ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವೇ ಇಲ್ಲ. ದಾಖಲೆಗಳನ್ನು ಗಮನಿಸಿದರೆ, ಅಕ್ರಮ ನಡೆದಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಹಲವು ಅಧಿಕಾರಿಗಳು ಆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಲು ಸಾಧ್ಯವಿಲ್ಲವೆಂದು ಹೇಳಿದ್ದ ಮೇಲೂ, ಯಡಿಯೂರಪ್ಪ ಡಿನೋಟಿಫೈ ಮಾಡಲು ಆದೇಶಿಸಬಾರದಿತ್ತು. ಪ್ರಕರಣದ ತನಿಖೆ ನಡೆಸಬೇಕು ಎಂದಿತ್ತು ಹೈಕೋರ್ಟ್
ರಾಜ್ಯ ರಾಜಕಾರಣದಲ್ಲಿ ಹಗರಣಗಳದ್ದೇ ಸದ್ದು-ಸುದ್ದಿಯಾಗುತ್ತಿದೆ. ಹಲವು ಹಗರಣಗಳಲ್ಲಿ ಅಕ್ರಮ, ಅವ್ಯವಹಾರ ಸಾಬೀತು ಮಾಡಲು ಭಾರೀ ಸಮಯ, ತನಿಖೆ, ತನಿಖಾಧಿಕಾರಿಗಳ ಚಾಕಚಕ್ಯತೆ ಎಲ್ಲವೂ ಅತ್ಯಗತ್ಯ. ಆದರೆ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ ಕುಮಾರಸ್ವಾಮಿ ಮತ್ತು ಬಿ.ಎಸ್ ಯಡಿಯೂರಪ್ಪ ಜಂಟಿಯಾಗಿ ಎಸಗಿರುವ ಅವ್ಯವಹಾರ ಪ್ರಕರಣದಲ್ಲಿ ಅಕ್ರಮ ನಡೆದಿದೆ ಎಂಬುದನ್ನು ಸರ್ಕಾರಿ ಕಡತದಲ್ಲಿರುವ ದಾಖಲೆಗಳೇ ಸಾರಿ ಹೇಳುತ್ತಿವೆ. ಆದರೂ, ಲೋಕಾಯುಕ್ತ ಅಧಿಕಾರಿಗಳ ತನಿಖೆ ಆಮೆಗಿಂತಲೂ ನಿಧಾರವಾಗಿ ತೆವಳುತ್ತಿದೆ. ಕಳೆದ 9 ವರ್ಷಗಳಿಂದಲೂ ತನಿಖೆ ನಡೆಯುತ್ತಿದ್ದು, ಇನ್ನೂ ನಿರ್ಣಾಯಕ ಹಂತಕ್ಕೆ ತಲುಪಿಲ್ಲ.
ಮುಖ್ಯವಾಗಿ, 2017ರಲ್ಲಿ ತಮ್ಮ ವಿರುದ್ಧದ ಅಕ್ರಮ ಡಿನೋಟಿಫಿಕೇಷನ್ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿ ಯಡಿಯೂಡಿರಪ್ಪ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನಿರಂತರ, ವಾದ-ಪ್ರತಿವಾದಗಳನ್ನು ಆಲಿಸಿದ್ದ ಹೈಕೋರ್ಟ್, 2021ರ ಜನವರಿ 5ರ ತನ್ನ ಆದೇಶದಲ್ಲಿ, ‘ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವೇ ಇಲ್ಲ. ದಾಖಲೆಗಳನ್ನು ಗಮನಿಸಿದರೆ, ಅಕ್ರಮ ನಡೆದಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಹಲವು ಅಧಿಕಾರಿಗಳು ಆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಲು ಸಾಧ್ಯವಿಲ್ಲವೆಂದು ಹೇಳಿದ್ದ ಮೇಲೂ, ಯಡಿಯೂರಪ್ಪ ಡಿನೋಟಿಫೈ ಮಾಡಲು ಆದೇಶಿಸಬಾರದಿತ್ತು’ ಎಂದು ಹೇಳಿದೆ.
