- ಒಂದು ದಿನದ ರೋಡ್ ಶೋ ಎರಡು ದಿನಕ್ಕೆ ವಿಸ್ತರಣೆ
- ಮೇ 6, 7ರಂದು ಸಾರ್ವಜನಿಕರ ವಾಹನ ಸಂಚಾರಕ್ಕೆ ನಿರ್ಬಂಧ
ರಾಜ್ಯದಲ್ಲಿ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದ್ದು, ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರುಗಳು ಪ್ರಚಾರಕ್ಕೆಂದು ಅಖಾಡಕ್ಕೆ ಇಳಿದಿದ್ದಾರೆ. ಬಿಜೆಪಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಬೇಕೆಂದು ಹವಣಿಸುತ್ತಿದ್ದು, ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರೀ ರೋಡ್ ಶೋ ನಡೆಸುತ್ತಿದ್ದಾರೆ. ಸದ್ಯ ಒಂದು ದಿನಕ್ಕೆ ಸೀಮಿತವಾಗಿದ್ದ ರೋಡ್ ಶೋ ಅನ್ನು ಎರಡು ದಿನಕ್ಕೆ ವಿಸ್ತರಣೆ ಮಾಡಿದ್ದಾರೆ.
ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಂಸದ ಪಿ.ಸಿ.ಮೋಹನ್ ಅವರು, “ಮೇ 6ರಂದು ‘ನಮ್ಮ ಕರ್ನಾಟಕ ಯಾತ್ರೆ’ ಹೆಸರಿನಡಿ ಮೋದಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ” ಎಂದು ಮಾಹಿತಿ ನೀಡಿದ್ದರು. ಇದೀಗ ಒಂದು ದಿನದ ರೋಡ್ ಶೋ ಎರಡು ದಿನಕ್ಕೆ ವಿಸ್ತರಣೆಯಾಗಿದೆ.
ಮೋದಿ ರೋಡ್ ಶೋಗೆ ಮಳೆ ಅಡ್ಡಿಯಾಗುವ ಸಾಧ್ಯತೆ
ಮೇ 6ರಂದು ಒಂದು ದಿನ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಒಟ್ಟು 38 ಕಿ.ಮೀ. ದೂರ ಬೃಹತ್ ರೋಡ್ ಶೋ ಮಾಡಲಿದ್ದಾರೆ ಎಂದು ಪಕ್ಷದ ಮುಖಂಡರು ಅಧಿಕೃತವಾಗಿ ತಿಳಿಸಿದ್ದರು. ಆದರೆ, ಶನಿವಾರ ಸಾಯಂಕಾಲ ರೋಡ್ ಶೋ ವೇಳೆ ಮಳೆಯಾಗುವ ಮುನ್ಸೂಚನೆ ಹಿನ್ನಲೆ, ರೋಡ್ ಶೋಗೆ ಮಳೆ ಅಡ್ಡಿಪಡಿಸಬಹುದೆಂದು ಶನಿವಾರ ಸಂಜೆ ನಿಗದಿಯಾಗಿದ್ದ ರೋಡ್ ಶೋ ಅನ್ನು ಭಾನುವಾರ ಬೆಳಗ್ಗೆಗೆ ನಿಗದಿ ಮಾಡಲಾಗಿದೆ.
‘ನಮ್ಮ ಕರ್ನಾಟಕ ಯಾತ್ರೆ’ ಹೆಸರಿನಡಿ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 29ರಿಂದ ರೋಡ್ ಶೋ ಆರಂಭಿಸಿದ್ದು, ಇದು ಮೇ 7ರವರೆಗೂ ನಡೆಯಲಿದೆ.
ಮೇ 6 ಮತ್ತು 7 ರಂದು 28 ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುವ ರಾಜಧಾನಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಈ ವೇಳೆ, ತಮ್ಮ ಅಭ್ಯರ್ಥಿಗಳನ್ನು ಪ್ರತಿನಿಧಿಸುವ ಮೂಲಕ ಮತಯಾಚನೆ ಮಾಡಲಿದ್ದಾರೆ.
ಮೇ 6ರಂದು ಬೆಳಿಗ್ಗೆ ಪ್ರಧಾನಿಯವರ ರೋಡ್ ಶೋ
ಪ್ರಧಾನಿ ನರೇಂದ್ರ ಮೋದಿ ಅವರ ಶನಿವಾರದ ರೋಡ್ ಶೋ ಮಹದೇವಪುರ, ಕೆ.ಆರ್.ಪುರ, ಸಿ.ವಿ.ರಾಮನ್ ನಗರ, ಶಿವಾಜಿನಗರ, ಶಾಂತಿನಗರ ಸೇರಿದಂತೆ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಡೆಯಲಿದೆ.
