ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಗೋಕಾಕ ನಗರದ ಮಹಾಲಕ್ಷ್ಮೀ ಅರ್ಬನ್ ಕೋಂ ಆಫ್ ಕ್ರೆಡಿಟ್ ಬ್ಯಾಂಕಿನಲ್ಲಿ ನಡೆದ 74.86 ಕೋಟಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾ ಶಂಕರ್ ಗುಳೇದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಕಾಕ್‌ನಲ್ಲಿರುವ ಮಹಾಲಕ್ಷ್ಮೀ ಅರ್ಬನ್ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ 74.86 ಕೋಟಿ ಅವ್ಯವಹಾರದ ಕುರಿತು ಈಗಾಗಲೇ ಗೋಕಾಕ್ ನಗರ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಅವ್ಯವಹಾರದಲ್ಲಿ ಒಟ್ಟು 14 ಜನ ಭಾಗಿಯಾಗಿದ್ದು, 5 ಆರೋಪಿಗಳು ಬ್ಯಾಂಕ್ ಸಿಬ್ಬಂದಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸಾಗರ ಹನುಮಂತ ಸಬಕಾಳೆ ಮುಖ್ಯ ಆರೋಪಿಯಾಗಿದ್ದು, ಇತನು ಎ1 ಆರೋಪಿಯಾಗಿದ್ದಾನೆ. ಈತನ ಆಸ್ತಿಯ ಮೌಲ್ಯ 6.97 ಕೋಟಿ ಆಗಿದೆ. ಈ ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳ ಸಹಕಾರದೊಂದಿಗೆ 112 ಆಸ್ತಿಗಳನ್ನು ಜಪ್ತಿ ಮಾಡಿದ್ದಾರೆ. ಇದರ ಮೌಲ್ಯ 13ಕೋಟಿ 17ಲಕ್ಷ. ಇದರ ಮಾರುಕಟ್ಟೆ ಮೌಲ್ಯ 50 ಕೋಟಿ ಇದೆ ಎಂದು ಅಂಕಿ-ಅಂಶಗಳನ್ನು ಎಸ್‌ಪಿ ವಿವರಿಸಿದ್ದಾರೆ.
ಇದನ್ನು ಓದಿದ್ದೀರಾ? ಗೋಕಾಕ್ | ಕೋ-ಆಪರೇಟಿವ್ ಬ್ಯಾಂಕ್‌ನಿಂದ ₹74 ಕೋಟಿ ವಂಚನೆ ಆರೋಪ: 14 ಜನರ ವಿರುದ್ಧ ದೂರು ದಾಖಲು
11 ಆರೋಪಿಗಳು ಬ್ಯಾಂಕಿನಲ್ಲಿ 6 ಕೋಟಿ ಎನ್ ಡಿ ಇಟ್ಟು ಬೇರೆಯವರ ಹೆಸರಲ್ಲಿ 2021ರಿಂದ 2024ರ ಅವಧಿಯಲ್ಲಿ 81 ಕೋಟಿ ಸಾಲ ಪಡೆದಿದ್ದಾರೆ. ಆರೋಪಿಗಳ ಬಂಧನಕ್ಕೆ ತಂಡ ರಚನೆ ಮಾಡಲಾಗಿದೆ ಎಂದು ಡಾ.ಭೀಮಾ ಶಂಕರ್ ಗುಳೇದ್ ತಿಳಿಸಿದ್ದಾರೆ.
ಏನಿದು ಪ್ರಕರಣ?
ಗೋಕಾಕ್ ನಗರದ ಮಹಾಲಕ್ಷ್ಮೀ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕಿನಲ್ಲಿ 74.87 ಕೋಟಿ ವಂಚನೆಯ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಬ್ಯಾಂಕ್ 14 ಸಿಬ್ಬಂದಿಗಳ ವಿರುದ್ಧ ಬ್ಯಾಂಕ್ ಠೇವಣಿದಾರರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

2021ರಿಂದ 2024ರ ವರೆಗೆ ಬ್ಯಾಂಕಿನ ಓರ್ವ ಸಿಬ್ಬಂದಿ ಸೇರಿದಂತೆ 14 ಜನರು ಹಣವನ್ನು ಲೂಟಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ಬ್ಯಾಂಕ್‌ನಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳಾದ ಸಾಗರ ಸಬಕಾಳೆ, ವಿಶ್ವನಾಥ ಬಾಗಡೆ, ಸಂಭಾಜೀ ಗುರುಪಾದೆ, ಸಿದ್ದಪ್ಪ ಪವಾರ, ದಯಾನಂದ ಉಪ್ಪಿನ ಸೇರಿ ತಮ್ಮ ಸಂಬಂಧಿಕರ ಜೊತೆಗೂಡಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಂಜನಾ ಸಬಕಾಳೆ, ಮಲ್ಲವ್ವ ಸಬಕಾಳೆ, ಗೌರವ್ವ ಹವಾಲ್ದಾರ, ಚಂದ್ರವ್ವ ಹವಾಲ್ದಾರ, ಪರಸಪ್ಪ ಮಾಳೋಜಿ, ರಾಧಾ ಮಾಳೋಜಿ, ಸಂದೀಪ ಮರಾಠೆ ಹಾಗು ಕಿರಣ ಸುಪಾಲಿ ಎಂಬವರ ವಿರುದ್ಧ ವಂಚನೆ ಆರೋಪ ಹೊರಿಸಲಾಗಿದೆ.
ಬ್ಯಾಂಕ್ ಸಿಬ್ಬಂದಿ ಹಣ ಲಪಟಾಯಿಸಿರುವ ಘಟನೆ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಗ್ರಾಹಕರು ಬ್ಯಾಂಕಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಸಿಬ್ಬಂದಿ ಮತ್ತು ಬ್ಯಾಂಕ್ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
