ಗಂಗೇನಹಳ್ಳಿ ಡಿನೋಟಿಫೈ ಪ್ರಕರಣದಲ್ಲಿ ಜಮೀನಿನ ವಾರಸುದಾರರಿಗೆ ಸಂಬಂಧವೇ ಇಲ್ಲದ ದಾರಿಯಲ್ಲಿ ಹೋಗೋ ದಾಸಯ್ಯ, ಯಾರೋ ಬೇನಾಮಿ ವ್ಯಕ್ತಿ ರಾಜಶೇಖರಯ್ಯ ಎಂಬವವರಿಗೆ ಅರ್ಜಿ ಸಲ್ಲಿಸಲು ಸೂಚಿಸಿದವರು ಯಾರು ಎಂಬುದನ್ನು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಆಗ್ರಹಿಸಿದರು.
ಬೆಂಗಳೂರು ಗಂಗೇನಹಳ್ಳಿ ಬಡಾವಣೆ ಸರ್ವೇ ನಂಬರ್ 7/1ಬಿ, 7/1 ಸಿ ಮತ್ತು 7/1 ಡಿ ರಲ್ಲಿನ 1 ಎಕರೆ 11 ಗುಂಟೆ ಸರ್ಕಾರಿ ಜಮೀನನ್ನು ಮಾಜಿ ಸಿಎಂಗಳಾದ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಜಂಟಿಯಾಗಿ ಸತ್ತೋದವರ ಹೆಸರಲ್ಲಿ ಡಿನೋಟಿಫೈ ಮಾಡಿ ಕುಮಾರಸ್ವಾಮಿ ಅವರ ಬಾಮೈದನ ಹೆಸರಲ್ಲಿ ನೋಂದಣಿ ಮಾಡಿರುವ ಪ್ರಕರಣ ಈ ದಿನ.ಕಾಮ್ ಎಕ್ಸ್‌ಕ್ಲೂಸಿವ್ ವರದಿ ಮಾಡಿತ್ತು. ಇದೇ ಪ್ರಕರಣ ಬಗ್ಗೆ ವಿಕಾಸಸೌಧಲ್ಲಿ ಸೋಮವಾರ ಸುದ್ದಿಗೋಷ್ಠಿ ಕರೆದು ಸಚಿವರು ಮಾಹಿತಿ ನೀಡಿದರು.
“1978ರಲ್ಲಿ ಭೂ ಸ್ವಾಧೀನಗೊಂಡ ಜಮೀನಿಗೆ ಡಿನೋಟಿಫೈ ಮಾಡಲು ಬೇನಾಮಿ ವ್ಯಕ್ತಿ ರಾಜಶೇಖರಯ್ಯ ಎಂಬುವರು 2007ರಲ್ಲಿ ಸಿಎಂ ಕುಮಾರಸ್ವಾಮಿಯವರಿಗೆ ಅರ್ಜಿ ಹಾಕಿದ್ದಾರೆ. ಅಸಲಿಗೆ ರಾಜಶೇಖರಯ್ಯನಿಗೂ ಜಮೀನಿಗೂ ಸಂಬಂಧವೇ ಇಲ್ಲ. ಈತ ಯಾರು ಅಂತ ಈವರೆಗೂ ಗೊತ್ತಿಲ್ಲ. ತನಿಖೆಯಿಂದ ಇದು ಬಹಿರಂಗವಾಗಬೇಕಿದೆ. ಆದರೆ, ಈ ಅರ್ಜಿ ಬಂದ ಕೂಡಲೇ ಕುಮಾರಸ್ವಾಮಿಯವರು ಅದೇ ದಿನ ಅಧಿಕಾರಿಗಳಿಗೆ ಪತ್ರ ಬರೆದು ಈ ಅರ್ಜಿ ಮೇಲೆ ಕ್ರಮ ಕೈಗೊಳ್ಳಲು ಸೂಚಿಸುತ್ತಾರೆ. ಕುಮಾರಸ್ವಾಮಿ ಅವರ ಹಿಂದಿನ ಆಸಕ್ತಿ ಏನು ಎಂಬುದು ಬಯಲಾಗಬೇಕಲ್ವಾ?” ಎಂದರು.
ಈ ಸುದ್ದಿ ಓದಿದ್ದೀರಾ? ಈದಿನ.ಕಾಮ್ ತನಿಖಾ ವರದಿ | ಸರ್ಕಾರಿ ಸ್ವತ್ತು ಗುಳುಂ ಹಗರಣ; ಒಂದೇ ಎಫ್‌ಐಆರ್‌ನಲ್ಲಿ ಇಬ್ಬರು ‘ಸಿಎಂ’ಗಳು
“ಸತ್ತವರ ಹೆಸರಿಗೆ ಡಿನೋಟಿಫೈ ಮಾಡುವುದು ಅಪರಾಧ ಅಲ್ಲವೇ? ರಾಜಕಾರಣದಲ್ಲಿ ವ್ಯಯಕ್ತಿಕ ದಾಳಿ ನಡೆಸುವುದು ನಿಂದಿಸುವುದು ಕುಮಾರಸ್ವಾಮಿಯವರಿಗೆ ಸಾಮಾನ್ಯ ಸಂಗತಿಯಾಗಿದೆ. ಆದರೆ, ನಮ್ಮದು ಅಂತಹ ಸಂಸ್ಕೃತಿಯಲ್ಲ. ನಾವು ಅಂತಹ ಸಂಸ್ಕೃತಿಗೆ ಎಂದಿಗೂ ಜೋತು ಬೀಳುವುದಿಲ್ಲ. ಅಲ್ಲದೆ, ಇಂತಹ ನಿಂದನೆಗಳು ವ್ಯಯಕ್ತಿಕ ದಾಳಿಗಳಿಗೆ ನಾವು ಬಗ್ಗುವವರೂ ಅಲ್ಲ” ಎಂದು ಸ್ಪಷ್ಟಡಿಸಿದರು.
ಮುಂದುವರೆದು, “ಈಗಲೂ ನಾನು ಅದೇ ಪ್ರಶ್ನೆಯನ್ನು ಮುಂದಿಡುತ್ತೇನೆ. ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ಈ ಜಮೀನಿನ ಡಿನೋಟಿಫೈ ಗೆ ಅತ್ಯುತ್ಸಾಹ ತೋರಿದ್ದು ಏಕೆ? ಇವರ ಅತ್ತೆ ಈ ಭೂಮಿಯನ್ನು ತಮ್ಮ ಹೆಸರಿಗೆ ಜಿಪಿಎ ಮಾಡಿಸಿಕೊಂಡದ್ದು ಸುಳ್ಳೇ? ಅಂತಿಮವಾಗಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರ ಸಹೋದರನ ಹೆಸರಿಗೆ ಈ ಜಮೀನು ನೋಂದಣಿಯಾಗಿಲ್ಲವೇ? ಇದು ಅಧಿಕಾರದ ದುರ್ಬಳಕೆ ಅಲ್ಲವೇ? ಈ ಬಗ್ಗೆ ಕುಮಾರಸ್ವಾಮಿಯವರ ಸ್ಪಷ್ಟನೆ ನೀಡಲಿ ಸಾಕು” ಎಂದು ಸವಾಲು ಹಾಕಿದರು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.