ಮುಡಾ ಪ್ರಕಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸಿಎಂ ಸಿದ್ದರಾಮಯ್ಯ ಅವರ ಅರ್ಜಿ ವಜಾಮಾಡಿ, ರಾಜ್ಯಪಾಲರ ನಿರ್ಧಾರವನ್ನು ಎತ್ತಿ ಹಿಡಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಆಗ್ರಹಿಸಿ ಬೆಂಗಳೂರು ಮಹಾನಗರ, ಶಿವಮೊಗ್ಗ, ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿ, ಚಾಮರಾಜನಗರ, ಮೈಸೂರು, ಬಳ್ಳಾರಿ, ಕೊಪ್ಪಳ, ರಾಯಚೂರು, ಉತ್ತರ ಕನ್ನಡ, ಹಾಸನ, ಹುಬ್ಬಳ್ಳಿ- ಧಾರವಾಡ ಮಹಾನಗರ, ಮಂಡ್ಯ, ತುಮಕೂರು, ದಾವಣಗೆರೆ, ಬಿಜೆಪಿ ಜಿಲ್ಲಾ ಕೇಂದ್ರದಲ್ಲಿ ಮಂಗಳವಾರ ಪ್ರತಿಭಟನೆ ನಡೆದಿದೆ.
ಬುಧವಾರ ಕೂಡ ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ಮುಂದುವರಿಸಿದೆ. ಬಿಜೆಪಿ ಯುವ ಮೋರ್ಚಾ ವತಿಯಿಂದ ಇಂದು ಸಿಎಂ ಮನೆಗೆ ಮತ್ತಿಗೆ ಹಾಕುವ ಪ್ರಯತ್ನ ನಡೆಯಿತು. ಬಿಜೆಪಿ ಕಚೇರಿಯಿಂದ ತೆರಳಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರಸ್ತೆಯುದ್ದಕ್ಕೂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಕುಮಾರ ಕೃಪ ಅತಿಥಿಗೃಹಕ್ಕೆ ತರಳಿ ಗೇಟ್ ಮೇಲೆ ಹತ್ತಿ ಪ್ರತಿಭಟಿಸಿದರು.
ಪೊಲೀಸರು ಮೊದಲೇ ಗೇಟ್ ಬಳಿ ನಿಂತಿದ್ದರಿಂದ ಪ್ರತಿಭಟನಾಕಾರರು ಒಳಬರಲು ಆಗಲಿಲ್ಲ. ನಂತರ ಬಿಜೆಪಿ ಕಾರ್ಯಕರ್ತರ ಕೂಗಾಟ ಹೆಚ್ಚಾಗುತ್ತಿದ್ದಂತೆ ಪೊಲೀಸ್ ವಾಹನದಲ್ಲಿ ಬಂಧಿಸಿ ಕರೆದೊಯ್ದರು.
ಸಿಎಂ ರಾಜೀನಾಮೆ ನೀಡಲಿ: ವಿಜಯೇಂದ್ರ
“ಮುಖ್ಯಮಂತ್ರಿಗಳು ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು. ಮುಖ್ಯಮಂತ್ರಿಗಳು ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು. ರಾಜ್ಯದ ಜನರ ಅಭಿಪ್ರಾಯಕ್ಕೆ ನೀವು ಮನ್ನಣೆ ನೀಡಬೇಕು. ಬಡವರಿಗೆ ಮೀಸಲಿಟ್ಟ ನಿವೇಶನಗಳನ್ನು ತಮ್ಮ ಕುಟುಂಬಕ್ಕೆ ನೀಡಿದ್ದು, ಇದರಲ್ಲಿ ಅಕ್ರಮ ನಡೆದಿದೆ. ಹಾಗಾಗಿ ತಮ್ಮ ಭಂಡತನ ಬದಿಗಿಟ್ಟು ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಂಗಳಾರತಿ ಎತ್ತಬೇಕಾದ್ದು ಕಾವೇರಿಗಲ್ಲ, ಕಾಂಗ್ರೆಸ್ಸಿಗರಿಗೆ
ಬಿಜೆಪಿ ಕಚೇರಿ ಬಳಿ ಮಾತನಾಡಿ, “ಹೈಕೋರ್ಟ್ ತನ್ನ ತೀರ್ಪಿನಲ್ಲಿ ಮೈಸೂರಿನ ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ಬಾರದೇ ಇಷ್ಟು ದೊಡ್ಡ ಭ್ರಷ್ಟಾಚಾರ ಆಗಲು ಸಾಧ್ಯ ಇರಲಿಲ್ಲ. ಕಾನೂನಿನ ಪ್ರಕಾರ ಕೇವಲ 4600 ಚದರಡಿ ನಿವೇಶನ ಸಿಗಬೇಕಿತ್ತು. ಇವರಿಗೆ 56 ಕೋಟಿ ಬೆಲೆಬಾಳುವ 14 ನಿವೇಶನಗಳು ಸಿಕ್ಕಿರುವುದು ಕಾನೂನುಬಾಹಿರವಾಗಿದೆ. ಇವೆಲ್ಲವುಗಳ ಸಮಗ್ರ ತನಿಖೆ ಆಗಬೇಕಿದೆ ಎಂಬ ವಿಚಾರವನ್ನು ಹೈಕೋರ್ಟ್ ತಿಳಿಸಿದೆ” ಎಂದರು.
