ಬಾಲಕಿಯನ್ನು ಅತ್ಯಾಚಾರಗೈದು ಗರ್ಭಿಣಿಯನ್ನಾಗಿಸಿದ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ ಕಾರಣಕ್ಕೆ ಗ್ರಾಮದ ಸವರ್ಣೀಯರು ಪರಿಶಿಷ್ಟ ಜಾತಿಯ ಕುಟುಂಬದವರಿಗೆ ಬಹಿಷ್ಕಾರ ಹಾಕಿದ ಎಲ್ಲಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ಒಕ್ಕೂಟದಿಂದ ಹುಣಸಗಿ ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಒಕ್ಕೂಟ, ಕರ್ನಾಟಕ ರಾಜ್ಯ ದಲಿತ ಮಹಿಳಾ ಒಕ್ಕೂಟ (ಕ್ರಾಂತಿಕಾರಿ) ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಂಟಿಯಾಗಿ ಹುಣಸಗಿ ಪಟ್ಟಣದ ಬಸವೇಶ್ವರ ವೃತ್ತದ ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ʼದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಿದ ಪ್ರಕರಣದ ಹತ್ತು ಜನ ಆರೋಪಿಗಳನ್ನು ಬಂಧಿಸಬೇಕು. ಕೊಡೇಕಲ್ ಗ್ರಾಮದ 15 ವರ್ಷದ ದಲಿತ ಯುವತಿಯ ಮೇಲೆ ಅದೇ ಗ್ರಾಮದ ಮೂರು ಜನ ಮೇಲ್ವರ್ಗದವರು ಅತ್ಯಾಚಾರಕ್ಕೆ ಯತ್ನಿಸಿದ ಮೂರು ಜನರ ಮೇಲೆ ಪೋಕ್ಸೊ ಕಾಯ್ದೆಯಡಿ ಕೇಸ್ ದಾಖಲಾಗಿದ್ದರೂ ಬಂಧಿಸಿಲ್ಲ. ರಾಜಕೀಯ ನಾಯಕರ ಒತ್ತಡದಿಂದ ದಲಿತರಿಗೆ ಜಾತಿ ನಿಂದನೆ, ಬೆದರಿಕೆ ಹಾಕುತ್ತಿದ್ದಾರೆ. ಕೂಡಲೇ 3 ಜನ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕುʼ ಎಂದು ಆಗ್ರಹಿಸಿದರು.
ʼಈ ಪ್ರಕರಣದ ಕುರಿತು ಈಗಾಗಲೇ ಸುರಪುರ ತಾಲೂಕು ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಘಟನೆ ನಡೆದು ಎರಡು ತಿಂಗಳು ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಬಂಧಿಸಬೇಕುʼ ಎಂದು ಒತ್ತಾಯಿಸಿದರು.

ʼಸವರ್ಣೀಯರಿಂದ ಬಹಿಷ್ಕಾರಕ್ಕೊಳಗಾದ ಬಪ್ಪರಗಿ ಗ್ರಾಮದ 10 ದಲಿತ ಕುಟುಂಬಗಳಿಗೆ ತಲಾ 4 ಎಕರೆ ಜಮೀನು ಕೊಡಬೇಕು. ಮಾದಿಗ ಜನಾಂಗದವರಿಗೆ ಕಿರಾಣಿ, ಹೋಟೆಲ್, ಹಿಟ್ಟಿನ ಗಿರಣಿ, ಪಾದರಕ್ಷೆ ಅಂಗಡಿ ಉದ್ಯೋಗ ನಡೆಸಲು ನಾಲ್ಕು ಕುಟುಂಬಗಳಿಗೆ ಸ್ವಯಂ ಉದ್ಯೋಗ ಅಡಿಯಲ್ಲಿ ಸಾಲ ಮಂಜೂರು ಮಾಡಬೇಕು” ಎಂದು ಆಗ್ರಹಿಸಿದರು
ʼಕೊಡೇಕಲ್ ಗ್ರಾಮದ ಸಂತ್ರಸ್ತೆ ಅಪ್ರಾಪ್ತ ಬಾಲಕಿ ಕುಟುಂಬಕ್ಕೆ ಸರ್ಕಾರ ನಾಲ್ಕು ಎಕರೆ ಜಮೀನು ಕೊಟ್ಟು ನಿಗಮದಿಂದ ಉದ್ಯೋಗಕ್ಕೆ ಸಾಲ ಕೊಡಬೇಕು. ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಚನ್ನೂರು (ಕೆ) ಗ್ರಾಮದಲ್ಲಿ ದಲಿತರ ಮೇಲೆ ಕೌಂಟರ್ ಸುಳ್ಳು ಪ್ರಕರಣ ಹಾಗೂ ಗುರುಮಿಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಅರಕೇರಾ (ಕೆ) ಗ್ರಾಮದ ದಲಿತರ ಮೇಲೆ ದಾಖಲಾದ ಸುಳ್ಳು ಪ್ರಕರಣವನ್ನು ರದ್ದುಪಡಿಸಬೇಕುʼ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಮುಡಾ ಪ್ರಕರಣ | ನಾಳೆ ಜನಪ್ರತಿನಿಧಿಗಳ ಕೋರ್ಟ್ ತೀರ್ಪು
ಈ ಸಂದರ್ಭದಲ್ಲಿ ಅಜೀಜ್ ಸಾಬ್ ಐಕೂರ್, ಮಲ್ಲಿಕಾರ್ಜುನ ಕುರುಕುಂದಿ, ನಾಗರಾಜ ಓಕಳಿ, ನಿಂಗಣ್ಣ ಎನ್.ಗೋನಾಲ, ರಮೇಶ್ ಪೂಜಾರಿ, ಮಾನಪ್ಪ ಶೆಳ್ಳಗಿ, ರಾಮಪ್ಪ ಕೋರೆ, ಭೀಮಣ್ಣ ಅಡ್ಡೂಡಗಿ, ಗೋಪಾಲ ಗೋಗಿಕೇರಾ, ಚಂದ್ರಮ ದೀವಳಗುಡ್ಡ, ಬಸವಣ್ಣ ದೊಡ್ಡಮನಿ , ಭೀಮಣ್ಣ ಲಕ್ಷ್ಮೀಪುರ, ತಿಪ್ಪಣ ಗೋನಾಲ,ಹುಲಗಪ್ಪ ಜಾಂಗೀರ,ಹೊನ್ನಪ್ಪ ದೇವಿಕೇರಿ ಇನ್ನಿತರರು ಉಪಸ್ಥಿತರಿದ್ದರು.