ಸಮಾಜದಲ್ಲಿ ವಿಕಲಚೇತನರನ್ನು ಅಶಕ್ತರೆಂದು ಕೀಳಿರಿಮೆಯಿಂದ ನೋಡದೇ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ವಿವಿಧ ಕ್ಷೇತ್ರಗಳಲ್ಲಿರುವ ಸೌಲಭ್ಯಗಳನ್ನು ಪಡೆಯಲು ಸಂಘಟಿತರಾಗಿ ಹೋರಾಡಬೇಕು ಎಂದು ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಹುಮನಾಬಾದ್ ತಾಲೂಕು ಸಂಯೋಜಕ ಪ್ರದೀಪ ಹೇಳಿದರು.
ಹುಮನಾಬಾದ್ ಪಟ್ಟಣದ ಆರ್ಬಿಟ್ ಸಂಸ್ಥೆಯ ಸಭಾಂಗಣದಲ್ಲಿ ಆರ್ಬಿಟ್ ಸಂಸ್ಥೆ ಹಾಗೂ ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಸಹಯೋಗದಲ್ಲಿ ನಡೆದ ಮಾನಸಿಕ ಅಸ್ವಸ್ಥರ ಹಾಗೂ ವಿಕಲಚೇತನರಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಸಂಯೋಜಕ ಪ್ರವೀಣ್ ಮಾತನಾಡಿ, ʼಡಾ.ಬಿ.ಆರ್.ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ತತ್ವಗಳು ಮೈಗೂಡಿಕೊಂಡು ನಾವೆಲ್ಲರೂ ಹೆಚ್ಚಿನ ಅಧ್ಯಯನ ಮಾಡಬೇಕು. ಸಂಘಟನಾತ್ಮಕದಿಂದ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕುʼ ಎಂದು ಸಲಹೆ ನೀಡಿದರು.
ಆರ್ಬಿಟ್ ಸಂಸ್ಥೆಯ ನಿರ್ದೇಶಕ ಫಾದರ್ ವಿಕ್ಟರ್ ವಾಸ್ ಮಾತನಾಡಿ, ʼ ಸಂಘಟನಾತ್ಮಕ ಸಾಮರ್ಥ್ಯದಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಸರ್ಕಾರ ಅನೇಕ ಯೋಜನೆಗಳು ರೂಪಿಸಿದರೂ ಅದು ಸಂಘಟನಾತ್ಮಕ ಶಕ್ತಿಯ ಕೊರತೆಯಿಂದ ಜನಸಾಮಾನ್ಯರಿಗೆ ಸಮಪರ್ಕವಾಗಿ ತಲುಪಿತ್ತಿಲ್ಲʼ ಎಂದರು.
ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ಸಾವಿನಲ್ಲೂ ಒಂದಾದ ದಂಪತಿ
ಕಾರ್ಯಕ್ರಮದಲ್ಲಿ ಬಿಆರ್‌ಸಿ ಚಂದ್ರಕಲಾ, ಬಿಲಾಲ್ ಹಾಗೂ ಎಪಿಎಫ್ ಸಂಸ್ಥೆಯ ಪ್ರತಿನಿಧಿಗಳಾದ ವೀರೇಶ್, ಆರ್ಬಿಟ್ ಸಂಸ್ಥೆಯ ನಿರ್ದೇಶಕರು, ಸಿಬ್ಬಂದಿ ಮತ್ತು 70 ಜನ ವಿಕಲಚೇತನ ಫಲಾನುಭವಿಗಳು ಭಾಗವಹಿಸಿದರು.