ಮಾತ್ರವಲ್ಲದೆ, ದೂರುದಾರ ಜಯಕುಮಾರ್ ಹಿರೇಮಠ್ ಅವರು ತಮ್ಮ ದೂರನ್ನು ಹಿಂಪಡೆಯುವುದಾಗಿ ಹೇಳಿದ್ದಕ್ಕೆ ಸಿಟ್ಟಾಗಿದ್ದ ಹೈಕೋರ್ಟ್, ‘ಕ್ರಿಮಿನಲ್ ಪ್ರಕರಣಗಳಲ್ಲಿ ದೂರುದಾರರು ಕೇವಲ ಮಾಹಿತಿದಾರರು ಮಾತ್ರ. ಅವರಿಗೆ ದೂರನ್ನು ಹಿಂಪಡೆಯುವ ಹಕ್ಕು ಇರುವುದಿಲ್ಲ. ಪ್ರಕರಣವನ್ನು ತನಿಖೆ ನಡೆಸಬೇಕು’ ಎಂದು ಆದೇಶಿಸಿತ್ತು.
ಲೋಕಾಯುಕ್ತ ತನಿಖೆಗೆ ಹೈಕೋರ್ಟ್ ಅವಕಾಶ ಕೊಟ್ಟು ಇದೀಗ ಮೂರೂವರೆ ವರ್ಷಗಳು ಕಳೆದಿವೆ. ಆದರೂ, ಪ್ರಕರಣದ ತನಿಖೆ ಮಾತ್ರ, ಮುಂದೆ ಸಾಗಿಯೇ ಇಲ್ಲ.
ತಾನು ‘ಕ್ಲೀನ್ ಹ್ಯಾಂಡ್’ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಹಾಲಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು 2007ರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು. ಅಗ, ಬೆಂಗಳೂರಿನ ಗಂಗಾನಗರದ ಸರ್ವೇ ನಂ. 7/1B, 7/1C ಮತ್ತು 7/1Dನಲ್ಲಿದ್ದ 1.11 ಎಕರೆ ಭೂಮಿಯನ್ನು ಬೇನಾಮಿ ಅರ್ಜಿಯ ಮೇಲೆ ಡಿನೋಟಿಫೈ ಮಾಡಲು ಮುಂದಾಗಿದ್ದರು. ಆದರೆ, ಹಲವು ಹಂತಗಳಲ್ಲಿ ಅಧಿಕಾರಿಗಳು ಆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಲು ಸಾಧ್ಯವಿಲ್ಲವೆಂದು ಹೇಳಿದ್ದರು. 2008ರಲ್ಲಿ ಮೈತ್ರಿ ಸರ್ಕಾರ ಉರುಳಿ, ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. 2010ರಲ್ಲಿ ಆ ಭೂಮಿಯನ್ನು ಡಿನೋಟಿಫೈ ಮಾಡಿ ಆದೇಶ ಹೊರಡಿಸಿದರು. ಜೊತೆಗೆ, ಅದನ್ನು ಕುಮಾರಸ್ವಾಮಿ ಅವರ ಬಾಮೈದ ಟಿ.ಎಸ್ ಚನ್ನಪ್ಪ ಹೆಸರಿಗೆ ನೋಂದಣಿಯನ್ನೂ ಮಾಡಿಸಿದರು.
ಇಷ್ಟೆಲ್ಲ ಅಕ್ರಮಗಳು ಕಣ್ಣಿಗೆ ಕಟ್ಟುವಂತಹ ದಾಖಲೆಗಳು ಇರುವಾಗಲೇ ನಡೆದಿವೆ. ಅಕ್ರಮ ನಡೆದು 14 ವರ್ಷಗಳಾಗಿವೆ. ದೂರು ದಾಖಲಾಗಿ 9 ವರ್ಷಗಳು ಕಳೆದಿವೆ. ಪ್ರಕರಣವನ್ನು ತನಿಖೆ ನಡೆಸಲೇಬೇಕೆಂದು ಹೈಕೋರ್ಟ್ ಆದೇಶಿಸಿ 3.5 ವರ್ಷಗಳು ಉರುಳಿವೆ. ಆದರೂ, ತನಿಖೆ ಮಾತ್ರ ತಟಸ್ಥವಾಗಿ ನಿಂತಿತ್ತು.
