ಚಿಕ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು 2023-24ನೇ ಸಾಲಿನಲ್ಲಿ 3.79ಲಕ್ಷ ಲಾಭಾಂಶ ಪಡೆದಿದ್ದು, 2.33 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಅಮರೇಶ್ ಹೇಳಿದರು.
ಕೋಲಾರ ತಾಲೂಕಿನ ವಕ್ಕಲೇರಿ ಹೋಬಳಿಯ ಚಿಕ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ 2023-24ನೇ ಸಾಲಿನ ಸಾಮಾನ್ಯ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಘದ ಆಡಳಿತ ಮಂಡಳಿ ಹಾಗೂ ಹಾಲು ಉತ್ಪಾದಕರ ಸಹಕಾರದಿಂದ 2023-24ನೇ ಸಾಲಿನಲ್ಲಿ ಸಂಘಕ್ಕೆ 2.33 ಲಕ್ಷ ನಿವ್ವಳ ಲಾಭ ಬಂದಿದ್ದು, ಈ ವರ್ಷವು ಹಾಲು ಉತ್ಪಾದಕಕರಿಗೆ ಶೇ.2.10ರಷ್ಟು ಬೋನಸ್ ನೀಡಲಾಗುವುದು ಎಂದು ಹೇಳಿದರು.
ಸಹಕಾರ ಕ್ಷೇತ್ರದಲ್ಲಿ ಟೀಕೆಗಳು ಸಹಜ. ಟೀಕೆಗಳನ್ನು ಮೆಟ್ಟಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಡೈರಿಯ ಅಭಿವೃದ್ಧಿಗೆ ಉತ್ಪಾದಕರು, ಆಡಳಿತ ಮಂಡಳಿಯ ಸದಸ್ಯರು, ಹಾಗೂ ಸಿಬ್ಬಂದಿ ಒಟ್ಟಾಗಿ ಕೆಲಸ ಮಾಡೋಣ. ಡೈರಿಗೆ ಹಾಲು ಉತ್ಪಾದಕರೇ ಶಕ್ತಿಯಾಗಿದ್ದು, ಗುಣಮಟ್ಟದ ಹಾಲು ಪೂರೈಕೆಯಿಂದ ಸಂಘದಿಂದ ಸಿಗುವ ವಿಶೇಷ ಸೌಲಭ್ಯಗಳನ್ನು ಪಡೆಯಬಹುದು ಎಂದು ಸಲಹೆ ನೀಡಿದರು.
ಕೋಮುಲ್ ಉಪ ವ್ಯವಸ್ಥಾಪಕ ಡಾ.ಮಹೇಶ್ ಮಾತನಾಡಿ, ಹಾಲಿನ ಡೈರಿಗಳು ಅಭಿವೃದ್ಧಿಯಾಗಬೇಕಾದರೆ ಪಕ್ಷಾತೀತವಾಗಿ ಕೆಲಸ ಮಾಡಬೇಕು. ರೈತರು ಉತ್ತಮ ಕೊಬ್ಬಿನ ಅಂಶವಿರುವ ಹಾಲು ಸರಬರಾಜು ಮಾಡಿದಾಗ ಮಾತ್ರ ಡೈರಿ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗುತ್ತದೆ. ಹಸುಗಳಿಗೆ ಹೊಸ ಹೊಸ ರೋಗಗಳು ಕಾಣಿಸುತ್ತಿದ್ದು, ಹೈನುಗಾರರಿಗೆ ಹಸು ಸಾಕಣೆ ತಲೆಬಿಸಿಯಾಗಿದೆ. ಅದಕ್ಕಾಗಿ ರೈತರು ಹೆಚ್ಚಿನ ಕಾಳಜಿವಹಿಸಿ ಕಾಲಕಾಲಕ್ಕೆ ವ್ಯಾಕ್ಸಿನೇಷನ್ ಮಾಡಿಸಬೇಕು ಎಂದರು.
ಸಭೆಯಲ್ಲಿ ಕೋಲಾರ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಎಸ್.ರಾಮಾಂಜಿನಪ್ಪ, ಆಡಳಿತ ಮಂಡಳಿ ನಿರ್ದೇಶಕರಾದ ಬಿ.ಶ್ರೀನಿವಾಸಪ್ಪ, ಸಿ ನಾಗರಾಜ್, ರಮೇಶ್, ಅಚ್ಚಪ್ಪ, ಸಿ.ಸಿ ಶ್ರೀನಿವಾಸ್, ಭಾಗ್ಯಲಕ್ಷ್ಮೀ, ಶಾರದದೇವಿ, ಸೊಣ್ಣಮ್ಮ ವೆಂಕಟಮ್ಮ ವಿಮಲಮ್ಮ, ಕಾರ್ಯದರ್ಶಿ ಆರ್ ಗೋಪಾಲಪ್ಪ, ಗ್ರಾಮಸ್ಥರಾದ ಸಿ.ಎಸ್ ಅಂಜನಗೌಡ, ವೆಂಕಟರಮಣಪ್ಪ, ಶಿವಕುಮಾರ್ ಸೇರಿದಂತೆ ಹಾಲು ಉತ್ಪಾದಕರು, ಗ್ರಾಮಸ್ಥರು ಇದ್ದರು.