ಮೋದಿ ಜಪ ಮಾಡುತ್ತಲೇ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡು, ಸಂಸದೆಯೂ ಆಗಿರವು ನಟಿ ಕಂಗನಾ ರಣಾವತ್ ಕೆಲ ಬಿಜೆಪಿ ನಾಯಕರಂತೆ ವಿವಾದಾತ್ಮಕ ಹೇಳಿಕೆಯಿಂದಲೇ ಸುದ್ದಿಯಾಗುತ್ತಿದ್ದಾರೆ. ಹರಿಯಾಣ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿಗೆ ತಲೆನೋವಾಗಿ ಪರಣಮಿಸುತ್ತಿದ್ದಾರೆ. ಇಂದಿರಾ ಗಾಂಧಿ ಅವರ ವೇಷಭೂಷಣದಲ್ಲಿ ಕಂಗನಾ ನಿರ್ಮಿಸಿರುವ ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆಗೆ ಬಿಜೆಪಿಯೇ ಅಡ್ಡಿಯಾಗಿದೆ. ಆ ಸಿನಿಮಾ ಬಿಡುಗಡೆಯಾದರೆ, ಹರಿಣಾಣದ ಸಿಖ್ ಸಮುದಾಯ ತಮಗೆ ಮತ ಹಾಕುವುದಿಲ್ಲವೆಂಬ ಭಯ ಬಿಜೆಪಿ ನಾಯಕರಲ್ಲಿದೆ. ಇದೀಗ, ಕಂಗನಾ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದು, ಹರಿಯಾಣವೂ ಸೇರಿದಂತೆ ದೇಶದ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಿಜೆಪಿಯನ್ನೂ ಗುರಿ ಮಾಡಿದ್ದಾರೆ.
ಅಕ್ಟೋಬರ್ 5ರಂದು ಹರಿಣಾಮ ವಿಧಾನಸಭೆಗೆ ಮತದಾನ ನಡೆಯಲಿದೆ. ಮೂರನೇ ಅವಧಿಗೆ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹೆಣಗಾಡುತ್ತಿದೆ. ಇಂತಹದ ಸಮಯದಲ್ಲಿ, ಪಂಜಾಬ್-ಹರಿಯಾಣ ರೈತರ ಸುದೀರ್ಘ ಹೋರಾಟದ ನಂತರ ರದ್ದಾದ ಮೂರು ಕೃಷಿ ಕಾನೂನುಗಳನ್ನು ಮರಳಿ ತರಬೇಕೆಂದು ಕಂಗನಾ ಹೇಳಿದ್ದಾರೆ. ರೈತರು ಹಾಗೂ ಪ್ರತಿ ಪಕ್ಷಗಳ ವಾಗ್ದಾಳಿಗೆ ಸಿಲುಕಿದ್ದಾರೆ. ರದ್ದಾದ ಕೃಷಿ ಕಾನೂನುಗಳನ್ನು ಮರಳಿ ತರಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ಪ್ರತಿಜ್ಞೆ ಮಾಡಿದೆ.
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ನಾಚನ್ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ನಡೆದ ಸ್ಥಳೀಯ ಜಾತ್ರೆಯಲ್ಲಿ ಕಂಗನಾ ಭಾವಹಿಸಿ ಮಾತನಾಡಿದ್ದಾರೆ. “ಕಂಗನಾ ಹೇಳಿಕೆ ವಿವಾದಕ್ಕೆ ಸಿಲುಕಬಹುದು ಎಂದು ನನಗೆ ತಿಳಿದಿದೆ. ಮೂರು ಕೃಷಿ ಕಾನೂನುಗಳನ್ನು ಮರಳಿ ತರಬೇಕು. ಆ ಕಾನೂನುಗಳು ರೈತರ ಕಲ್ಯಾಣ-ಆಧಾರಿತ ಕಾನೂನುಗಳೆಂದು ನಾನು ನಂಬುತ್ತೇನೆ. ರೈತರು ಈ ಕಾನೂನುಗಳ ಜಾರಿಗೆ ಒತ್ತಾಯಿಸಬೇಕು” ಎಂದು ಹೇಳಿದ್ದಾರೆ.
ಕಂಗನಾ ಹೇಳಿಕೆಯಿಂದ ಹರಿಯಾಣ ಬಿಜೆಪಿ ಅಂತರ ಕಾಯ್ದುಕೊಂಡಿದೆ. ‘ಆಕೆಯ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಹರಿಯಾಣ ಬಿಜೆಪಿ ಮುಖ್ಯಸ್ಥ ಮೋಹನ್ ಲಾಲ್ ಬಡೋಲಿ ಹೇಳಿದ್ದಾರೆ. “ಕಂಗನಾ ಹಲವಾರು ವಿಷಯಗಳ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಆ ಕಾನೂನುಗಳನ್ನು ಒಮ್ಮೆ ಪ್ರಧಾನಿ ಮೋದಿ ಹಿಂತೆಗೆದುಕೊಂಡ ಮೇಲೆ, ಆ ಬಗ್ಗೆ ಹೆಚ್ಚಿಗೆ ಮಾತನಾಡಲು ಪಕ್ಷದಲ್ಲಿ ಯಾರಿಗೂ ಏನೂ ಉಳಿದಿರುವುದಿಲ್ಲ” ಎಂದು ಬಡೋಲಿ ಹೇಳಿದ್ದಾರೆ.
ಕೃಷಿ ಕಾನೂನುಗಳು ಮತ್ತೆ ಜಾರಿಯಾಗಲು ಎಂದಿಗೂ ಬಿಡುವುದಿಲ್ಲ ಎಂದು ಕಾಂಗ್ರೆಸ್ ಮತ್ತು ಎಎಪಿ ಹೇಳಿವೆ. “ಸರ್ಕಾರವು ಆ ಕರಾಳ ಕಾನೂನುಗಳನ್ನು ರದ್ದುಗೊಳಿಸುವುದಕ್ಕೂ ಮುನ್ನ 750ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಬಿಜೆಪಿ ಈಗ ಆ ಕಾನೂನುಗಳನ್ನು ಮತ್ತೆ ತರಲು ಯೋಜಿಸುತ್ತಿದೆ ಎಂಬುದನ್ನು ರೈತರು ಅರ್ಥಮಾಡಿಕೊಳ್ಳಬೇಕು” ಎಂದು ಹರಿಯಾಣ ಕಾಂಗ್ರೆಸ್ ಹೇಳಿದೆ.