ಬೆಳಗಾವಿ ಜಿಲ್ಲೆಯ ಸವದತ್ತಿ ಬೈಲಹೊಂಗಲ, ಯರಗಟ್ಟಿ ರಾಮದುರ್ಗ ತಾಲೂಕಿನ ರೈತರು ಈ ವರ್ಷ ಬೆಳ್ಳುಳ್ಳಿ ಬೆಳೆ ಉತ್ತಮವಾಗಿದ್ದು, ಅದಕ್ಕೆ ತಕ್ಕಂತೆ ಉತ್ತಮ ಬೆಲೆಯೂ ಸಿಕ್ಕಿದೆ. 2023ರಲ್ಲಿ ₹14,000 ದಿಂದ ₹15,000 ಇದ್ದ ಬೆಲೆ ಪ್ರಸ್ತುತ ವರ್ಷ ₹26,000ಕ್ಕೆ ಏರಿಕೆ ಕಂಡಿದೆ.
ಬೈಲಹೊಂಗಲ, ಯರಗಟ್ಟಿ, ಸವದತ್ತಿ ಭಾಗದ ಬೆಳ್ಳುಳ್ಳಿ ಬೆಳೆಗಾರರು ತಾವು ಬೆಳೆದ ಬೆಳ್ಳುಳ್ಳಿಯನ್ನು ರಾಮದುರ್ಗ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿದ್ದಾರೆ.

ಯರಗಟ್ಟಿ ತಾಲೂಕಿನ ಬೆಳ್ಳುಳ್ಳಿ ಬೆಳೆಗಾರ ಲಕ್ಕಪ್ಪ ಪೂಜೆರ ಈ ದಿನ.ಕಾಮ್ ಜೊತೆ ಮಾತನಾಡಿ, “ಬೆಳ್ಳುಳ್ಳಿ 3 ತಿಂಗಳ ಬೆಳೆಯಾಗಿದ್ದು, ಒಂದು ಎಕರೆಗೆ ಸುಮಾರು ₹80 ಸಾವಿರ ರೂಪಾಯಿ ಖರ್ಚಾಗುತ್ತದೆ. ಉತ್ತಮ ಇಳುವರಿ ಬಂದರೆ ಒಂದು ಎಕರೆಯಲ್ಲಿ 25 ಕ್ವಿಂಟಲ್ ಬೆಳ್ಳುಳ್ಳಿ ಬೆಳೆಯಬಹುದು. ಖರ್ಚು ತೆಗೆದು ₹5 ಲಕ್ಷ ರೂಪಾಯಿ ರೈತರಿಗೆ ಸಿಗುತ್ತದೆ” ಎಂದು ಮಾಹಿತಿ ನೀಡಿದರು.
ಸವದತ್ತಿ ತಾಲೂಕಿನ ವಿಠ್ಠಲ ಕುರಿ ಮಾತನಾಡಿ, “ಮೆದುವಾದ ಮಣ್ಣಿನಲ್ಲಿ ಬೆಳೆದರೆ ಉತ್ತಮ ಇಳುವರಿ ಬರುತ್ತದೆ ಹಿಂದಿನ ವರ್ಷ ₹16,000 ಬೆಲೆಯಿತ್ತು. ಈ ವರ್ಷ ₹24,000 ರಿಂದ ₹25,000ದಂತೆ ಬೆಳ್ಳುಳ್ಳಿಗೆ ಉತ್ತಮ ಬೆಲೆ ಸಿಕ್ಕಿರುವುದು ರೈತರಿಗೆ ಖುಷಿ ತಂದಿದೆ” ಎಂದು ಸಂತಸ ವ್ಯಕ್ತಪಡಿಸಿದರು.
“ರಾಜ್ಯದ ಅನೇಕ ಭಾಗಗಳಲ್ಲಿ ವರ್ಷಕ್ಕೆ ಎರಡು ಬಾರಿ ಬೆಳ್ಳುಳ್ಳಿ ಬೆಳೆ ಬೆಳೆಯಲಾಗುತ್ತದೆ. ಈ ಸಸ್ಯಗಳ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಹಲವಾರು ರೋಗಗಳಿಗೆ ಒಳಗಾಗುತ್ತವೆ. ಬೆಳ್ಳುಳ್ಳಿ ಬೆಳೆಗೆ ಸೂಕ್ಷ್ಮ ಶಿಲೀಂಧ್ರ, ತುಕ್ಕು, ನೇರಳೆ ಮಚ್ಚೆ, ಸ್ಟೆಂಫಿಲಿಯಮ್ ಬ್ಲೈಟ್, ತಳದ ಕೊಳೆ ರೋಗ ಗಣನೀಯವಾಗಿ ಕಾರಣವಾಗುತ್ತದೆ. ಇದರಿಂದ ಬೆಳೆ ಇಳುವರಿಯಲ್ಲಿ ಕೊರತೆ ಹೊರತಾಗಿ, ಕೊಯ್ಲು, ಸಂಸ್ಕರಣೆ ಮತ್ತು ಮಾರುಕಟ್ಟೆ ಹಂತಗಳಲ್ಲಿ ರೋಗವು ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ತಿರುಪತಿ ಲಡ್ಡು ವಿವಾದ; ನಂದಿನಿ ತುಪ್ಪಕ್ಕೆ ಬೇಡಿಕೆ
“ಬೆಳ್ಳುಳ್ಳಿಗೆ ವಿಶೇಷವಾಗಿ ಹೊಲಗಳು ಮತ್ತು ಶೇಖರಣೆ ನಿರ್ವಹಣೆ, ಕೃಷಿ ಪದ್ಧತಿ ಮತ್ತು ಕೆಟ್ಟ ಶೇಖರಣೆಯಿಂದಾಗಿ ಶಿಲೀಂಧ್ರ ರೋಗಕಾರಕಗಳ ಸಂಖ್ಯೆಯಿಂದ ತೀವ್ರವಾಗಿ ಸೋಂಕಿಗೆ ಒಳಗಾಗುತ್ತವೆ. ಇದರಿಂದ ಬೆಳ್ಳುಳ್ಳಿ ಬೆಳೆಯು ನಾಶವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ರೈತರು ಎಚ್ಚರಿಕೆಯಿಂದ ನಿರ್ವಹಣೆ ಮಾಡಬೇಕು” ಎಂದು ಬೆಳ್ಳುಳ್ಳಿ ಬೆಳೆಗಾರರು ಮಾಹಿತಿ ನೀಡಿದರು.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು