ಆಪಾದಿತ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನನ್ನನ್ನು ಬಂಧಿಸಿದ ಬಳಿಕ, ಜೈಲಿನಲ್ಲಿ ನನ್ನ ಮತ್ತು ಕೇಜ್ರಿವಾಲ್ ನಡುವಿನ ಬಾಂಧವ್ಯವನ್ನು ಮುರಿಯಲು ಪ್ರಯತ್ನಿಸಲಾಯಿತು. ನನ್ನನ್ನು ಕೇಜ್ರಿವಾಲ್ ಅವರೇ ಬಂಧಿಸಿದ್ದಾರೆಂದು ಹೇಳಿದರು. ಪ್ರಕರಣದಲ್ಲಿ ಕೇಜ್ರಿವಾಲ್ ಹೆಸರು ಹೇಳಿದರೆ, ನೀವು ಉದ್ದಾರವಾಗುತ್ತೀರಿ ಎಂದು ಆಮಿಷವೊಡ್ಡಲಾಗಿತ್ತು ಎಂದು ಎಎಪಿ ನಾಯಕ, ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.
ಅಬಕಾರಿ ನೀತಿ ಪ್ರಕರಣದಲ್ಲಿ ಇಡಿಯಿಂದ ಬಂಧನಕ್ಕೊಳಗಾಗಿ ನಿರಂತರ 2 ವರ್ಷಗಳ ಕಾಲ ಜೈಲಿನಲ್ಲಿದ್ದ ಸಿಸೋಡಿಯಾ, ಜಾಮೀನು ಪಡೆದು ಈಗ ಹೊರಬಂದಿದ್ದಾರೆ. ಅವರು ಕೇಜ್ರಿವಾಲ್ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ‘ಜನತಾ ಕಿ ಅದಾಲತ್’ನಲ್ಲಿ ಮಾನಾಡಿದರು.
ನನಗೆ ಬಿಜೆಪಿ ಸೇರಲು ಹಲವಾರು ಆಫರ್‌ಗಳು ಬಂದಿವೆ. ‘ನಿಮ್ಮನ್ನು ಜೈಲಿನಲ್ಲಿ ಕೊಲ್ಲುತ್ತಾರೆ’ ಎಂಬ ಬೆದರಿಕೆಗಳೂ ಬಂದವು. ‘ರಾಜಕೀಯದಲ್ಲಿ ಯಾರೂ ಯಾರ ಬಗ್ಗೆಯೂ ಯೋಚಿಸುವುದಿಲ್ಲ. ನಿನ್ನ ಬಗ್ಗೆ ನೀನು ಯೋಚಿಸು’ ಎಂದು ಹೇಳಲಾಗಿತ್ತು. ಕಾಲೇಜಿನಿಂದಲೂ ನಾನು ಕೇಜ್ರಿವಲ್ ಜೊತೆಗಿದ್ದೇವೆ. 26 ವರ್ಷಗಳಿಂದ ಕೇಜ್ರಿವಾಲ್ ನನ್ನ ರಾಜಕೀಯ ಗುರು. ನಮ್ಮನ್ನು ಒಳಗಿನಿಂದ ಒಡೆಯಲು ಯತ್ನಿಸಲಾಗುತ್ತಿದೆ. ಆದರೆ, ರಾಮನಿಂದ ಲಕ್ಷ್ಮಣನನ್ನು ಬೇರ್ಪಡಿಸುವ ಶಕ್ತಿ ಈ ಜಗತ್ತಿನಲ್ಲಿ ಇಲ್ಲ” ಎಂದು ಸಿಸೋಡಿಯಾ ಹೇಳಿದ್ದಾರೆ.
“2002ರಲ್ಲಿ, ನಾನು ಪತ್ರಕರ್ತನಾಗಿದ್ದಾಗ, ನಾನು ₹5 ಲಕ್ಷ ಮೌಲ್ಯದ ಫ್ಲಾಟ್ ಖರೀದಿಸಿದ್ದೆ. ಇಡಿ ನನ್ನನ್ನು ಬಂಧಿಸಿದ ಬಳಿಕ ಅದನ್ನೂ ಇಡಿ ಸೀಜ್ ಮಾಡಿದೆ. ನನ್ನ ಖಾತೆಯಲ್ಲಿದ್ದ ₹10 ಲಕ್ಷವನ್ನೂ ನಿರ್ಬಂಧಿಸಲಾಗಿದೆ. ನನ್ನ ಮಗನ ಶುಲ್ಕವನ್ನು ಪಾವತಿಸಲು ನಾನು ಸಹಾಯಕ್ಕಾಗಿ ಬೇಡಿಕೊಳ್ಳುವಂತೆ ಮಾಡಿದರು” ಎಂದು ಸಿಸೋಡಿಯಾ ಆರೋಪಿಸಿದ್ದಾರೆ.