ಭಾರತ ಮತ್ತು ಚೀನಾ ನಡುವೆ ‘ಸ್ಯಾಂಡ್‌ವಿಚ್’ ಆಗಲು ನಾನು ಬಯಸುವುದಿಲ್ಲ. ಆದರೆ, 2019ರಿಂದ ಶ್ರೀಲಂಕಾದಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಪ್ರತಿಯೊಬ್ಬರೊಂದಿಗೆ ‘ಮೌಲ್ಯಯುತ ಪಾಲುದಾರಿಕೆ’ಯೊಂದಿಗೆ ಮುನ್ನಡೆಯುತ್ತೇವೆ ಎಂದು ಶ್ರೀಲಂಕಾದ ನೂತಕ ಅಧ್ಯಕ್ಷ ಅನುರ ಕುಮಾರ ಡಿಸ್ಸಾನಾಯಕೆ ಹೇಳಿದ್ದಾರೆ.
ಮಾರ್ಕ್ಸ್‌ವಾದಿ ಚಿಂತನೆಯನ್ನು ಅಳವಡಿಸಿಕೊಂಡಿರುವ ಡಿಸ್ಸಾನಾಯಕೆ, ದಕ್ಷಿಣ ಏಷ್ಯಾ ಅಥವಾ ಹಿಂದು ಮಹಾಸಾಗರ ಪ್ರದೇಶದಲ್ಲಿನ ಭೌಗೋಳಿಕ ರಾಜಕೀಯ ರಂಪಾಟಗಳಿಂದ ದೂರವಿರಲು ನಿರ್ಧರಿಸಿದ್ದಾರೆ. ಅದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ. ಯಾವುದೇ ರಾಷ್ಟ್ರಗಳ ನಡುವಿನ ತಿಕ್ಕಾಟದಲ್ಲಿ ತಾವು ಸಿಕ್ಕಿಕೊಳ್ಳಲು ಬಯಸುವುದಿಲ್ಲ ಎಂದಿದ್ದಾರೆ. ಪ್ರತಿಯೊಬ್ಬರೂ ಶ್ರೀಲಂಕಾಗೆ ಅಗತ್ಯವಿರುವ ಹಣಕಾಸಿನ ನೆರವು ನೀಡಬಹುದು ಎಂದು ಹೇಳಿದ್ದಾರೆ. ಜೊತೆಗೆ, ಪಶ್ಚಿಮ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದೊಂದಿಗೆ ನಿಕಟ ಸಂಬಂಧಗಳನ್ನು ಬೆಳೆಸುವುದಾಗಿಯೂ ಹೇಳಿಕೊಂಡಿದ್ದಾರೆ.
“ಅಂತಾರಾಷ್ಟ್ರೀಯ ವ್ಯವಸ್ಥೆಯೊಳಗೆ ಹಲವಾರು ಗುಂಪುಗಳಿವೆ. ಆದರೆ, ನಾವು ಈ ಭೌಗೋಳಿಕ ರಾಜಕೀಯ ಹೋರಾಟದ ಭಾಗವಾಗುವುದಿಲ್ಲ. ನಾವು ಯಾವುದೇ ಗುಂಪಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ವಿಶೇಷವಾಗಿ ಚೀನಾ ಮತ್ತು ಭಾರತದ ನಡುವೆ ‘ಸ್ಯಾಂಡ್‌ವಿಚ್’ ಆಗಲು ಬಯಸುವುದಿಲ್ಲ. ನಮಗೆ ಎರಡೂ ರಾಷ್ಟ್ರಗಳೂ ಮೌಲ್ಯಯುತ ಸ್ನೇಹಿತ ರಾಷ್ಟ್ರಗಳಾಗಿವೆ. ಉಭಯ ರಾಷ್ಟ್ರಗಳೊಂದಿಗೆ ನಿಕಟ ಪಾಲುದಾರಕೆ ಪಡೆಯಲು ನಾವು ನಿರೀಕ್ಷಿಸುತ್ತೇವೆ” ಎಂದಿದ್ದಾರೆ.
“ನಾವು ನಮ್ಮ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಲು ಬದ್ಧರಾಗಿದ್ದೇವೆ. ಈ ಭೌಗೋಳಿಕ ರಾಜಕೀಯ ಓಟದಲ್ಲಿ ಯಾವುದೇ ಶಕ್ತಿಗೆ ಅಧೀನರಾಗುವುದಿಲ್ಲ…” ಎಂದು ಅವರು ಈ ಹಿಂದೆಯೂ ಹೇಳಿದ್ದರು.