ಈ ವರದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ಒಗ್ಗಟ್ಟಿನ ಮಂತ್ರವೇ ಮದ್ದು
ಈಗ, ದಾಖಲೆಗಳ ಸಮೇತ ಹಗರಣವನ್ನು ಈದಿನ.ಕಾಮ್ ಬಯಲುಗೊಳಿಸಿದ ಬಳಿಕ, ಲೋಕಾಯುಕ್ತ ಎಚ್ಚೆತ್ತುಕೊಂಡಿದೆ. ತನಿಖೆಯನ್ನು ಚುರುಕುಗೊಳಿಸಿದೆ. ಲೋಕಾಯುಕ್ತ ಅಧಿಕಾರಿಗಳು 2007ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರ ಪ್ರಧಾನಿ ಕಾರ್ಯದರ್ಶಿಯಾಗಿದ್ದ ರಾಕೇಶ್ ಸಿಂಗ್ ಅವರ ಹೇಳಿಕೆಯನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ದಾಖಲಿಸಿಕೊಂಡಿದೆ. ಕುಮಾರಸ್ವಾಮಿ ಆದೇಶದ ಮೇರೆಗೆ ಡಿನೋಟಿಫಿಕೇಷನ್ ಕಡತ ತೆರೆದಿದ್ದಾಗಿ ರಾಕೇಶ್ ಸಿಂಗ್ ಹೇಳಿಕೊಂಡಿದ್ದಾರೆ. ಯಡಿಯೂರಪ್ಪ ಅವರನ್ನೂ ಲೋಕಾಯುಕ್ತ ವಿಚಾರಣೆಗೆ ಒಳಪಡಿಸಿದೆ.
ಹಗರಣದ ಬಗ್ಗೆ ಪ್ರತಿಕ್ರಿಯಿಸಿರುವ ಹಾಲಿ ಕೇಂದ್ರ ಸಚಿವ ಕುಮಾರಸ್ವಾಮಿ, ‘ಅದು ಸತ್ತುಹೋಗಿರುವ ಪ್ರಕರಣ. ಆ ಭೂಮಿ ಡಿನೋಟಿಫೈ ಆದಾಗ ನನ್ನ ಮತ್ತು ಯಡಿಯೂರಪ್ಪ ನಡುವಿನ ಹೋರಾಟ ಹೇಗಿತ್ತು. ಅವರು ನನಗಾಗಿ ಕೆಲಸ ಮಾಡಿಕೊಡಲು ಸಾಧ್ಯವಾ’ ಎಂದಿದ್ದಾರೆ.
ಹೊಂದಾಣಿಕೆ ರಾಜಕಾರಣವನ್ನೇ ಮಾಡಿಕೊಂಡು ಅಧಿಕಾರ ಅನುಭವಿಸಿರುವ, ಅದೇ ಹೊಂದಾಣಿಕೆಯೊಂದಿಗೆ ಕೇಂದ್ರ ಸಚಿವರೂ ಆಗಿರುವ ಕುಮಾರಸ್ವಾಮಿ ಅವರ ಬಾಯಿಯಿಂದ ಇಂತಹ ಮಾತು ಕೇಳುವುದೇ ಸೊಗಸು. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ವಿರುದ್ಧ ನಿರಂತರ ವಾಗ್ದಾಳಿ, ಆರೋಪ ಮಾಡುತ್ತಿದ್ದ ಕುಮಾರಸ್ವಾಮಿ, ಚುನಾವಣೆಯ ಬಳಿಕ ಅದೇ ಕಾಂಗ್ರೆಸ್ ಜೊತೆಗೂಡಿ ಮುಖ್ಯಮಂತ್ರಿಯಾಗಿದ್ದರು. 2019ರ ಲೋಕಸಭೆ ಮತ್ತು 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮಾತನಾಡಿ, ಭ್ರಷ್ಟಾಚಾರಗಳ ಬಗ್ಗೆ ಆರೋಪಿಸಿ ಕೊನೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರು. 2024 ಲೋಕಸಭಾ ಚುನಾವಣೆಯಲ್ಲಿ ಬಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆದ್ದು, ಕೇಂದ್ರ ಮಂತ್ರಿಯೂ ಆಗಿದ್ದಾರೆ. ಇಂತಹ ಕುಮಾರಸ್ವಾಮಿ ಅವರು ಹೊಂದಾಣಿಕೆ ರಾಜಕಾರಣ ನನ್ನದಲ್ಲ ಎನ್ನುವುದು ಹಾಸ್ಯಾಸ್ಪದ.
