ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಖೇರ್ಡಾನಿಂದ ಚಿಕ್ಲಿ(ಯು) ಮಹಾರಾಷ್ಟ್ರ ಬಾರ್ಡರ್‌ವರೆಗೆ ನಿರ್ಮಿಸಲಾಗುತ್ತಿರುವ 8.5 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಮಾಜಿ ಸಚಿವ, ಔರಾದ್ ಶಾಸಕ ಪ್ರಭು.ಬಿ ಚವ್ಹಾಣ ಸೋಮವಾರ ದಾಬಕಾ(ಸಿ) ಗ್ರಾಮದಲ್ಲಿ ಭೂಮಿ ಪೂಜೆ ನೆರವೇರಿಸಿದರು.
ʼಕೆಲಸ ಗುಣಮಟ್ಟದಿಂದ ಆಗಬೇಕು ಮತ್ತು ನಿಗದಿತ ಅವಧಿಯೊಳಗೆ ಮುಗಿಸಬೇಕು. ಅಂದಾಜು ಪಟ್ಟಿಯಲ್ಲಿ ಇರುವಂತೆ ಕೆಲಸ ಅಚ್ಚುಕಟ್ಟಾಗಿ ಆಗಬೇಕು. ಮುಂದಿನ ದಿನಗಳಲ್ಲಿ ರಸ್ತೆ ಬಗ್ಗೆ ಜನರಿಂದ ದೂರುಗಳು ಬಾರದಂತೆ ಕಾಮಗಾರಿ ನಡೆಸಬೇಕುʼ ಎಂದು ಶಾಸಕರು ಗುತ್ತಿಗೆದಾರ ಜಗದೀಶ ಖೂಬಾ ಅವರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ಕಟ್ಟುನಿಟ್ಟಿನ ಸೂಚಿಸಿದರು.
ನಾನು ಶಾಸಕನಾದ ನಂತರ ಈ ರಸ್ತೆ ಎಂದೂ ಕೆಟ್ಟಿರಲಿಲ್ಲ. ಗುತ್ತಿಗೆದಾರರ ಕಾರಣದಿಂದಾಗಿ ಈ ರಸ್ತೆ ಸಾಕಷ್ಟು ಹದಗೆಟ್ಟು ಹೋದ ಕಾರಣ ಈ ಭಾಗದ ಜನರು ಒಂದುವರೆ ವರ್ಷ ಕಾಲ ಸಂಕಷ್ಟ ಎದುರಿಸಿರುವುದಕ್ಕೆ ನೋವಾಗಿದೆ. ಚುನಾವಣಾ ಪೂರ್ವದಲ್ಲಿಯೇ ಆರಂಭಿಸಿ ರಸ್ತೆಯನ್ನೆಲ್ಲ ಅಗೆದು ಏಕಾಏಕಿ ನಿಲ್ಲಿಸಿದ್ದರಿಂದ ಓಡಾಡಲು ಸಂಕಷ್ಟ ಅನುಭವಿಸಿದ್ದಾರೆ. ಹೆರಿಗೆಗಾಗಿ ಹೋಗಬೇಕಾದರೆ ಸಂಕಷ್ಟವಾಗುತ್ತಿದೆ ಎಂದು ಮಹಿಳೆಯರು ನೋವು ಹಂಚಿಕೊಂಡಿದ್ದನ್ನು ನೆನೆಸಿಕೊಂಡರೆ ಮೈ ನಡುಗುತ್ತದೆ ಎಂದು ಜನತೆ ಅನುಭವಿಸಿದ ಸಂಕಷ್ಟಗಳನ್ನು ಹಂಚಿಕೊಂಡರು.
ʼರಸ್ತೆ ಅಪೂರ್ಣಗೊಳಿಸಿದ್ದರಿಂದ ಜನತೆ ಪ್ರತಿದಿನ ಹತ್ತಾರು ಕರೆಗಳನ್ನು ಮಾಡುವಂತಾಗಿದೆ. ಮುಂದೆ ಹೀಗಾಗಬಾರದು. ರಸ್ತೆ ಪೂರ್ಣಗೊಳಿಸುವರೆಗೆ ನಿಲ್ಲಿಸಬಾರದು. ಹಿಂದಿನಂತೆ ಮಾಡಿದರೆ ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ. ಗ್ರಾಮಸ್ಥರು ಕೂಡ ತಮ್ಮ ಊರಿನ ರಸ್ತೆ ಕೆಲಸ ಸರಿಯಾಗಿ ಆಗುವಂತೆ ಮುತುವರ್ಜಿ ವಹಿಸಬೇಕು. ಎಲ್ಲಿಯಾದರೂ ಕೆಲಸ ಕಳಪೆಯಾಗುತ್ತಿರುವುದು ಕಂಡುಬಂದರೆ ತಮ್ಮನ್ನು ಅಥವಾ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಸರಿಪಡಿಸಿಕೊಳ್ಳಬೇಕು. ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವೆʼ ಎಂದು ಭರವಸೆ ನೀಡಿದರು.
ಈ ಬಗ್ಗೆ ಈದಿನ.ಕಾಮ್ ನಲ್ಲಿ ಜುಲೈ 28ರಂದು ʼಬಲಿಗಾಗಿ ಕಾದಿರುವ ರಸ್ತೆ ಗುಂಡಿಗಳು : ದುರಸ್ತಿ ಯಾವಾಗ?ʼ ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿದ ಕ್ಷೇತ್ರದ ಶಾಸಕರು ಇದೀಗ ನನೆಗುದಿಗೆ ಬಿದ್ದ ಅಪೂರ್ಣ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಇದೇ ವೇಳೆ ಶಾಸಕರು 65 ಲಕ್ಷ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆ (ಸಿಡಿ) ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕತ್ತಲೆಯಲ್ಲಿ ಜಿಲ್ಲಾ ಉದ್ಯೋಗ ವಿನೀಮಯ ಕಚೇರಿ; ಸಿಬ್ಬಂದಿ ಪರದಾಟ
ಈ ಸಂದರ್ಭದಲ್ಲಿ ಔರಾದ(ಬಿ) ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಪ್ರತೀಕ್ ಚವ್ಹಾಣ, ಸತೀಷ ಪಾಟೀಲ, ಯೋಗೇಶ ಪಾಟೀಲ, ರಾಜು ಶೆಳ್ಕೆ, ಸಂಜು ಮುರ್ಕೆ, ಜಾಕೀರ್ ಶೇಕ್, ಕುಶಾಲ ನಾಯಕ್, ಧನಾಜಿ ಬಿರಾದಾರ, ವಸಂತ ಶಿಂಧೆ, ಹನುಮಂತ ನಾಯಕ್, ಸುಜಿತ ರಾಠೋಡ, ಶುಭಂ ಪಾಟೀಲ್, ಗ್ಯಾನೋಬಾ ಪಾಟೀಲ, ಅಂಕುಶ ವಾಡೇಕರ್, ಭಾನುದಾಸ ಜಾಧವ್ ಸೇರಿದಂತೆ ಗ್ರಾಮ ಪಂಚಾಯಿತಿಗಳ ಅಧ್ತಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.