ಬೆಳಿಗ್ಗೆ 10 ಗಂಟೆಯಿಂದ 1 ಗಂಟೆಯವರೆಗೂ ಹಳೆ ವಿಮಾನ ನಿಲ್ದಾಣ ಜಂಕ್ಷನ್ ಬಳಿಯ ಸುರಂಜನ್‌ದಾಸ್ ರಸ್ತೆ, ಬೆಮಲ್ ಕಾರ್ಖಾನೆ ಜಂಕ್ಷನ್, ತಿಪ್ಪಸಂದ್ರ ಮುಖ್ಯ ರಸ್ತೆ, ಎಚ್‌ಎಎಲ್ 2ನೇ ಹಂತದ 80 ಅಡಿ ಜಂಕ್ಷನ್, ಸಾಯಿ ರಸ್ತೆ ಜಂಕ್ಷನ್, ಇಂದಿರಾನಗರ, ಚಿನ್ಮಯ ಮಿಷನ್ ಆಸ್ಪತ್ರೆ ರಸ್ತೆ, ಹಳೆ ಮದ್ರಾಸ್ ರಸ್ತೆಯ ಸ್ವಾಮಿ ವಿವೇಕಾನಂದ ರಸ್ತೆ, ಟ್ರಿನಿಟಿ ವೃತ್ತ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ರೋಡ್ ಶೋ ನಡೆಯಲಿದೆ.
ಈ ಸುದ್ದಿ ಓದಿದ್ದೀರಾ? ರಾಜಧಾನಿಯಲ್ಲಿ ಮೇ 6ರಂದು 36.6 ಕಿ.ಮೀ ಮೋದಿ ರೋಡ್ ಶೋ
ಮೇ7ರಂದು ಬೆಳಗ್ಗೆ ರೋಡ್ ಶೋ ಸಾಗುವ ಮಾರ್ಗ
ಶನಿವಾರ ಸಂಜೆ ನಿಗದಿಯಾಗಿದ್ದ ರೋಡ್ ಶೋ ಭಾನುವಾರ ಬೆಳಗ್ಗೆ ನಡೆಯಲಿದೆ. ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಜಯನಗರ, ಪದ್ಮನಾಭನಗರ, ಬಸವನಗುಡಿ, ಚಿಕ್ಕಪೇಟೆ, ಚಾಮರಾಜಪೇಟೆ, ಗಾಂಧಿನಗರ, ಮಹಾಲಕ್ಷ್ಮಿ ಲೇಔಟ್, ವಿಜಯನಗರ, ಗೋವಿಂದರಾಜನಗರ, ರಾಜಾಜಿನಗರ, ಮಲ್ಲೇಶ್ವರಂ ಸೇರಿದಂತೆ ಒಟ್ಟು 13 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ರೋಡ್ ಶೋ ನಡೆಯಲಿದೆ.
ಬೆಳಿಗ್ಗೆ 10 ಗಂಟೆಯಿಂದ 1 ಗಂಟೆಯವರೆಗೂ ಜೆ.ಪಿ.ನಗರದ ಆರ್‌ಬಿಐನಿಂದ ಪ್ರಾರಂಭವಾಗಿ ಬೊಮ್ಮನಹಳ್ಳಿ, ಜೆ.ಪಿನಗರ, ಜಯನಗರ, ಅರಬಿಂದೊ ಮಾರ್ಗ, ಕೂಲ್ ಜಾಯಿಂಟ್, ಮಯ್ಯಾಸ್, ಕರಿಸಂದ್ರ, ಸೌತ್ ಎಂಡ್ ಸರ್ಕಲ್, ನೆಟ್ಕಲ್ಲಪ್ಪ ಸರ್ಕಲ್, ಎನ್.ಆರ್.ಕಾಲೋನಿ, ಬಸವನಗುಡಿ, ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್, ಟಿ.ಆರ್.ಮಿಲ್, ಸಿರ್ಸಿ ಸರ್ಕಲ್, ಈಟಾ ಮಾಲ್, ಮಾಗಡಿ ರಸ್ತೆ, ಬಸವೇಶ್ವರ ನಗರ, ವೆಸ್ಟ್ ಆಫ್ ಕಾರ್ಡ್ ರೋಡ್, ಮೋದಿ ಆಸ್ಪತ್ರೆ, ನವರಂಗ್ ಸರ್ಕಲ್, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಮಾರಮ್ಮ ದೇವಸ್ಥಾನ ಬಳಿ ರೋಡ್ ಶೋ ಅಂತ್ಯವಾಗಲಿದೆ.
ಮೇ6 ಹಾಗೂ 7ರಂದು ಬೆಳಗ್ಗೆ ನಡೆಯಲಿರುವ ಪ್ರಧಾನಮಂತ್ರಿ ರೋಡ್ ಶೋ ವೇಳೆ ಈ ಮಾರ್ಗದಲ್ಲಿ ಸಾರ್ವಜನಿಕರ ವಾಹನ ಸಂಚಾರಕ್ಕೆ ನಿರ್ಬಂಧವಿರಲಿದೆ. ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಲಾಗಿದೆ.