- ಫೆಬ್ರವರಿಯಲ್ಲಿ ಅಜಯ್ ಬಂಗಾ ಹೆಸರು ಸೂಚಿಸಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್
- ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನ ಏರಿದ ಭಾರತದ ಮೊದಲಿಗ ಎಂಬ ಹೆಗ್ಗಳಿಕೆ
ಭಾರತೀಯ ಮೂಲದ ಅಮೆರಿಕದ ಉದ್ಯಮಿ ಅಜಯ್ ಬಂಗಾ ಅವರು ವಿಶ್ವ ಬ್ಯಾಂಕ್‌ನ ಮುಂದಿನ ಅಧ್ಯಕ್ಷರಾಗಿ ಬುಧವಾರ (ಮೇ 3) ನೇಮಕಗೊಂಡಿದ್ದಾರೆ.
ವಿಶ್ವ ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ ಬಂಗಾ ಅವರ ಹೆಸರನ್ನು ಸೂಚಿಸುತ್ತೇನೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಫೆಬ್ರವರಿಯಲ್ಲಿ ಘೋಷಿಸಿದ್ದರು.
ಈ ಮೂಲಕ ಬಂಗಾ ಅವರು ಈ ಹುದ್ದೆಯನ್ನು ಅಲಂಕರಿಸಿದ ಭಾರತದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಅಜಯ್ ಬಂಗಾ ಅವರು ಜೂನ್ 2 ರಿಂದ ಐದು ವರ್ಷಗಳ ಅವಧಿಗೆ ಹುದ್ದೆ ಅಲಂಕರಿಸಲಿದ್ದಾರೆ.
ಹವಾಮಾನ ಬದಲಾವಣೆಯಂಥ ಸವಾಲಿನ ಸಂದರ್ಭದಲ್ಲಿ ಬಂಗಾ ಅವರು ಅಧಿಕಾರ ವಹಿಸಿಕೊಳ್ಳುತ್ತಿದ್ದು, ಸವಾಲು ಎದುರಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
ವಿಶ್ವಬ್ಯಾಂಕ್ ಗ್ರೂಪ್ ವಿಕಸನ ಪ್ರಕ್ರಿಯೆಯಲ್ಲಿ ಬಂಗಾ ಅವರೊಂದಿಗೆ ಕೆಲಸ ಮಾಡಲು ಮಂಡಳಿಯು ಎದುರು ನೋಡುತ್ತಿದೆ ಎಂದು ಅದು ತಿಳಿಸಿದೆ.
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಎದುರಿಸುತ್ತಿರುವ ಕಠಿಣ ಬೆಳವಣಿಗೆಯ ಸವಾಲುಗಳನ್ನು ನಿಭಾಯಿಸುವ ಗುರಿಯನ್ನು ವಿಶ್ವಬ್ಯಾಂಕ್ ಹೊಂದಿದೆ.
ಸಮೂಹದ ಎಲ್ಲ ಮಹತ್ವಾಕಾಂಕ್ಷೆಗಳು ಮತ್ತು ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಬಂಗಾ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ ಎಂದು ವಿಶ್ವಬ್ಯಾಂಕ್ ಹೇಳಿದೆ.
ಅಜಯ್ ಬಂಗಾ ಅವರು ವಿಶ್ವ ಬ್ಯಾಂಕ್ ಅಧ್ಯಕ್ಷರ ಹುದ್ದೆಗೆ ಏಕೈಕ ನಾಮನಿರ್ದೇಶಿತರಾಗಿದ್ದರು. ಹುದ್ದೆಯಿಂದ ನಿರ್ಗಮಿಸಲಿರುವ ಡೇವಿಡ್ ಮಾಲ್ಪಾಸ್ ಅವರು ಬಂಗಾಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಐಐಟಿಗಳಲ್ಲಿ ನೆಪಕ್ಕಷ್ಟೇ ಇರುವ ಎಸ್‌ಸಿ, ಎಸ್‌ಟಿ ವಿಭಾಗಗಳು
ಅಭಿವೃದ್ಧಿ ಹೊಂದುತ್ತಿರುವ ಮತ್ತು ಉದಯೋನ್ಮುಖ ಆರ್ಥಿಕತೆಗಳಿಂದ ಕೂಡಿರುವ ವಿಶ್ವಬ್ಯಾಂಕ್‌ನ ಅಧ್ಯಕ್ಷ ಸ್ಥಾನದ ಮೇಲೆ ಅಮೆರಿಕದ ಹಿಡಿತ ನಿರಂತರವಾಗಿ ಮುಂದುವರಿದಿದೆ ಎಂಬ ಇತರ ದೇಶಗಳ ಅಸಮಾಧಾನದ ನಡುವೆ ಭಾರತದಲ್ಲಿ ಸಿಖ್ ಕುಟುಂಬದಲ್ಲಿ ಜನಿಸಿದ ಮತ್ತು ಅಮೆರಿಕ ಪ್ರಜೆಯಾಗಿರುವ 63 ವರ್ಷದ ಬಂಗಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೂ ಬಂಗಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಜಯ್ ಬಂಗಾ ಅವರಿಗೆ ಕೇಂದ್ರ ಸರ್ಕಾರ 2016ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿದೆ.