ಗುಮ್ಮಟ ನಗರಿ ವಿಜಯಪುರ ನಗರ ಮತ್ತು ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಇಡೀ ಜಿಲ್ಲೆ ನಲುಗಿಹೋಗಿದೆ. ಜನ-ಜೀವನ ಅಸ್ತವ್ಯಸ್ತವಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿದೆ. ಸೋಮವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ತಗ್ಗು ಪ್ರದೇಶಗಳು ಜಾಲಾವೃತವಾಗಿವೆ. ಹಳ್ಳಗಳು ತುಂಬಿ ಹರಿಯುತ್ತಿವೆ. ಜಮೀನಿನಲ್ಲೂ ನೀರು ತುಂಬಿದ್ದು, ಬೆಳೆ ನಷ್ಟವೂ ಸಂಭವಿಸಿದೆ.
ಜಿಲ್ಲೆಯಲ್ಲಿ ಸುಮಾರು ಐದು ಗಂಟೆಗಳ ಕಾಲ ನಿರಂತರವಾಗಿ ಮಳೆಯಾಗಿದೆ. ವಿಜಯಪುರ ನಗರದ ಶಾಲಿ ನಗರ, ಭಾಗವಾನ್ ಕಾಲೊನಿ, ರಹೀಂ ನಗರ, ಮುಜಾವರ್ ಪ್ಲಾಟ್, ಪ್ರೈಂ ನಗರ, ಕನ್ನಾನ್ ನಗರ, ನೆಹರೂ ನಗರ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿವೆ. ಮನೆ, ಅಂಗಡಿಗಳಿಗೆ ನೀರು ನುಗ್ಗಿದೆ.
ತಿಕೋಟಾ ತಾಲೂಕಿನಲ್ಲಿ ಹಳ್ಳಗಳು ತುಂಬಿ ಹರಿಯುತ್ತಿವೆ. ಕಳ್ಳಕವಟಗಿ ಗ್ರಾಮದ ಸಂಗಮನಾಥ ದೇವಾಲಯ ಬಳಿಯ ಹಳ್ಳ ಮೈದುಂಬಿ ಹರಿಯುತ್ತಿದ್ದು, ದೇವಾಲಯವೂ ಜಾಲಾವೃತಗೊಂಡಿದೆ. ಅಲ್ಲದೆ, ಹಳ್ಳಕ್ಕೆ ಕಟ್ಟಲಾಗಿರುವ ಸೇತುವೆಯೂ ಮುಳುಗಿದ್ದು, ವಿಜಯಪುರ ಮತ್ತು ಜಾಲಗೇರಿ, ಹುಬನೂರ ನಡುವಿನ ಸಂಪರ್ಕ ಸ್ಥಗಿತಗೊಂಡಿತ್ತು. ಇದೀಗ, ನೀರು ಹರಿಯುವಿಕೆ ಇಳಿಕೆಯಾಗಿದ್ದು, ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.
ಜಿಲ್ಲೆಯ ಪ್ರಮುಖ ನದಿಗಳಲ್ಲಿ ಒಂದಾದ ಡೋಣಿ ನದಿಯು ಉಕ್ಕು ಹರಿಯುತ್ತಿದೆ. ನದಿ ತೀರದ ಜಮೀನುಗಳಿಗೆ ನೀರು ನುಗ್ಗಿದ್ದು, ಬೆಳೆ ಹಾನಿ ಎದುರಾಗಿದೆ. ಜೊತೆಗೆ, ಗ್ರಾಮಸ್ಥರಲ್ಲಿ ಪ್ರವಾಹ ಭೀತಿಯೂ ಉಂಟಾಗಿದೆ.