ಪರಿಸರದ ಸ್ವಚ್ಛತೆ ಕಾಪಾಡುವಲ್ಲಿ ಸಾರ್ವಜನಿಕರ ಸಹಭಾಗಿತ್ವ ಪ್ರಮುಖವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ʼಸ್ವಚ್ಛತಾ ಹೀ ಸೇವಾ’ ಪಾಕ್ಷಿಕ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೆಪ್ಟಂಬರ್ 17ರಿಂದ ಅಕ್ಟೋಬರ್ 2ರವರೆಗೂ ʼಸ್ವಭಾವ ಸ್ವಚ್ಛತೆ, ಸಂಸ್ಕಾರ ಸ್ವಚ್ಛತೆʼ ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ʼಸ್ವಚ್ಛತಾ ಹೀ ಸೇವಾʼ ಜಿಲ್ಲಾದ್ಯಂತ ನಡೆಯಲಿದೆ ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು.
ಕೊಡಗು ಜಿಲ್ಲೆಯ ಮಡಿಕೇರಿ ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಗಿಡ ನೆಡುವ ಮೂಲಕ ʼಸ್ಚಚ್ಛತಾ ಹೀ ಸೇವಾʼ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಮಾತನಾಡಿ, “ಈ ಅಭಿಯಾನವು ಸ್ವಚ್ಛತೆಗಾಗಿ ಬೃಹತ್ ಪ್ರಮಾಣದಲ್ಲಿ ಸಾರ್ವಜನಿಕರ ಸಹಭಾಗಿತ್ವ ಮತ್ತು ಸಮುದಾಯದ ಭಾಗವಹಿಸುವಿಕೆಗೆ ಅನುಕೂಲ ಮಾಡಿಕೊಡುತ್ತದೆ. ಎಲ್ಲೆಂದರಲ್ಲಿ ಅಕ್ರಮವಾಗಿ ತ್ಯಾಜ್ಯ ಸುರಿಯುವ ಸ್ಥಳಗಳನ್ನು ಗುರುತಿಸಿ ಅಲ್ಲಿ ಸಮುದಾಯದ ಭಾಗವಹಿಸುವಿಕೆಯೊಂದಿಗೆ ಈ ಸ್ಥಳವನ್ನು ಸ್ವಚ್ಛಗೊಳಿಸಲಾಗುತ್ತದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತದೆ. ಜತೆಗೆ ಈ ರೀತಿಯಾಗಿ ಅಕ್ರಮವಾಗಿ ತ್ಯಾಜ್ಯ ಸುರಿಯುವವರಿಗೆ ದಂಡ ವಿಧಿಸಲಾಗುತ್ತದೆ” ಎಂದು ಹೇಳಿದರು.
ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಿ ಧನರಾಜು ದೀಪ ಬೆಳಗಿಸುವ ಮೂಲಕ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, “ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸುವ ಉದ್ದೇಶದಿಂದ, ಎಲ್ಲರ ಆರೋಗ್ಯದ ಹಿತದೃಷ್ಟಿಯಿಂದ, ಒಮ್ಮೆ ಉಪಯೋಗಿಸುವ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸುತ್ತೇನೆ. ದಿನನಿತ್ಯ ಬಳಕೆಯಲ್ಲಿ ಪ್ಲಾಸ್ಟಿಕ್ ಬಳಸದೇ ಪರಿಸರ ಸ್ನೇಹಿ ಕೈಚೀಲ ವಸ್ತುಗಳನ್ನು ಉಪಯೋಗಿಸುತ್ತೇನೆ” ಎಂದರು.
“ಮನೆಯ ಕಸವನ್ನು ಹಸಿ ಮತ್ತು ಒಣ ಕಸವನ್ನಾಗಿ ವಿಂಗಡಿಸಿ, ವಿಲೇವಾರಿ ಮಾಡುತ್ತೇನೆ. ಎಲ್ಲೆಂದರಲ್ಲಿ ಕಸ ಬಿಸಾಡದಂತೆ ಜನರಲ್ಲಿ ಜಾಗೃತಿ ಮೂಡಿಸಿ ನಮ್ಮ ಗ್ರಾಮವನ್ನು ಸ್ವಚ್ಛ, ಸುಂದರವನ್ನಾಗಿಸಲು ಶ್ರಮಿಸುತ್ತೇನೆ” ಎಂದು ಪ್ರತಿಜ್ಞೆ ನುಡಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರು, “ಗ್ರಾಮವನ್ನು ಸ್ವಚ್ಛ-ಸುಂದರ ಹಾಗೂ ಆರೋಗ್ಯವಂತವಾಗಿರಿಸಿ, ಜವಾಬ್ದಾರಿಯುತ ನಾಗರಿಕನಾಗಿ ಸೇವೆ ಮಾಡುವುದಾಗಿ ದೃಢ ಪ್ರತಿಜ್ಞೆ ಮಾಡುತ್ತೇವೆ, ಸ್ವಚ್ಚ ಮೇವ ಜಯತೇ” ಎಂದು ʼತಾಯಿಯ ಹೆಸರಲ್ಲಿ ಒಂದು ವೃಕ್ಷʼ (ಏಕ್ ಪೇಡ್ ಮಾ ಕೇ ನಾಮ್) ಅಭಿಯಾನದ ಭಾಗವಾಗಿ ಸಸಿ ನೆಟ್ಟು ನೀರೆರೆದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಟಿಪ್ಪು ಕುರಿತು ಪ್ರಚೋದನಾಕಾರಿ ಭಾಷಣ; ಯತ್ನಾಳ್ ವಿರುದ್ಧ ಎಫ್‌ಐಆರ್
ಕಾರ್ಯಕ್ರಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜ್, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ್ ನಾಯಕ್, ಸಹಾಯಕ ಯೋಜನಾಧಿಕಾರಿ ಜೀವನ್ ಕುಮಾರ್, ಸ್ವಚ್ಛ ಭಾರತ್ ಮಿಷನ್ ಯೋಜನೆಯ ಜಿಲ್ಲಾ ಸಮಾಲೋಚಕ ಹರ್ಷಿತ, ಪೆಮ್ಮಯ್ಯ, ಸೂರಜ್, ವಾಸುದೇವ್ ಸೇರಿದಂತೆ ಇತರರು ಇದ್ದರು.