ಹಿಂದಿನ ವೈಎಸ್‌ಆರ್‌ಸಿಸಿ ಸರ್ಕಾರದ ಅವಧಿಯಲ್ಲಿ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ತುಪ್ಪದ ಬದಲಿಗೆ ಪ್ರಾಣಿಗಳ ಕೊಬ್ಬನ್ನು ಬಳಸಿ ಲಾಡು ತಯಾರಿಸುತ್ತಿತ್ತು ಎಂದು ಆಂಧ್ರಪ್ರದೇಶ ಸಿಎಂ ಎನ್ ಚಂದ್ರಬಾಬು ನಾಯ್ದು ಆರೋಪಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.
ತಿರುಪತಿ ಲಾಡು ವಿವಾದ ದೇಶಾದ್ಯಂತ ಚರ್ಚೆಯಾಗುತ್ತಿರುವ ಹೊತ್ತಲ್ಲೇ, ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಅಧಿಸೂಚಿತ ದೇವಾಲಯಗಳಲ್ಲಿ ಸೇವೆಗಳಿಗೆ ಪ್ರಸಾದ ತಯಾರಿಕೆಗೆ ಮತ್ತು ಶುದ್ಧ ನಂದಿನಿ ತುಪ್ಪವನ್ನು ಮಾತ್ರ ಬಳಸುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಇಂದು (ಸೆ.20) ಹೊರಡಿಸಿರುವ ಸುತ್ತೋಲೆಯಲ್ಲಿ, ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ಎಲ್ಲ ಅಧಿಸೂಚಿತ ದೇವಾಲಯಗಳಲ್ಲಿನ ಸೇವೆಗಳಿಗೆ, ದೀಪಗಳಿಗೆ ಹಾಗೂ ಎಲ್ಲ ವಿಧದ ಪ್ರಸಾದ ತಯಾರಿಕೆಗೆ ಹಾಗೂ ದಾಸೋಹ ಭವನದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನು ಮಾತ್ರ ಬಳಸುವಂತೆ ಸೂಚಿಸಿದೆ.
ಜೊತೆಗೆ ದೇವಾಲಯಗಳಲ್ಲಿ ತಯಾರಿಸಲಾಗುವ ಪ್ರಸಾದಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಸೂಚನೆ ನೀಡಿದೆ.
