ಬೆಂಗಳೂರಿನ ಗಂಗಾನಗರದಲ್ಲಿ 1.11 ಎಕರೆ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ್ದರಲ್ಲಿ ನನ್ನ ಪಾತ್ರ ಇಲ್ಲ. ಅದು ಯಡಿಯೂರಪ್ಪನವರ ಕಾಲದಲ್ಲಿ ಆಗಿದೆ. ನಮ್ಮ ಅತ್ತೆ ವಿಮಲಾ ಅವರು ಕಾನೂನಾತ್ಮಕವಾಗಿ ಜಮೀನನ್ನು ಪಡೆದುಕೊಂಡಿದ್ದಾರೆ ಎಂದು ಹಾಲಿ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಎಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಬಿ,ಎಸ್ ಯಡಿಯೂರಪ್ಪ ಅವರು ಜಂಟಿಯಾಗಿ ನಡೆಸಿದ್ದ ಡಿನೋಟಿಫಿಕೇಷನ್ ಹಗರಣವನ್ನು ದಾಖಲೆಗಳ ಸಹಿತ ಈದಿನ.ಕಾಮ್ ಬಯಲಿಗೆಳೆದಿದೆ. ರಾಜ್ಯ ಸಚಿವರಾದ ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್ ಮತ್ತು ಸಂತೋಷ್ ಲಾಡ್ ಅವರು ಪತ್ರಿಕಾಗೋಷ್ಠಿ ನಡೆಸಿ ಈ ಹಗರಣದ ಬಗ್ಗೆ ಮಾನಾಡಿದ್ದಾರೆ. ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಇದೆಲ್ಲದರ ನಡುವೆ, ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡುರುವ ಕುಮಾರಸ್ವಾಮಿ, “ಕಂದಾಯ ಸಚಿವ ಕೃಷ್ಣ ಬೈರೇಗೌಡ ಯಾರನ್ನೋ ಮೆಚ್ಚಿಸಲಿಕ್ಕೆ ಇವೆಲ್ಲ ಮಾತಾಡ್ತಿದ್ದಾರೆ. ಅವರು ಕಂದಾಯ ಇಲಾಖೆಯಲ್ಲಿ ಏನು ಮಾಡಿದ್ದಾರೆ. ಅವೆಲ್ಲ ಹೊರಗೆ ಬರುತ್ತವೆ. ಡಿನೋಟಿಫಿಕೇಷನ್ ಪ್ರಕರಣ – ಸತ್ತಿರೋ ಪ್ರಕರಣ. ಇದನ್ನ ಇಟ್ಟುಕೊಂಡು ಆಟಆಡೋಕೆ ಹೊರಟ್ಟಿದ್ದಾರೆ. ತನಿಖೆ ಮಾಡ್ತೀರಾ ಮಾಡಿಕೊಳ್ಳಲಿ” ಎಂದಿದ್ದಾರೆ.
2007ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರ ಕಾರ್ಯದರ್ಶಿಯಾಗಿದ್ದ ರಾಕೇಶ್ ಸಿಂಗ್ ಅವರು ನ್ಯಾಯಾಲಯದಲ್ಲಿ ನ್ಯಾಯಾಧೀಶರ ಎದುರು ಹೇಳಿಕೆ ದಾಖಲಿಸಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, “ರಾಕೇಶ್ ಸಿಂಗ್ ಅವರಿಗೂ ನನಗೂ ಸಂಬಂಧವೇನು? ರೇರಾಗೆ ಚೇರ್‌ಮನ್ ಮಾಡಿರೋದಕ್ಕೆ, ರಾಕೇಶ್ ಸಿಂಗ್ ಅವರು ಸರ್ಕಾರಕ್ಕೆ ಬಳುವಳಿ ಕೊಟ್ಟಿದ್ದಾರಾ? ನಾನು ಕಡತ ತೆರೆಯಲಿಕ್ಕೆ ಆದೇಶ ಕೊಟ್ಟಿದ್ದೆನೆಂದು ಅವರು ಹೇಳಿಕೆ ನೀಡಿದ್ದಾರೆ. ನಾನು ಆದೇಶ ಕೊಟ್ಟಿದ್ದೆ ಎಂಬುದಕ್ಕೆ ಯಾವ ಸಾಕ್ಷಿ ಇದೆ” ಎಂದು ಪ್ರಶ್ನಿಸಿದ್ದಾರೆ.
“ಆ ಸಂದರ್ಭದಲ್ಲಿ (2008) ನನ್ನ ಮತ್ತು ಯಡಿಯೂರಪ್ಪ ಅವರ ನಡುವಿನ ಹೋರಾಟ ಹೇಗಿತ್ತು. ಅವರು ನನಗಾಗಿ ಕೆಲಸ ಮಾಡಿಕೊಡಲು ಸಾಧ್ಯವಾ? ಇದೂವರೆಗೂ ಯಾರ ಮುಂದೆಯೂ ಕೈಕಟ್ಟಿಕೊಂಡು ನಿಂತಿಲ್ಲ. ನನ್ನ ಅಧಿಕಾರಾವಧಿಯಲ್ಲಿ ಸಣ್ಣ ತಪ್ಪು ಮಾಡಿದ್ದರೆ, ಅಧಿಕಾರವನ್ನು ದುರ್ಬಳಕ್ಕೆ ಮಾಡಿಕೊಂಡಿದ್ದೇನೆಂಬುದು ಸಾಬೀತಾದ್ರೆ ಐದು ಸೆಕೆಂಡ್ ಕೂಡ ರಾಜಕಾರಣದಲ್ಲಿ ಇರುವುದಿಲ್ಲ” ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ.
ಇದೇ ಹಗರಣದ ಬಗ್ಗೆ ಮಾಧ್ಯಮಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. “ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಸಂತೋಷ್ ಲಾಡ್ ಸೇರಿದಂತೆ ಸಚಿವರು ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಡಿನೋಟಿಫೈ ಪ್ರಕರಣದ ಜಮೀನು ಬಹಳ ಬೆಲೆಬಾಳುವಂಥದ್ದಾಗಿದ್ದು. ಕುಮಾರಸ್ವಾಮಿಯವರು ತಮ್ಮ ಸಂಬಂಧಿಕರಿಗೆ ಡಿನೋಟಿಫೈ ಮಾಡಿ, ಜಿಪಿಓ ಆಗಿದೆ. ಅಧಿಕಾರಿಗಳು ಈ ಕ್ರಮವನ್ನು ಕಾನೂನಾತ್ಮಕವಲ್ಲವೆಂದರೂ ಈ ರೀತಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದು ಪರಿಶೀಲನೆ ನಡೆಸಲಾಗುವುದು” ಎಂದಿದ್ದಾರೆ.