ಹೆಣ್ಣು ಮಗು ಎಂದು ತಿಳಿದ ಬಳಿಕ ಪತಿಯು ಮನೆಯಲ್ಲಿಯೇ ವೈದ್ಯರನ್ನು ಕರೆಸಿ ಗರ್ಭಪಾತ ಮಾಡಿಸಲು ಮುಂದಾಗಿದ್ದು, 24 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಈ ಪ್ರಕರಣದಲ್ಲಿ ಆಕೆಯ ಪತಿ ಮತ್ತು ಆತನ ತಂದೆಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ನಾಲ್ಕು ತಿಂಗಳ ಭ್ರೂಣವನ್ನು ಸೋಮವಾರ ಹತ್ಯೆ ಮಾಡಿದ್ದು ಇಂದಾಪುರ ತಹಸಿಲ್‌ನ ಹಳ್ಳಿಯ ಜಮೀನಿನಲ್ಲಿ ಹೂಳಲಾಗಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಇಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ, “ಮೃತ ಮಹಿಳೆ 2017ರಲ್ಲಿ ಆರೋಪಿಯನ್ನು ವಿವಾಹವಾಗಿದ್ದರು. ದಂಪತಿಗೆ ಈಗಾಗಲೇ ಇಬ್ಬರು (ಒಂದು ಹೆಣ್ಣು ಮತ್ತು ಒಂದು ಗಂಡು) ಮಕ್ಕಳಿದ್ದಾರೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬೀದರ್ | ಹೆಣ್ಣು ಭ್ರೂಣ ಹತ್ಯೆ ತಡೆಗೆ ಕಠಿಣ ಕಾನೂನು ಜಾರಿಗೆ ತನ್ನಿ: ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ
ಮಹಿಳೆ ಮೂರನೇ ಬಾರಿಗೆ ಗರ್ಭಿಣಿಯಾಗಿದ್ದು, ಈ ವೇಳೆ ಭ್ರೂಣ ಲಿಂಗ ಪತ್ತೆ ಮಾಡಿಸಿದ ಕುಟುಂಬಸ್ಥರಿಗೆ ಇದು ಹೆಣ್ಣು ಭ್ರೂಣ ಎಂದು ತಿಳಿದು ಬಂದಿದೆ. ಹೆಣ್ಣು ಮಗು ಬೇಡವೆಂದು ಗರ್ಭಪಾತ ಮಾಡುವ ನಿರ್ಧಾರವನ್ನು ಕುಟುಂಬಸ್ಥರು ಮಾಡಿದ್ದಾರೆ.
ವೈದ್ಯರನ್ನು ಮನೆಗೆಯೇ ಕರೆಸಿ ಗರ್ಭಪಾತ ಮಾಡಿಸಲು ಪತಿ ಮತ್ತು ಆತನ ಪೋಷಕರು ವೈದ್ಯರ ಮೇಲೆ ಒತ್ತಡ ಹೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗರ್ಭಪಾತ ಮಾಡುವ ವೇಳೆ ಮಹಿಳೆ ಸಾವನ್ನಪ್ಪಿದ್ದಾರೆ. ಭ್ರೂಣವನ್ನು ಜಮೀನಿನಲ್ಲಿ ಹೂತಿದ್ದಾರೆ.
