- ಸುಳ್ಳು ಸುದ್ದಿ ಪ್ರಸಾರ ಮಾಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ
- ಅವಾಚ್ಯ ಪದಗಳಿಂದ ನಿಂದಿಸಿ ಶಾಸಕರಿಗೆ ತೇಜೋವಧೆ ಆರೋಪ
ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉದಯಶೆಟ್ಟಿ ಕುಮ್ಮಕ್ಕಿನಿಂದ ಅವರ ಕಾರ್ಯಕರ್ತರು ಪರಸ್ಪರ ದ್ವೇಷ ಭಾವನೆ, ವೈಯಕ್ತಿಕ ನಿಂದನೆ ಮಾಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಕಾರ್ಕಳ ಬಿಜೆಪಿ ಅಧ್ಯಕ್ಷ ಮಹಾವೀರ ಹೆಗ್ಡೆ ಮೇ 3ರಂದು ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.
“ಖಾಸಗಿ ಸುದ್ದಿ ವಾಹಿನಿಯೊಂದರ ಮುಖ್ಯಸ್ಥ ರಾಕೇಶ್ ಶೆಟ್ಟಿ ಅವರು ಉದಯ ಶೇಟ್ಟಿಯ ಕುಮ್ಮಕ್ಕಿನಿಂದ ವಿಡಿಯೋ ಹರಿಬಿಟ್ಟಿದ್ದಾರೆ. ಆ ವಿಡಿಯೋದಲ್ಲಿ ರಾಕೇಶ್ ಶೆಟ್ಟಿಯವರು ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಅವರ ವಿರುದ್ಧ ತುಳುವಿನಲ್ಲಿ ಅವಾಚ್ಯ ಪದಗಳಿಂದ ನಿಂದಿಸಿ ತೇಜೋವಧೆ ಮಾಡಿದ್ದಾರೆ. ಅಲ್ಲದೇ ವಾಹಿನಿಯ ಯುಟ್ಯೂಬ್ ಪ್ರೋಮೋದಲ್ಲಿ ‘ಬಿಜೆಪಿ ನಾಯಕರಿಗೆ ಮುಜುಗರ ತಂದ ವಿಡಿಯೋ ಪ್ರಕರಣ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಬೆಂಬಲಿಗನ ವಿಡಿಯೋ, ಶಾಸಕರ ರಾಸಲೀಲೆ’ ಎಂದೆಲ್ಲಾ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ” ಎಂದು ಆರೋಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಮಲ್ಲಿಕಾರ್ಜುನ ಖರ್ಗೆಯ ಸಾವು ಬಯಸಿದ ಬಿಜೆಪಿ ನಾಯಕ; ಮೋದಿ ಕ್ಷಮೆಗೆ ಕಾಂಗ್ರೆಸ್ ಆಗ್ರಹ
“ಈ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.