ಅದಾಗ್ಯೂ, ಗಂಗಾನಗರದ ಭೂಮಿ ಜಿಪಿಎ ಆಗಿದ್ದು ಕುಮಾರಸ್ವಾಮಿ ಅವರ ಅತ್ತೆ ವಿಮಲಾ ಹೆಸರಿಗೆ, ನೋಂದಣಿ ಆಗಿದ್ದು ಕುಮಾರಸ್ವಾಮಿ ಅವರ ಬಾಮೈದ ಚನ್ನಪ್ಪ ಹೆಸರಿಗೆ, ಕಡತ ತೆರೆಯಲು ಆದೇಶಿಸಿದ್ದು ಕುಮಾರಸ್ವಾಮಿ, ಡಿನೋಟಿಫೈ ಮಾಡಿದ್ದು ಯಡಿಯೂರಪ್ಪ. ಇಷ್ಟು ಸ್ಪಷ್ಟವಾಗಿ ಹಗರಣ ನಡೆದಿರುವುದು ಮತ್ತು ಆರೋಪಿಗಳು ಯಾರು ಎಂಬದು ಕಾಣಸಿಗುತ್ತಿದೆ.
‘ಕಣ್ಣಿಗೆ ಕಾಣುವ ದಾಖಲೆಗಳಿದ್ದರೂ, ಆರೋಪಿಗಳ ಬಗ್ಗೆ ಸ್ಪಷ್ಟತೆ ಇದ್ದರೂ, ತನಿಖೆಗೆ ಹೈಕೋರ್ಟ್ ಆದೇಶಿಸಿದ ನಂತರವೂ ಲೋಕಾಯುಕ್ತ ಮೌನವಾಗಿದ್ದದ್ದು ಯಾಕೆ’ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಸೂಕ್ಷ್ಮವಾಗಿ ನೋಡಿದರೆ, ಹಿಂದಿನ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಲೋಕಾಯುಕ್ತವನ್ನು ರದ್ದು ಮಾಡಿ, ‘ಆ್ಯಂಟಿ ಕರಪ್ಶನ್ ಬ್ಯೂರೋ’ವನ್ನು (ಎಸಿಬಿ) ರಚಿಸಲಾಗಿತ್ತು. ಮತ್ತೆ, ಈ ಲೋಕಾಯುಕ್ತಕ್ಕೆ ಜೀವ ತುಂಬಿದ್ದು, ಇದೇ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ. ತಮ್ಮ ಸಂಸ್ಥೆಗೆ ಪುನರ್ಜನ್ಮ ಕೊಟ್ಟ ಕಾರಣಕ್ಕಾಗಿ ಲೋಕಾಯುಕ್ತ ಅಧಿಕಾರಿಗಳು ಯಡಿಯೂರಪ್ಪ ವಿರುದ್ಧ ಹಗರಣದ ತನಿಖೆಗೆ ಮುಂದಾಗಲಿಲ್ಲವೇ ಎಂಬ ಅನುಮಾನ ಕಾಡುತ್ತದೆ.
ಅದೇನೇ ಇರಲಿ, ಸದ್ಯ, ಯಡಿಯೂರಪ್ಪ ಅವರು ಜನಪ್ರತಿನಿಧಿಯಲ್ಲ. ಅವರ ವಿರುದ್ಧ ತನಿಖೆ, ವಿಚಾರಣೆ ನಡೆಸಲು ರಾಜ್ಯಪಾಲರೂ ಸೇರಿದಂತೆ ಯಾರ ಅನುಮತಿಯೂ ಅಗತ್ಯವಿಲ್ಲ. ಹಗರಣದಲ್ಲಿ ಯಡಿಯೂರಪ್ಪ ಪಾತ್ರದ ಬಗ್ಗೆ ಲೋಕಾಯುಕ್ತ ನಿರಾಯಾಸವಾಗಿ ತನಿಖೆ ನಡೆಸಬಹುದು. ಜೊತೆಗೆ, ಕುಮಾರಸ್ವಾಮಿ ವಿರುದ್ಧದ ತನಿಖೆಗೆ ಅಗತ್ಯವಿರುವ ಎಲ್ಲ ಅನುಮತಿಗಳನ್ನೂ ಶೀಘ್ರವಾಗಿ ಪಡೆದುಕೊಳ್ಳಬೇಕು. ತ್ವರಿತಗತಿಯಲ್ಲಿ ತನಿಖೆ ನಡೆಸಬೇಕು. ತಪ್ಪಿತಸ್ಥರು ಯಾರೆಲ್ಲ ಇದ್ದಾರೆ ಎಂಬುದನ್ನು ಬಹಿರಂಗ ಪಡಿಸಬೇಕು. ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು.