ಆಂಧ್ರಪ್ರದೇಶದ ತಿರುಪತಿ ಲಡ್ಡು ವಿವಾದದ ನಂತರ ಕರ್ನಾಟಕದ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ.
ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ತಿರುಪತಿ ದೇವಸ್ಥಾನದ ಲಡ್ಡುವಿನಲ್ಲಿ ದನದ ಕೊಬ್ಬು ಬಳಸಲಾಗಿದೆಯೆಂಬ ಆರೋಪದ ಬಳಿಕ ಕರ್ನಾಟಕದ ನಂದಿನಿ ತುಪ್ಪಕ್ಕೆ ದೇಶದ ದೇವಸ್ಥಾನಗಳಿಂದ ಹಾಗೂ ಜನರಿಂದ ಹೆಚ್ಚಿನ ಬೇಡಿಕೆ ಬಂದಿದೆ” ಎಂದು ಹೇಳಿದ್ದಾರೆ.
“ನಾವು ಅಧ್ಯಕ್ಷರಾದ ಅವಧಿಯಿಂದಲೇ ತಿರುಮಲ ತಿರುಪತಿ ದೇವಸ್ಥಾನಕ್ಕೆ ತುಪ್ಪ ಕಳುಹಿಸಿಕೊಡುತ್ತಿದ್ದೆವು. ಆದರೆ ರಾಜಕೀಯ ವ್ಯಕ್ತಿ ದೇವಸ್ದಾನದ ವ್ಯವಸ್ಥಾಪಕರಾದಾಗ ಕಡಿಮೆ ದರದಲ್ಲಿ ನಂದಿನಿ ತುಪ್ಪಕ್ಕೆ ಬೇಡಿಕೆಯಿಟ್ಟ ಕಾರಣ ನಿರಾಕರಿಸಿದ್ದೆವು. ಇದೀಗ ನಾಲ್ಕು ವರ್ಷಗಳ ನಂತರ ಮತ್ತೆ ತಿರುಪತಿ ದೇವಸ್ಥಾನಕ್ಕೆ ನಂದಿನಿ ತುಪ್ಪ ಪೊರೈಕೆ ಆರಂಭವಾಗಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಭಾರೀ ಮಳೆಗೆ ನಲುಗಿದ ಗುಮ್ಮಟ ನಗರಿ; ಜನ-ಜೀವನ ಅಸ್ತವ್ಯಸ್ತ
“ಚಂದ್ರಬಾಬು ನಾಯ್ಡು ಆರೋಪದಿಂದ ದೇಶದಾದ್ಯಂತ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ. ಕಳೆದ ವರ್ಷ ಬೆಮುಲ್ ₹68 ಲಕ್ಷ ಲಾಭ ಗಳಿಸಿದೆ. ಮುಂದಿನ ವರ್ಷ ₹2 ಕೋಟಿ ಲಾಭ ಗಳಿಸುವ ಗುರಿ ಹೊಂದಿದೆ. ದಿನಕ್ಕೆ 4 ಲಕ್ಷ ಲೀಟರ್ ಹಾಲು ಸಂಗ್ರಹವಾದರೆ ಮೆಗಾ ಡೈರಿ ಸ್ಥಾಪಿಸಲು ಪ್ರಯತ್ನಿಸುತ್ತೇವೆ. ಇದರಿಂದ ನಂದಿನಿ ಉತ್ಪನ್ನಗಳ ಸಣ್ಣ ತಯಾರಿಕೆಗೆ ಅನುಕೂಲವಾಗಿದೆ” ಎಂದು ತಿಳಿಸಿದ್ದಾರೆ.