ತುಂಗಭದ್ರ ಎಡದಂಡೆ ಹಾಗೂ ನಾರಾಯಣಪುರ ಬಲದಂಡೆ ಕಾಲುವೆಗಳ ಸಮಸ್ಯೆಗಳ ಕುರಿತು ಚರ್ಚಿಸಲು ಮುನಿರಾಬಾದ್‌ಗೆ ಜಲ ಸಂಪನ್ಮೂಲ ಸಚಿವ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಆಗಮಿಸಿದಾಗ ರೈತರ ಮನವಿಗೆ ಉಡಾಫೆಯಿಂದ ಉತ್ತರಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಆರೋಪಿಸಿದ್ದಾರೆ.
ರಾಯಚೂರಿನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರೈತರು ಕೆಳ ಭಾಗದಲ್ಲಿ ನೀರು ತಲುಪುತ್ತಿಲ್ಲ ಎಂದು ಮನವಿಗೆ ಮುಂದಾದಾಗ ಡಿಸಿಎಂ ಡಿ ಕೆ ಶಿವಕುಮಾರ್ ಉಡಾಫೆಯಾಗಿ ಮಾತನಾಡಿದ್ದಾರೆ. ರೈತರಿಗೆ ನೀರು ತಲುಪದೇ ಹೋದಲ್ಲಿ ಮುಖ್ಯಮಂತ್ರಿ ಸೇರಿ ಎಲ್ಲ ಸಚಿವರಿಗೆ ಘೇರಾವ್ ಹಾಕಿ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ರೈತ ನಿಯೋಗದ ಮನವಿ ಸ್ವೀಕರಿಸಿದ್ದ ಸಿಎಂ ಸಿದ್ದರಾಮಯ್ಯನವರು ರಾಯಚೂರು ಮತ್ತು ಕೊಪ್ಪಳ ಉಸ್ತುವಾರಿ ಸಚಿವರನ್ನು ತರಾಟೆಗೆ ತೆಗೆದುಕೊಂಡು ಸಮರ್ಪಕ ನೀರು ಪೂರೈಕೆಗೆ ಸೂಚನೆ ನೀಡಿದ್ದಾರೆ. ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಸಿ, ಕೊನೆಭಾಗಕ್ಕೆ ನೀರು ತಲುಪಿಸಲು ಸೂಚಿಸಿದ್ದಾರೆ. ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯವರಿಂದ ಕೊನೆಭಾಗಕ್ಕೆ ನೀರು ಬಾರದ ಇರುವ ಕುರಿತು ರೈತರು, ಶಾಸಕರುಗಳು ಸಿಎಂಗೆ ಮನವರಿಕೆ ಮಾಡಿದ್ದಾರೆ. ಆದರೆ ಜಲ ಸಂಪನ್ಮೂಲ ಸಚಿವರಾಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ನೀಡಲು ಹೋದರೆ, ಪ್ರತಿಭಟನೆ ಮಾಡಿ ಎಂದು ಹೇಳುವ ಮೂಲಕ ವ್ಯಂಗ್ಯವಾಗಿ ಉತ್ತರಿಸಿದ್ದಾರೆ. ರೈತರನ್ನು ನಿರ್ಲಕ್ಷ್ಯಿಸಿ ಮಾತನಾಡಿದ್ದಾರೆ ಎಂದು ಚಾಮರಸ ಮಾಲಿ ಪಾಟೀಲ್ ಆರೋಪಿಸಿದರು.
ರೈತರು ಇಂದು ಹೋರಾಟ ಮಾಡಿಯೇ ನೀರು ಪಡೆಯುವಂತಾಗಿದೆ. ಅಕ್ರಮ ನೀರಾವರಿ ತಡೆಯಲು ಕಾಯ್ದೆ ರೂಪಿಸಿದ್ದರೂ ರಾಜ್ಯದಲ್ಲಿ ಇನ್ನೂ ಜಾರಿಯಾಗಿಲ್ಲ. ರೈತರು ಪ್ರತಿವರ್ಷ ಒಂದೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಾರಿ ಕಾಲುವೆ ನೀರು ಬಾರದೇ ಹೋದರೆ ಹೋರಾಟದ ಸ್ವರೂಪ ಬದಲಿಸಬೇಕಾಗುತ್ತದೆ. ಜಿಲ್ಲೆಗೆ ಬರುವ ಸಚಿವರುಗಳಿಗೆ ಘೇರಾವ್ ಮಾಡಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಯಚೂರು ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ, ಅಮರಣ್ಣ ಗುಡಿಹಾಳ, ಬೂದೆಯ್ಯಸ್ವಾಮಿ, ದೇವಯ್ಯ ನಾಯಕ, ಮಲ್ಲಣ್ಣ ದಿನ್ನಿ ಉಪಸ್ಥಿತರಿದ್ದರು.
