ಗಂಗಾವತಿ ತಾಲೂಕಿನ ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿಗಳ ಸಹಾಯಕ ಆಯುಕ್ತ ಕಛೇರಿಗೆ ಕುಷ್ಟಗಿ ತಾಲೂಕನ್ನು ಸೇರ್ಪಡಿಸಲಾಗಿದೆ. ಇದನ್ನು ಕೂಡಲೇ ಹಿಂಪಡೆಯಬೇಕು ಎಂದು ಕೊಪ್ಪಳ ಜಿಲ್ಲಾ ರಾಜ್ಯ ರೈತ ಸಂಘದ ಮುಖಂಡ ನಜೀರ್ ಸಾಬ್ ಮೂಲಿಮನಿ ಒತ್ತಾಯಿಸಿದರು.
ಗಂಗಾವತಿ ನಗರದ ಉಪ ವಿಭಾಗ ಕಚೇರಿ ಸರ್ಕಾರ ಅನುಮತಿಸಿದ್ದು, ಶೀಘ್ರವೇ ಗಂಗಾವತಿಯಲ್ಲಿ ಕಚೇರಿ ಅಸ್ತಿತ್ವಕ್ಕೆ ಬರಲಿದೆ. ಗಂಗಾವತಿ ತಾಲೂಕು ಸೇರಿ ಕನಕಗಿರಿ, ಕಾರಟಗಿ ,ತಾಲ್ಲೂಕಿನ ರೈತರಿಗೆ ಆಡಳಿತಾತ್ಮಕವಾಗಿ ಅನುಕೂಲವಾಗಲಿದೆ ಎಂದರು.
ಈಗಾಗಲೇ ಗಂಗಾವತಿ ನಗರದಲ್ಲಿರುವ ಡಿವೈಎಸ್‌ಪಿ ಹಾಗೂ ಕರ್ನಾಟಕ ವಿದ್ಯುತ್ ಸರಬರಾಜ ವಿಭಾಗ ಕಚೇರಿಗಳಿಗೆ ಕುಷ್ಟಗಿ ತಾಲೂಕು ಸೇರ್ಪಡೆಗೊಂಡು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕುಷ್ಟಗಿ ತಾಲೂಕಿನಿಂದ ಗಂಗಾವತಿ ನಗರಕ್ಕೆ ಸುಮಾರು 70 ಕಿಲೋ ಮೀಟರ್ ಅಂತರವಿದೆ. ಸರಿಯಾದ ಸಮಯಕ್ಕೆ ಬಸ್ ಇಲ್ಲದೆ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡಿ ಸುಸ್ತಾಗುವ ಸಾಧ್ಯತೆ ಹಾಗೂ ಸಾರ್ವಜನಿಕರು ಸರ್ಕಾರದ ಯೋಜನೆಗಳಿಂದ ವಂಚಿತರಾಗುವ ಸಾಧ್ಯತೆಗಳಿರುತ್ತವೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ರಾಯಚೂರು | ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಲು ಆಗ್ರಹಿಸಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ
ಕುಷ್ಟಗಿ ತಾಲೂಕನ್ನು ಮೊದಲಿನಂತೆ ಕೊಪ್ಪಳದ ಉಪ ವಿಭಾಗ ಕಛೇರಿಯ ವ್ಯಾಪ್ತಿಯಲ್ಲಿ ಮುಂದುವರೆಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ತಕ್ಷಣ ಕೊಪ್ಪಳ ತಾಲೂಕಿಗೆ ಸೇರಿಸಬೇಕು. ಇಲ್ಲದಿದ್ದರೆ ಇದನ್ನು ಆಗ್ರಹಿಸಿ ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದಲ್ಲಿ ಹೋರಾಟ ಮಾಡಲಾಗುವುದು ಎಂದು ನಜೀರ್ ಸಾಬ್ ಮೂಲಿಮನಿ ಎಚ್ಚರಿಕೆ ನೀಡಿದರು.
