- ‘ಸುರಕ್ಷಿತ ಗರ್ಭಪಾತಕ್ಕಾಗಿ ವೈದ್ಯರನ್ನೇ ಸಂಪರ್ಕಿಸಿ’
- ಅನಧಿಕೃತ ಗರ್ಭಪಾತ ಸಾವು, ಬಂಜೆತನ, ಸೋಂಕಿಗೆ ಕಾರಣ
ಮನೆಯೊಂದರಲ್ಲಿ ಅನಧಿಕೃತವಾಗಿ ಗರ್ಭಪಾತ ಮಾಡುತ್ತಿದ್ದ ಆರೋಪದ ಮೇಲೆ ಮಹಿಳಾ ಶುಶ್ರೂಷಕಿಯೊಬ್ಬರ ಮೇಲೆ ದೂರು ದಾಖಲಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಶಿರಾದಲ್ಲಿ ನಡೆದಿದೆ.
ಪಟ್ಟಣದ ಜ್ಯೋತಿನಗರದಲ್ಲಿ ಮಹಿಳಾ ಶುಶ್ರೂಷಕಿ ಸೌಜನ್ಯ ಎಂಬವರು ಅನಧಿಕೃತವಾಗಿ ಗರ್ಭಪಾತ ಮಾಡುತ್ತಿದ್ದರು. ಆಕೆ ಗರ್ಭಪಾತಕ್ಕೆ ಬಳಸುತ್ತಿದ್ದ ಉಪಕರಣಗಳು ಹಾಗೂ ಔಷಧಿಗಳನ್ನು ವಶಪಡಿಸಿಕೊಂಡು, ಗರ್ಭಪಾತ ಕಾಯ್ದೆ ಅಡಿ ದೂರು ದಾಖಲಿಸಲು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಸಮಗ್ರ ಗರ್ಭಪಾತ ಸೇವೆಯ ನೋಡಲ್ ಅಧಿಕಾರಿ ಡಾ. ಚಂದ್ರಿಕಾ ಬಿ.ಆರ್ ಸೂಚನೆ ನೀಡಿದ್ದಾರೆ.
ಅನಧಿಕೃತ ಗರ್ಭಪಾತದ ಬಗ್ಗೆ ರಾಜ್ಯ ಪಿಸಿಪಿಎನ್ಡಿಟಿಯ ಉಪನಿರ್ದೇಶಕ ಡಾ. ವಿವೇಕ್ ದೊರೆ ಎಂಬುವವರು ದೂರು ನೀಡಿದ್ದರು. ಅವರ ದೂರಿನ ಆಧಾರ ಮೇಲೆ ನೋಡಲ್ ಅಧಿಕಾರಿ ಡಾ. ಚಂದ್ರಿಕಾ ಅವರು ದಾಳಿ ನಡೆಸಿದ್ದು, ಪ್ರಕರಣ ಬೆಳಕಿಗೆ ಬಂದಿದೆ.
“ಅನಧಿಕೃತ ಗರ್ಭಪಾತದಿಂದಾಗಿ ಸಾವು ಸಂಭವಿಸಬಹುದು. ಶಾಶ್ವತ ಬಂಜೆತನ, ಸೋಂಕು, ಹಾಗೂ ಮಾರಕ ರೋಗಗಳು ಹರಡುವ ಸಾಧ್ಯತೆ ಇದೆ. ಗರ್ಭನಿರೋಧಕಗಳ ಬಳಕೆ ಕೊರತೆಯಿಂದ ಅನಗತ್ಯ ಗರ್ಭಧಾರಣೆಯು ಒಂದು ತಾಯಿಯ ಆರೋಗ್ಯಕ್ಕೆ ಮಾರಕ” ಎಂದು ಡಾ. ಚಂದ್ರಿಕಾ ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ಮನಸ್ಸಿನ ಕತೆಗಳು | ಸಿಟ್ಟಿನ ಈ ಪುಟ್ಟನ ಕತೆ ನಿಮ್ಮ ಮಗುವಿನದ್ದೂ ಆಗಿರಬಹುದು
“ಒಂದು ವೇಳೆ ಗರ್ಭಪಾತದ ವಿಷಯದ ಬಗ್ಗೆ ಗೌಪ್ಯತೆ ಕಾಯ್ದುಕೊಳ್ಳುವ ಸಂದರ್ಭ ಬಂದಾಗ ವೈದ್ಯರೊಡನೆ ಸಮಾಲೋಚನೆ ನಡೆಸಿ ನಂತರ ಸುರಕ್ಷಿತ ಗರ್ಭಪಾತ ಮಾಡಿಸಿಕೊಳ್ಳಬೇಕು. ಗರ್ಭಪಾತಕ್ಕೊಳಗಾಗುವವರ ಹೆಸರನ್ನು ಗೌಪ್ಯತೆಯಿಂದಿಡಲಾಗುತ್ತದೆ. ಒಂದು ವೇಳೆ ಕಾನೂನು ರೀತಿಯಲ್ಲಿ ಗರ್ಭಧಾರಣೆಗೆ ನೋಂದಾಯಿಸಿಕೊಂಡಿದ್ದಲ್ಲಿ ದಾಖಲೆ ಅಥವಾ ವರದಿಗಳನ್ನು ಕಾನೂನು ಮೂಲಕ ಕೋರಿದ್ದಾಗ ಮಾತ್ರ ನೀಡಬೇಕಾಗಿರುತ್ತದೆ. ವೈದ್ಯರು ದಾಖಲೆಗಳನ್ನು ಬಹಿರಂಗಗೊಳಿಸಿದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸುರಕ್ಷಿತ ಗರ್ಭಪಾತಕ್ಕಾಗಿ ವೈದ್ಯರನ್ನೇ ಸಂಪರ್ಕಿಸಿ, ನೋಂದಾಯಿತ ಸ್ಥಳದಲ್ಲಿ ಮಾತ್ರ ಗರ್ಭಪಾತ ಮಾಡಿಸುವುದು ಉತ್ತಮ” ಎಂದು ಸಲಹೆ ನೀಡಿದರು.