ದೇಶದ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗಲು ಡ್ರಗ್ಸ್, ಸಿನಿಮಾ, ಧಾರವಾಹಿ, ಜಾಹೀರಾತು, ಸರಾಯಿ, ಇಂಟರ್‌ನೆಟ್, ಮೊಬೈಲ್ ಸೇರಿದಂತೆ ಅನೇಕ ಮಾಫಿಯಾ ಕಾರಣವಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆ ರಾಜ್ಯ ಕಾರ್ಯದರ್ಶಿ ಜನಾಬ್ ಅಕ್ಬರ ಅಲಿ ಹೇಳಿದರು.
ಬೀದರ್ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಭಾನುವಾರ ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ʼಪ್ರವಾದಿ ಮುಹಮ್ಮದ್ (ಸ) ಮಹಾನ್ ಜಾರಿತ್ರ್ಯವಂತʼ ವಿಚಾರ ಗೋಷ್ಠಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ʼರಾಜಕೀಯ ಲಾಭಕ್ಕಾಗಿ ಬಡವರ ಮೇಲೆ ಸವಾರಿ ನಡೆಸಿ, ಬಡವರನ್ನು ಆರ್ಥಿಕವಾಗಿ ದುರ್ಬಲಗೊಳಿಸಲಾಗುತ್ತಿದೆ, ಬಂಡವಾಳಶಾಹಿ ವ್ಯವಸ್ಥೆ ತಮ್ಮ ರಾಜಕೀಯ ಲಾಭಕ್ಕಾಗಿ ಧರ್ಮಗಳ ಮಧ್ಯ ದ್ವೇಷ ಹುಟ್ಟಿಸುತ್ತಿದೆ. ಆದರೆ, ಹಿಂದೂ-ಮುಸ್ಲಿಮರು ಶತ್ರುಗಳಲ್ಲ, ನಮ್ಮ ನಿಜವಾದ ಶತ್ರುಗಳು ಈ ಮಾಫಿಯಾಗಳಾಗಿವೆʼ ಎಂದರು.
ʼಪ್ರವಾದಿ ಅವರು ನಮ್ಮೆಲ್ಲರ ದೇವರ ಸ್ಪಷ್ಟವಾದ ಪರಿಚಯ ಮಾಡಿಸಿದ್ದಾರೆ. ಅವನೊಬ್ಬನೇ ನಮ್ಮ ಸೃಷ್ಠಿಕರ್ತ ಆಗಿದ್ದಾನೆ. ಮನುಷ್ಯನ ನಡವಳಿಕೆ, ಬದುಕುವ ರೀತಿ ಮತ್ತು ತನ್ನನ್ನು ತಾನು ಹಾಗೂ ತನ್ನ ಸುತ್ತಲಿನ ಸಮಾಜದ ಜನರನ್ನು ಪ್ರೀತಿಯಿಂದ ನೋಡುವ ರೀತಿ, ಎಲ್ಲವೂ ಅಲ್ಲಾಹನು ಬಯಸುವ ರೀತಿಯದ್ದಾಗಿರಲಿ ಎಂದು ತಾವೇ ಒಂದು ಸುಂದರ ಮಾದರಿಯಾಗಿದ್ದಾರೆ. ಅವರ ಸಂದೇಶಗಳು ನಾವೆಲ್ಲರೂ ಬದುಕಿನಲ್ಲಿ ಮೈಗೂಡಿಸಿಕೊಂಡರೆ ಸ್ವಸ್ಥ ಸಮಾಜ ನಿರ್ಮಾಣವಾಗಲು ಸಾಧ್ಯʼ ಎಂದರು.

ಬೀದರ್ ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ಪರಮೇಶ್ವರ ನಾಯಕ್ ಅವರು ʼಪ್ರವಾದಿ ಮುಹಮ್ಮದ (ಸ) ಮಹಾನ್ ಜಾರಿತ್ರ್ಯವಂತʼ ವಿಷಯದ ಕುರಿತು ಮಾತನಾಡಿ, ʼಭಾರತದಲ್ಲಿರುವ ಜಾತಿ ಪದ್ಧತಿಯಂತೆ ಅಂದಿನ ಕಾಲದಲ್ಲಿ ಅರಬ್ ದೇಶದಲ್ಲಿ ಬೇರೂರಿದ್ದ ಮೇಲು-ಕೀಳು, ಕರಿಯ-ಬಿಳಿಯ ಎಂಬ ಬುಡಕಟ್ಟು ಜನಾಂಗದ ನಡುವಿನ ಭೇದವನ್ನು ಸಂಪೂರ್ಣವಾಗಿ ತೊಡೆದು ಹಾಕಿದರು. ಸರ್ವರೂ ಒಂದೇ ತಂದೆಯ ಮಕ್ಕಳು ಎಂಬ ಸಮಾನತೆ ತತ್ವವನ್ನು ಜಗತ್ತಿಗೆ ಸಾರಿದ ಮಾಹಾನ್ ಪುರುಷ ಪ್ರವಾದಿ ಮುಹಮ್ಮದರುʼ ಎಂದರು.
ʼಎಲ್ಲ ಜನರಿಗೂ ಸಮಾನತೆ, ಸಹಬಾಳ್ವೆ, ನಮಾಜ್, ಒಂದೇ ತಟ್ಟೆಯಲ್ಲಿ ಊಟ ಮಾಡುವ ಪದ್ದತಿ, ಹೆಣ್ಣು ಮಕ್ಕಳಿಗೆ ಶಿಕ್ಷಣ, ಆಸ್ತಿಯಲ್ಲಿ ಪಾಲು ನೀಡುವುದು ಸೇರಿದಂತೆ ಮಹಿಳೆಯರ ಸಮಾನ ಬದುಕಿಗೆ ಬೇಕಾದ ಮಹಿಳಾ ಹಕ್ಕುಗಳನ್ನು ನೀಡಿದರು. ಧರ್ಮ ಸಂದೇಶ ತಲುಪಿಸುವ ಉದ್ದೇಶದಿಂದ ವಿಧವೆ, ವಿಚ್ಛೇದಿತ ಮಹಿಳೆಯರನ್ನು ಮದುವೆಯಾಗಿ ಅನುಸರಿಸಿದರುʼ ಎಂದು ಹೇಳಿದರು.

ಪತ್ರಕರ್ತ ಬಾಲಾಜಿ ಕುಂಬಾರ ಮಾತನಾಡಿ, ʼಪ್ರವಾದಿಗಳು ಮನುಷ್ಯರ ನಡುವಿನ ಗೋಡೆ ಕೆಡವಿ ಪ್ರೀತಿಯ ಸೇತುವೆ ಕಟ್ಟಿ ಮನುಕುಲಕ್ಕೆ ಬೆಳಕಾಗಿದರು. ಪಾರದರ್ಶಕವಾದ ನಿಷ್ಕಳಂಕ ಮತ್ತು ಪರಿಪೂರ್ಣ ವ್ಯಕ್ತಿತ್ವದ ಮಾದರಿ ಅವರದು. ವಿನಯಶೀಲತೆ, ಸಮಚಿತ್ತತೆ, ಪೂರ್ಣಪ್ರಜ್ಞೆ, ಕ್ಷಮಾಗುಣ, ಸಹನೆ, ಔದಾರ್ಯ, ನ್ಯಾಯಸಮ್ಮತ, ಪ್ರಾಮಾಣಿಕತೆ ಮತ್ತು ಸಂಪೂರ್ಣ ಸ್ವಾರ್ಥರಹಿತ ಜೀವನದ ನಿದರ್ಶನಗಳೇ ಅವರ ಬದುಕು ಮತ್ತು ಬೋಧನೆಗಳಲ್ಲಿ ಅನಾವರಣಗೊಳ್ಳುವುದು. ಅವರ ಸಂದೇಶಗಳು ಮುಸ್ಲಿಂ ಸಮುದಾಯಕಷ್ಟೇ ಅಲ್ಲದೇ ಇಡೀ ಲೋಕದ ಜನರಿಗೆ ದಾರಿದೀಪವಾಗಿವೆʼ ಎಂದರು.
ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರು ʼಪ್ರವಾದಿ ಮುಹಮ್ಮದ ಲೇಖನ ಸಂಕಲನʼ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ʼಪ್ರವಾದಿಗಳು ತಮ್ಮ ಸಂದೇಶ ಬರೀ ಮುಸ್ಲಿಂ ಸಮುದಾಯಕ್ಕೆ ಮಾತ್ರ ಸೀಮಿತ ಅಲ್ಲ, ಜಗತ್ತಿನ ಒಳಿತಿಗಾಗಿ ಸರ್ವರಿಗೂ ತಿಳಿಸಿದ್ದಾರೆ. ಅವರ ಮಾನವೀಯ ಸಂದೇಶ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಸಂಸ್ಕಾರ ಎಂಬುದು ನಮ್ಮ ಮನೆಯಿಂದಲೇ ಶುರುವಾದರೆ ಮಾತ್ರ ಸಮಾಜ ಸುಧಾರಣೆಯಾಗುತ್ತದೆ. ಎಲ್ಲರೂ ದುಡಿಮೆಯ ಒಂದು ಪಾಲು ಸಮಾಜಕ್ಕೆ ದಾನದ ರೂಪದಲ್ಲಿ ಅರ್ಪಿಸಿದರೆ ನಿರ್ಗತಿಕರ ಬದುಕಿಗೆ ಸಹಾಯವಾಗಬಲ್ಲದುʼ ಎಂದು ನುಡಿದರು.
ಜಮಾಅತೆ ಇಸ್ಲಾಮೀ ಹಿಂದ್ ಸದಸ್ಯ ಮೌಲ್ವಿ ಮುಹಮ್ಮದ್ ಫಹೀಮುದ್ದೀನ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಗೀತಾ ಪಂಡಿತ ಚಿದ್ರಿ ಅವರು ಪ್ರವಾದಿ ಮುಹಮ್ಮದರ ಕುರಿತು ಮಾತನಾಡಿದರು. ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾಧ್ಯಕ್ಷ ಮುಹಮ್ಮದ್ ಮೌಅಝ್ಝಮ್ ಪ್ರಾಸ್ತಾವಿಕವಾಗಿ ಮಾಡಿದರು.

ಸಮಾರಂಭದಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಲಿಂ ಪಾಷಾ, ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಬೀದರ್ ತಾಲೂಕು ಕಸಾಪ ಅಧ್ಯಕ್ಷ ಎಂ.ಎಸ್.ಮನೋಹರ್, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ, ಸದ್ಭಾವನಾ ಮಂಚ ಜಿಲ್ಲಾ ಸಂಚಾಲಕ ಗುರುನಾಥ ಗಡ್ಡೆ, ವಿಶ್ವಕ್ರಾಂತಿ ದಿವ್ಯಪೀಠ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಸೇರಿದಂತೆ ಪ್ರಮುಖರಾದ ಡಾ.ಸೈಯದ್ ಹುಸಾಮೋದ್ದಿನ್ ಉಝೇರ್ ಡಾ.ಕುಮಾರ್ ದೇಶಮುಖ, ವೀರಭದ್ರಪ್ಪ ಉಪ್ಪಿನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಈ ಸುದ್ದಿ ಓದಿದ್ದೀರಾ? ದೆಹಲಿ ಮುಖ್ಯಮಂತ್ರಿಯಾಗಿ ಆತಿಶಿ ಪ್ರಮಾಣವಚನ ಸ್ವೀಕಾರ; ಕಿರಿಯ ಸಿಎಂ ಎಂಬ ಹೆಗ್ಗಳಿಕೆ
ಸೈಯದ್ ಅತಿಕುಲ್ಲ ಪವಿತ್ರ ಕುರಾನ್ ಪಠಿಸಿದರು, ಕುರಾನ್ ಕನ್ನಡ ಅನುವಾದ ಸೈಯದ್ ಫುರ್ಖಾನ್ ಪಾಷಾ ನಡೆಸಿಕೊಟ್ಟರು. ಮಹಮ್ಮದ್ ನಿಝಾಮೋದ್ದಿನ್ ಸ್ವಾಗತಿಸಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಸಂಘಟಕರು, ಮಹಿಳೆಯರು, ಗಣ್ಯರು ಪಾಲ್ಗೊಂಡಿದ್ದರು.