ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಮೊದಲ ಹಂತದ ಮತದಾನ ಮುಗಿದಿದೆ. ಎರಡನೇ ಹಂತದ ಚುನವಣೆಗೆ ಸಿದ್ದತೆಗಳು ನಡೆಯುತ್ತಿವೆ. ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು-ಕಾಶ್ಮೀರದ ಮತದಾರರನ್ನು ಸೆಳೆಯಲು ಬಿಜೆಪಿ ಭಾರೀ ಕಸರತ್ತು ನಡೆಸುತ್ತಿದೆ. ಆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಈದ್ ಮತ್ತು ಮೊಹರಂ ಸಮಯದಲ್ಲಿ ಎರಡು ಗ್ಯಾಸ್ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದಾಗಿ ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್ ಶಾ ಭರವಸೆ ನೀಡಿದ್ದಾರೆ.
2019ರಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನ ತೆಗೆದುಹಾಕಿ, ಆರ್ಟಿಕಲ್ 370ಅನ್ನು ರದ್ದುಗೊಳಿಸಿತು. ರಾಜ್ಯವನ್ನು ಇಬ್ಬಾಗ ಮಾಡಿ, ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತು. ಇದರಿಂದ ಜಮ್ಮು-ಕಾಶ್ಮೀರದ ಜನರು ಬಿಜೆಪಿ ವಿರುದ್ದ ಸಿಟ್ಟಾಗಿದ್ದಾರೆ. ಕಾಶ್ಮೀರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವಿವಿಧ ಸಮುದಾಯಗಳು ಮತ್ತು ಮುಸ್ಲಿಮರ ಸಿಟ್ಟನ್ನು ತಣಿಸಲು, ಬಿಜೆಪಿಯತ್ತ ಸೆಳೆಯಲು ಪಕ್ಷದ ನಾಯಕರು ಯತ್ನಿಸುತ್ತಿದ್ದಾರೆ.
ಶನಿವಾರ, ಜಮ್ಮುವಿನಲ್ಲಿ ನಡೆದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಮಾತನಡಿದ ಅಮಿತ್ ಶಾ, “ಈದ್ ಮತ್ತು ಮೊಹರಂ ಹಬ್ಬಗಳ ಸಂದರ್ಭದಲ್ಲಿ ಎರಡು ಉಚಿತ ಸಿಲಿಂಡರ್ ನೀಡುತ್ತೇವೆ. ಗುಜ್ಜರ್ ಸಮುದಾಯದ ಮೀಸಲಾತಿಯನ್ನು ಮುಂದುವರೆಸುತ್ತೇವೆ. ಪಹಾರಿಗಳಿಗೂ ಮೀಸಲಾತಿ ನೀಡುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ಪಿಡಿಪಿ, ಎನ್‌ಸಿ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ, “ಅಬ್ದುಲ್ಲಾ, ಮುಫ್ತಿ ಮತ್ತು ನೆಹರು-ಗಾಂಧಿ ಕುಟುಂಬವು 90ರ ದಶಕದಿಂದಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಹರಡಿವೆ. ಮತ್ತೊಂದೆಡೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಭಯೋತ್ಪಾದನೆಯನ್ನು ಕೊನೆಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಯುವಜನರಿಗೆ ಕಲ್ಲುಗಳ ಬದಲಾಗಿ ಲ್ಯಾಪ್‌ಟಾಪ್‌ಗಳನ್ನು ನೀಡಿದೆ” ಎಂದಿದ್ದಾರೆ.
ಈ ವರದಿ ಓದಿದ್ದೀರಾ?: ಮೋದಿ ಸರ್ಕಾರದ ‘ಐಟಿ ನಿಯಮಗಳ ತಿದ್ದುಪಡಿ ಮಸೂದೆ’ ರದ್ದು; ಬಾಂಬೆ ಹೈಕೋರ್ಟ್ ಆದೇಶ
“ಪ್ರಸ್ತುತ ನಡೆಯುತ್ತಿರುವ ವಿಧಾನಸಭಾ ಚುನಾವಣೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಕುಟುಂಬಗಳ (ಅಬ್ದುಲ್ಲಾ ಕುಟುಂಬ, ಮುಫ್ತಿ ಕುಟುಂಬ ಮತ್ತು ನೆಹರು-ಗಾಂಧಿ ಕುಟುಂಬ) ಆಡಳಿತವನ್ನು ಕೊನೆಗೊಳಿಸಲಿದೆ. ಈ ಮೂರು ಕುಟುಂಬಗಳು ಇಲ್ಲಿ ಪ್ರಜಾಪ್ರಭುತ್ವವನ್ನು ಹಾಳುಮಾಡಿದ್ದವು. 2014ರಲ್ಲಿ ಮೋದಿ ಸರ್ಕಾರ ಬರದಿದ್ದರೆ, ಆಗ ರಾಜ್ಯದಲ್ಲಿ ಪಂಚಾಯತ್, ಬ್ಲಾಕ್ ಮತ್ತು ಜಿಲ್ಲಾ ಚುನಾವಣೆಗಳು ನಡೆಯುತ್ತಿರಲಿಲ್ಲ” ಎಂದು ಆರೋಪಿಸಿದ್ದಾರೆ.
“ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ, ಒಬಿಸಿಗಳು, ಹಿಂದುಳಿದ ವರ್ಗಗಳು, ಗುಜ್ಜರ್ ಸಮುದಾಯ ಹಾಗೂ ಪಹಾರಿಗಳಿಗೆ ಮೀಸಲಾತಿ ಸಿಕ್ಕಿತು. ನಾನು ಮಸೂದೆಯನ್ನು ಮಂಡಿಸಿದಾಗ, ಫಾರೂಕ್ ಅಬ್ದುಲ್ಲಾ ಅವರ ಪಕ್ಷವು ವಿರೋಧಿಸಿತು. ಇಲ್ಲಿನ ಗುಜ್ಜರ್ ಸಹೋದರರನ್ನು ಪ್ರಚೋದಿಸಲು ಪ್ರಾರಂಭಿಸಿತು” ಎಂದು ದೂರಿದ್ದಾರೆ.