ಕೆಲಸದ ಅವಧಿ ಹೆಚ್ಚಳ ಮಾಡುವುದಕ್ಕೆ ಸರ್ಕಾರ ಮುಂದಾಗಿರುವುದು ಸೇರಿದಂತೆ ಕಾರ್ಮಿಕ ವಿರೋಧಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೈಬಿಡಲು ಒತ್ತಾಯಿಸಿ ಕಾರ್ಮಿಕ ಸಂಘಗಳ ಜಂಟಿ ಸಮಿತಿ ನೇತೃತ್ವದಲ್ಲಿ ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಲಾಯಿತು.
ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕಾರ್ಮಿಕ ವಿರೋಧಿಯಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಲು ಮುಂದಾಗಿದೆ. ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ವಹಿಸಿದಾಗಿನಿಂದ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಾ ಬಂದಿದೆ. ಈ ನೀತಿಗಳನ್ನು ವಿರೋಧಿಸಿ ಕಾರ್ಮಿಕರು ದೇಶಾದ್ಯಂತ ಹಲವಾರು ಮುಷ್ಕರಗಳನ್ನು ನಡೆಸುತ್ತಾ ಬಂದರೂ ಕೂಡ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಆಕ್ರಮಣವನ್ನು ಕಾರ್ಮಿಕರ ಮೇಲೆ ಮುಂದುವರಿಸಿದ್ದಾರೆ ಎಂದು ದೂರಿದರು.
ಮಹಿಳೆಯರಿಗೆ ಸುರಕ್ಷಿತ ಕ್ರಮಗಳಿಲ್ಲ, ಮಹಿಳೆಯರ ರಕ್ಷಣೆಗೆ ಭದ್ರತೆ ಒದಗಿಸಬೇಕು. ರಾತ್ರಿ ಪಾಳಿಯಲ್ಲಿ ನಿಯಮ ಕೈಬಿಡಲು ಒತ್ತಾಯಿಸಿದ ಪ್ರತಿಭಟನಾಕಾರರು, ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಪಡಿಸಲು ನಿರಂತರವಾಗಿ ಒತ್ತಾಯಿಸಲಾಗಿದೆ. ಆದರೂ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಪಡಿಸಿಲ್ಲ. ಕಾರ್ಮಿಕರ ಕೆಲಸಕ್ಕೆ ಅನುಗುಣವಾಗಿ ಕನಿಷ್ಠ ವೇತನ ನಿಗದಿಪಡಿಸಬೇಕು. ಕಾರ್ಮಿಕರ ಕಾಯ್ದೆ ತಿದ್ದುಪಡಿ ಮಾಡುವುದನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.
ಈ ಬಾರಿಯೂ ಅಧಿಕಾರದ ಚುಕ್ಕಾಣೆ ಹಿಡಿದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ದೇಶದ ಜನತೆ ಮತ್ತು ಕಾರ್ಮಿಕ ವರ್ಗದ ಹಿತಾಸಕ್ತಿಯನ್ನು ಕಡೆಗಣಿಸುತ್ತಿದೆ. ಕಾರ್ಮಿಕರಿಗೆ 8 ಗಂಟೆ ಬದಲಾಗಿ 12 ಗಂಟೆವರೆಗೆ ಕೆಲಸದ ಅವಧಿಯನ್ನು ಹೆಚ್ಚಿಸಿಲು ಮುಂದಾಗಿದೆ. ಇದು ಖಂಡನೀಯ. ಇದನ್ನು ಕೇಂದ್ರ ಸರಕಾರ ಹಿಂಪಡೆಯಬೇಕು. ಇಲ್ಲದಿದ್ದರೆ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಇದನ್ನು ಓದಿದ್ದೀರಾ? ಬಳ್ಳಾರಿ | ಎರಡು ವರ್ಷದ ಮಗುವಿಗೆ ಲಿವರ್ ಸಮಸ್ಯೆ: ದಾನಿಗಳ ನೆರವಿಗಾಗಿ ಕಾಯುತ್ತಿರುವ ಪೋಷಕರು
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷೆ ಹೆಚ್ ಪದ್ಮಾ, ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಎನ್ ಎಸ್ ವೀರೇಶ, ಎಐಟಿಯುಸಿ ಆನಂದ, ಐಎನ್‌ಟಿಯುಸಿ ಜಿಲ್ಲಾದ್ಯಕ್ಷ ತಿಮ್ಮಪ್ಪ ಸ್ವಾಮಿ, ಸಿಐಟಿಯು ಜಿ.ಕಾರ್ಯದರ್ಶಿ ಡಿಎಸ್ ಶರಣಬಸವ, ಎಐಯುಟಿಯುಸಿ ಕಾರ್ಯದರ್ಶಿ ಮಹೇಶ ಚೀಕಲಪರ್ವಿ, ಎಸ್ ಎಂ ಪೀರಾ, ಎಂ.ಶರಣಗೌಡ, ಎಂ.ರವಿ, ಸಲಾವುದ್ದಿನ್, ಶ್ರೀನಿವಾಸ ಕೊಮಾರಿ, ವಿಎಂ ಉಕ್ಕಲಿ ಸೇರಿಸಂತೆ ಅನೇಕರು ಇದ್ದರು.
