಂದ ಬದಲಾಗಿರುವ ಭಾರತದ ಸಾಂಸ್ಕೃತಿಕ ರಾಜಕಾರಣದ ಈ ಸನ್ನಿವೇಶದಲ್ಲಿ, ಬುದ್ಧ ಧರ್ಮವು ಎಲ್ಲರನ್ನೂ ಒಳಗೊಂಡು ಕಟ್ಟಬಹುದಾದ ದಾರಿಯನ್ನು ತೋರುತ್ತದೆ. ಪುಸ್ತಕವು ಒಂದು ಅಂತಹ ಸಾಧ್ಯತೆಗಳ ಒಳನೋಟಗಳನ್ನು ನೀಡುತ್ತದೆ.
ಧ್ಯಾನವನ್ನು ಹೇಳಿಕೊಡುವುದನ್ನೆ ಬ್ಯುಸಿನೆಸ್ ಮಾಡಿಕೊಂಡಿರುವ ಧರ್ಮಗುರುಗಳಿರುವ ಈ ಕಾಲದಲ್ಲಿ ಬುದ್ಧರ ಸರಳ ಧ್ಯಾನ ವಿಧಾನಗಳನ್ನು ಪುಸ್ತಕದಲ್ಲಿ ಲೇಖಕರು ವಿವರಿಸಿದ್ದಾರೆ. ಈ ಧ್ಯಾನಗಳು ಮನಸ್ಸಿನ ಆಲೋಚನೆಗಳನ್ನು ಸರಿದಾರಿಗೆ ತರಲು ಸಹಕಾರಿಯಾಗಿವೆ. ಪುಸ್ತಕದಲ್ಲಿರುವ ಧ್ಯಾನ ವಿಧಾನಗಳನ್ನು ನೀವು ಯಾವ ಗುರುಗಳ ಅಗತ್ಯ ಇಲ್ಲದೆ ಕಲಿತು ಅಳವಡಿಸಿಕೊಳ್ಳಬಹುದು.
–ಅಣೇಕಟ್ಟೆ ವಿಶ್ವನಾಥ್, ಜೀವನ ಕೌಶಲ್ಯ ಸುಗಮಗಾರರು
ಪುಸ್ತಕಗಳಿಗಾಗಿ ಸಂಪರ್ಕಿಸಿ: 94802 86844