“ಹೈಕೋರ್ಟ್ ತೀರ್ಪಿನ ನಂತರ ಸಿಎಂ ಹೇಳಿಕೆಯನ್ನು ಗಮನಿಸಿದ್ದೇನೆ. ಮುಖ್ಯಮಂತ್ರಿಗಳು ತಮ್ಮ ಭಂಡತನದಿಂದ ಇನ್ನೂ ಹೊರಕ್ಕೆ ಬರುತ್ತಿಲ್ಲ. ಬಿಜೆಪಿ ಮೇಲೆ ಆರೋಪ ಮಾಡಿದ್ದಾರೆ. ರಾಜಭವನ ದುರುಪಯೋಗ ಆಗುತ್ತಿದೆ ಎಂದು ಮತ್ತೊಮ್ಮೆ ಹೇಳಿದ್ದಾರೆ. ಮತ್ತೊಂದು ಕಡೆ ತಾನೇನೂ ತಪ್ಪು ಮಾಡಿಲ್ಲ; ರಾಜೀನಾಮೆ ಕೊಡುವ ಪ್ರಶ್ನೆ ಉದ್ಭವವಿಸುವುದಿಲ್ಲ ಎಂದು ಸ್ವತಃ ಮುಖ್ಯಮಂತ್ರಿಗಳು ಹೇಳಿದ್ದಾರೆ” ಎಂದು ಆಕ್ಷೇಪಿಸಿದರು.
“ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅವಕಾಶ ಕೊಟ್ಟಿದ್ದ ರಾಜ್ಯಪಾಲರ ಕ್ರಮವನ್ನು ರಾಜ್ಯ ಹೈಕೋರ್ಟ್ ಎತ್ತಿ ಹಿಡಿದಿದೆ. ಸಿದ್ದರಾಮಯ್ಯನವರ ಅರ್ಜಿಯನ್ನು ವಜಾ ಮಾಡಿದ್ದಾರೆ. ಹೈಕೋರ್ಟ್ ತೀರ್ಪು ಸ್ಪಷ್ಟವಾಗಿ ಹೇಳಿದೆ. ಯಾವ ರೀತಿ ಭ್ರಷ್ಟಾಚಾರ ಆಗಿದೆ; ಯಾವ ರೀತಿ ಅಧಿಕಾರ ದುರುಪಯೋಗ ಆಗಿದೆ, ಮೇಲ್ನೋಟಕ್ಕೆ ಇದರ ತನಿಖೆ ಆಗಬೇಕಿದೆ ಎಂದು ಹೈಕೋರ್ಟ್ ಹೇಳಿದರೂ, ಇವೆಲ್ಲವನ್ನೂ ರಾಜಕೀಯಪ್ರೇರಿತ ಎಂದು ಬಿಂಬಿಸುವ ಕೆಲಸವನ್ನು ತಾವು ಮಾಡಿದ್ದೀರಿ” ಎಂದು ಟೀಕಿಸಿದರು.