ಮಾಜಿ ದೇವದಾಸಿ ಮಹಿಳೆಯರಿಗೆ ಬಾಕಿಯಿರುವ ಪಿಂಚಣಿ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯವರ ವಿಮೋಚನಾ ಸಂಘ ಜಿಲ್ಲಾ ಸಮಿತಿಯ ವತಿಯಿಂದ ರಾಯಚೂರು ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಾಜಿ ದೇವದಾಸಿ ಮಹಿಳೆಯರಿಗೆ ಬಾಕಿಯಿರುವ ಪಿಂಚಣಿ ಬಿಡುಗಡೆ ಮಾಡಬೇಕು, ಮನೆಗಳ ನಿರ್ಮಾಣ ಕಾರ್ಯ ಪೂರ್ಣ ಹಾಗೂ ಮುದಗಲ್ ಪಟ್ಟಣದ ಸರ್ವೆ ನಂ. 469/2 ರಲ್ಲಿ 15 ಜನ ಮಾಜಿ ದೇವದಾಸಿ ಮಹಿಳೆಯರಿಗೆ ಪುನರ್ ವಸತಿಗಳಿಗಾಗಿ ಭೂ ಮಂಜೂರಾತಿ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಮಾಜಿ ದೇವದಾಸಿ ಮಹಿಳೆಯರಿಗೆ ಕಳೆದ ಬಜೆಟ್ ಹೆಚ್ಚಿಸಿರುವ ₹500 ಸೇರಿದಂತೆ ₹2000 ಬಾಕಿ ಮೂರು ತಿಂಗಳ ಪಿಂಚಣಿ ಹಣ ಬಿಡುಗಡೆ ಮಾಡಬೇಕು. ಸರ್ವೆ ಪಟ್ಟಿಯಿಂದ ಕೈಬಿಟ್ಟು ಹೋದ ಮಾಜಿ ದೇವದಾಸಿ ಮಹಿಳೆಯರ ಸೇರ್ಪಡೆಗೆ ಮರು ಸಮೀಕ್ಷೆ ಮಾಡಲು ಆದೇಶ ನೀಡಬೇಕು ಎಂದು ಮನವಿ ಮಾಡಿದರು.
ಸ್ವಯಂ ಉದ್ಯೋಗಕ್ಕಾಗಿ ಬ್ಯಾಂಕ್‌ನಲ್ಲಿ ಸಾಲ ಸೌಲಭ್ಯವನ್ನು ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಹಾಕುವುದನ್ನು ಕೈ ಬಿಟ್ಟು ಅನಕ್ಷರಸ್ಥರು ಇರುವುದರಿಂದ ನೇರವಾಗಿ ಇಲಾಖೆಯಿಂದಲೇ ಆಫ್‌ಲೈನ್ ಮೂಲಕ ಅರ್ಜಿಗಳನ್ನು ಪಡೆದು, ಇಲಾಖೆಯಿಂದ ಸಿಗುವಂತಹ ಸಾಲ ಸೌಲಭ್ಯಗಳನ್ನು ಒದಗಿಸಬೇಕು. ರಾಯಚೂರು ನಗರದಲ್ಲಿ ಮನೆಗಳ ನಿರ್ಮಾಣ ಹಂತದಲ್ಲಿರುವ ಕಾರ್ಯವನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಶ್ರೀರಂಗಪಟ್ಟಣ | ‘ಈ ದಿನ’ ವರದಿಗೆ ಎಚ್ಚೆತ್ತ ತಾಲೂಕು ಆಡಳಿತ: ಗ್ಯಾಸ್ ಏಜೆನ್ಸಿಗೆ ನೋಟಿಸ್
ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದ ವಾರ್ಡ್ ನಂ. 16, 11ರಲ್ಲಿರುವ 15 ಜನ ದೇವದಾಸಿ ಮಹಿಳೆಯರಿಗೆ ಜಿಲ್ಲಾಧಿಕಾರಿಗಳು ಭೂ ಮಂಜೂರಾತಿ ನೀಡಿ ಪುನರ್ ವಸತಿ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಹೆಚ್ ಪದ್ಮಾ, ಜಿಲ್ಲಾ ಗೌರವಾಧ್ಯಕ್ಷ ಕೆ.ಜಿ. ವೀರೇಶ್, ತಾಲೂಕಾಧ್ಯಕ್ಷೆ ಜಮಲಮ್ಮ, ಕಾರ್ಯದರ್ಶಿ ಮಹಾದೇವಿ, ಜಿಲ್ಲಾ ಕಾರ್ಯದರ್ಶಿ ಹೊಳೆಯಮ್ಮ ಕವಿತಾಳ, ಪರಶುರಾಮ ಲಿಂಗಸುಗುರು, ಹೊಸೂರಮ್ಮ ಸಿರವಾರ, ಸರೋಜಮ್ಮ ಮದ್ದಿನಾಳ, ಮರಿಯಮ್ಮ ಸಿಂಧನೂರು, ಮೋನಮ್ಮ ಬಳಗನೂರು ಸೇರಿದಂತೆ ಅನೇಕರು ಇದ್ದರು.
