- ‘ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತದ ಸಲುವಾಗಿ ಅಕ್ರಮಗಳಿಗೆ ಕಡಿವಾಣ ಹಾಕಿ‘
- ‘ಜನಸಾಮಾನ್ಯರು ಚುನಾವಣೆಗೆ ಸ್ಪರ್ಧಿಸುವುದಷ್ಟೇ ಅಲ್ಲ, ಗೆಲ್ಲಲು ಕೂಡ ಸಾಧ್ಯವಿದೆ‘
ಆಮ್ ಆದ್ಮಿ ಪಕ್ಷವು (ಎಎಪಿ) ದೆಹಲಿ ಹಾಗೂ ಪಂಜಾಬ್‌ನಲ್ಲಿ ಜಾರಿಗೆ ತಂದಿರುವ ಯೋಜನೆಗಳನ್ನು ಬೇರೆ ಪಕ್ಷಗಳು ನಕಲು ಮಾಡಿ ಕರ್ನಾಟಕದಲ್ಲಿ ಆಶ್ವಾಸನೆ ನೀಡುತ್ತಿವೆ. ಈ ಚುನಾವಣೆಯು ಅಸಲಿ ಮತ್ತು ನಕಲಿಗಳ ನಡುವಿನ ಹೋರಾಟವಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.
ಬೆಂಗಳೂರಿನ ಪ್ರೆಸ್‌ಕ್ಲಬ್‌ನವರು ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪೃಥ್ವಿ ರೆಡ್ಡಿ ಅವರು, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಮಾಧ್ಯಮಗಳ ಜೊತೆ ಸಂವಾದ ನಡೆಸುವುದು ಒಳ್ಳೆಯ ಬೆಳವಣಿಗೆ. ಆಮ್ ಆದ್ಮಿ ಪಕ್ಷವು ಇಡೀ ದೇಶದ ರಾಜಕೀಯದಲ್ಲಿ ಬದಲಾವಣೆ ತಂದಿದೆ. ಜನಪರ ಆಡಳಿತವನ್ನು ಜನರು ಬಯಸಲು ಶುರು ಮಾಡಿದ್ದು, ಚುನಾವಣೆಯಲ್ಲಿ ʻಮತದಾನ ಮಾಡುವುದರಿಂದ ನಮಗೇನು ಲಾಭವಾಗುತ್ತದೆ?ʼ ಎಂದು ಯೋಚಿಸಲು ಆರಂಭಿಸಿದ್ದಾರೆ” ಎಂದು ಹೇಳಿದರು.
“ಎಎಪಿ ಕೇವಲ ಹತ್ತು ವರ್ಷಗಳಲ್ಲಿ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆದುಕೊಂಡಿದೆ. ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಅಧಿಕಾರ ಹೊಂದಿರುವ ಕೇವಲ ಮೂರು ಪಕ್ಷಗಳಲ್ಲಿ ಆಮ್ ಆದ್ಮಿ ಪಾರ್ಟಿ ಕೂಡ ಒಂದು. ಜನಸಾಮಾನ್ಯರು ಚುನಾವಣೆಗೆ ಸ್ಪರ್ಧಿಸುವುದಷ್ಟೇ ಅಲ್ಲ, ಗೆಲ್ಲಲು ಕೂಡ ಸಾಧ್ಯವಿದೆ ಎಂಬುದನ್ನು ಆಮ್ ಆದ್ಮಿ ಪಾರ್ಟಿ ಸಾಬೀತು ಪಡಿಸಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಗೆದ್ದರೆ ಕಟಿಂಗ್ ಫ್ರೀ ಎಂದ ರಾಜಾಜಿನಗರದ ಪಕ್ಷೇತರ ಅಭ್ಯರ್ಥಿ
“ಜನರ ತೆರಿಗೆ ಹಣವು ಉದ್ಯಮಿಗಳ ಸಾಲ ಮನ್ನಾ ಮಾಡಲು ಬಳಕೆಯಾಗುತ್ತಿರುವುದು ದುರದೃಷ್ಟಕರ. ಕಮಿಷನ್ ದಂಧೆಯಿಂದಾಗಿ ಸರ್ಕಾರಗಳಿಗೆ ಯಾವುದಕ್ಕೂ ಹಣ ಸಾಕಾಗುತ್ತಿಲ್ಲ. ಹೀಗಿರುವಾಗ ಇವರುಗಳು ನೀಡಿರುವ ಗ್ಯಾರಂಟಿ, ಭರವಸೆಗಳು ಎಷ್ಟರಮಟ್ಟಿಗೆ ಈಡೇರುತ್ತವೆ ಎಂಬುದು ಮತದಾರರುಗಳಲ್ಲಿ ಯಕ್ಷ ಪ್ರಶ್ನೆಯಾಗಿದೆ. ಅಕ್ರಮಗಳಿಗೆ ಕಡಿವಾಣ ಹಾಕಿ ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತವನ್ನು ನೀಡಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಸೇರಿದಂತೆ ಅನೇಕ ಪದಾಧಿಕಾರಿಗಳು ಭಾಗವಹಿಸಿದ್ದರು.