ಮಂಡ್ಯ ಜಿಲ್ಲೆಯ ನಾಗಮಂಗಲ ಗಲಭೆಗೆ ಸಂಘ ಪರಿವಾರ ಸಂಚು ರೂಪಿಸಿದ್ದು, ಪಟ್ಟಣದಲ್ಲಿ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ನಡೆದ ಕೋಮು ಗಲಭೆ ಮತ್ತು ಆಸ್ತಿಪಾಸ್ತಿ ಹಾನಿಯಾಗಿದೆ. ಗುಪ್ತಚರ ಮತ್ತು ಪೊಲೀಸ್ ಇಲಾಖೆಯ ವೈಫಲ್ಯ ಹಾಗೂ ಜೆಡಿಎಸ್ ಪಕ್ಷದ ಮೈತ್ರಿಯನ್ನು ದುರುಪಯೋಗ ಮಾಡಿಕೊಂಡು ಗಲಭೆ ಎಬ್ಬಿಸಿದೆ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಟಿ ಎಲ್ ಕೃಷ್ಣೇಗೌಡ ಆರೋಪಿಸಿದ್ದಾರೆ.
ಮಂಡ್ಯದಲ್ಲಿ ನಡೆದ ಸಿಪಿಐಎಂ ಪಕ್ಷದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಸೆಪ್ಟೆಂಬರ್ 17ರಂದು ಸಿಪಿಐಎಂ ನಿಯೋಗವು ನಾಗಮಂಗಲಕ್ಕೆ ಭೇಟಿ ನೀಡಿದಾಗ, ಸಾರ್ವಜನಿಕರೊಂದಿಗೆ ಮಾತುಕತೆಯ ವೇಳೆ ಈ ಅಂಶಗಳು ಬೆಳಕಿಗೆಬಂದಿವೆ. ಆದ್ದರಿಂದ ಶಾಂತಿ ಸ್ಥಾಪನೆಗಾಗಿ ಆದಿಚುಂಚನಗಿರಿ ಮಠದ ಶ್ರೀಗಳು ಪಾದಯಾತ್ರೆ ನಡೆಸಬೇಕು” ಎಂದು ಒತ್ತಾಯಿಸಿದರು.
“ಸೆಪ್ಟೆಂಬರ್ 11ರಂದು ನಾಗಮಂಗಲ ಪಟ್ಟಣದಲ್ಲಿ ನಡೆದ ಗಲಭೆಯಲ್ಲಿ ಅನೇಕ ಅಂಗಡಿಗಳು ಮತ್ತು ಆಸ್ತಿಪಾಸ್ತಿಗೆ ಹಾನಿ ಉಂಟಾಗಿದೆ. ಬದರಿಕೊಪ್ಪಲು ಗ್ರಾಮದ ಯುವಕರು ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ಪಟ್ಟಣಕ್ಕೆ ಬಂದಾಗ, ಮೆರವಣಿಗೆಯನ್ನು ನಿಶ್ಚಿತ ಸಮಯಕ್ಕಿಂತ ವಿಳಂಬವಾಗಿ ನಡೆಸಿದ್ದು, ಮಸೀದಿ ಹತ್ತಿರ ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗಿದ್ದಾರೆ. ಮಸೀದಿಯವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ಪರಸ್ಪರ ಕೈಕೈಮಿಲಾಯಿಸಿ ಗಲಾಟೆಯ ಕಡೆಗೆ ತಿರುಗಿದೆ” ಎಂದು ಆರೋಪಿಸಿದರು.
“ಮೆರವಣಿಗೆಯನ್ನು ಮೊಟಕುಗೊಳಿಸಿ ಗಣೇಶ ಮೂರ್ತಿಯನ್ನು ಸ್ಟೇಷನ್ನಿಗೆ ತಂದಿದ್ದರಿಂದ ಕಿಡಿಗೇಡಿಗಳು ಗಲಭೆ ಶುರು ಮಾಡಿ, ಬೆಂಕಿ ಹಚ್ಚಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಅಂಗಡಿಗಳೇ ಹೆಚ್ಚು ಗುರಿಯಾಗಿವೆ. ಹಿಂದೂ ಸಮುದಾಯದ ಅಂಗಡಿಗಳಿಗೆ ಹೆಚ್ಚು ಹಾನಿಯಾಗಿಲ್ಲ. ಇದರಿಂದ ಸಂಘ ಪರಿವಾರ ಗಲಭೆಗೆ ಸಂಚು ಮಾಡಿರುವುದು ಎದ್ದು ಕಾಣುತ್ತದೆ” ಎಂದರು.
ಗಲಭೆಯ ಪರಿಣಾಮವಾಗಿ, ನಾಗಮಂಗಲದಲ್ಲಿ ಅಶಾಂತಿ ನಿರ್ಮಾಣವಾಗಿದ್ದು, ಇದರಲ್ಲಿ ಸಂಘ ಪರಿವಾರದ ಸಂಘಟನೆಗಳ ಕೈವಾಡವಿದೆ. ಪ್ರತಿ ವರ್ಷ ಗಣೇಶ ಮೆರವಣಿಗೆ ಮಾತ್ರ ಇರುತಿತ್ತು. ಆದರೆ ಈ ಬಾರಿ ಜೈ ಶ್ರೀರಾಮ್ ಘೋಷಣೆ ಮತ್ತು ಕೇಸರಿ ಶಾಲು ಮೆರವಣಿಗೆಯಲ್ಲಿ ಕಾಣಿಸಿಕೊಂಡಿದೆ. ಮೂರ್ತಿ ಸ್ಥಾಪನೆಗೆ ಹಣಕಾಸಿನ ನೆರವನ್ನು ಒದಗಿಸಿ ಭಕ್ತರನ್ನು ಸಂಘದ ಕಾರ್ಯಕರ್ತರನ್ನಾಗಿ ಬದಲಿಸುವ ಸಂಚನ್ನು ರೂಪಿಸಿದ್ದಾರೆ ಎಂದು ಆರೋಪಿಸಿದರು.
“ಈ ಗಲಭೆಯ ಹಿಂದೆ ಸಂಘ ಪರಿವಾರದ ಸಂಚು ಸ್ಪಷ್ಟವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರಿಗೆ ದಂಡನೆ ವಿಧಿಸಬೇಕು. ನಾಗಮಂಗಲದಲ್ಲಿ ಶಾಂತಿ ಸ್ಥಾಪಿಸಲು ಆದಿಚುಂಚನಗಿರಿ ಮಠದ ಸ್ವಾಮೀಜಿಗಳು ಪಾದಯಾತ್ರೆ ನಡೆಸಿ, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಶ್ರಮಿಸಬೇಕು” ಎಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗೆ ಆಗ್ರಹಿಸಿ ಪ್ರತಿಭಟನೆ
“ಸಂಘ ಪರಿವಾದ ಮೆದುಳು ಹಾಗೂ ಜೆಡಿಎಸ್‌ನ ಕೈಕಾಲು ಸೇರಿ ನಡೆಸಿದ ಗಲಭೆಯಲ್ಲಿ ₹25 ಕೋಟಿಗೂ ಅಧಿಕ ಆಸ್ತಿಪಾಸ್ತಿ ನಷ್ಟವುಂಟಾಗಿ ಇಲ್ಲಿನ ವ್ಯಾಪಾರಿಗಳು ಬೀದಿಗೆ ಬಿದ್ದಿದ್ದಾರೆ. ನಷ್ಟ ಅನುಭವಿಸಿದ ಎಲ್ಲರಿಗೂ ಪರಿಹಾರ ಕಟ್ಟಿಕೊಡಬೇಕು” ಎಂದು ಆಗ್ರಹಿಸಿದರು.
ಸಿಪಿಐಎಂ ಕಾರ್ಯಕಾರಿ ಮಂಡಳಿ ಸದಸ್ಯೆ ಸಿ ಕುಮಾರಿ, ಜಿಲ್ಲಾ ಸಮಿತಿ ಸದಸ್ಯ ಆರ್ ಕೃಷ್ಣ, ಬಿ ಹನುಮೇಶ್ ಸೇರಿದಂತೆ ಇತರರು ಇದ್ದರು.