ಆಪಾದಿತ ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ರಾಜ್ಯಪಾಲರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ತನಿಖೆ ನಡೆಸಲು ಅವಕಾಶ ನೀಡಿದೆ. ಈ ಬೆನ್ನಲ್ಲೇ, ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದು, “ವಿಧಾನಸಭಾ ಚುನಾವಣೆಯಲ್ಲಿ ಅಂತಹ ಪಕ್ಷಕ್ಕೆ (ಕಾಂಗ್ರೆಸ್) ಅಧಿಕಾರ ನೀಡಲು ರಾಜ್ಯ ಸಿದ್ಧವಿದೆಯೇ” ಎಂದು ಹರಿಯಾಣದ ಜನರನ್ನು ಪ್ರಶ್ನಿಸಿದ್ದಾರೆ.
ಬುಧವಾರ ಹರಿಯಾಣದ ಸೋನಿಪತ್‌ನಲ್ಲಿ ನಡೆದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ರ್‍ಯಾಲಿಯಲ್ಲಿ ಮೋದಿ ಮಾತನಾಡಿದರು. “ಕಾಂಗ್ರೆಸ್ ಸರ್ಕಾರ ಎಲ್ಲೆಲ್ಲಿ ಅಧಿಕಾರ ನಡೆಸಿದೆಯೋ ಅಲ್ಲೆಲ್ಲ ಬಹಳ ಭ್ರಷ್ಟಾಚಾರ ನಡೆದಿದೆ. ಭಾರತದ ಸರ್ಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರಕ್ಕೆ ಜನ್ಮ ನೀಡಿದ ಮತ್ತು ಪೋಷಿಸಿದ ಪಕ್ಷ ಕಾಂಗ್ರೆಸ್. ಭಾರತದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದ ತಾಯಿ. ‘ಕಾಂಗ್ರೆಸ್ ಕಾ ಶಾಹಿಪರಿವಾರ್ ದೇಶ್ ಕಾ ಸಬ್ಸೇ ಭ್ರಷ್ಟ್ ಪರಿವಾರ್ ಹೈ’ (ಕಾಂಗ್ರೆಸ್‌ನ ಹೈಕಮಾಂಡ್ ಭ್ರಷ್ಟರಾಗಿದ್ದಾಗ ಎಲ್ಲರೂ ಭ್ರಷ್ಟಾಚಾರ ಮತ್ತು ಲೂಟಿ ಮಾಡಲು ಪರವಾನಗಿ ಪಡೆಯುತ್ತಾರೆ).” ಎಂದು ಆರೋಪಿಸಿದ್ದಾರೆ.
“ಹರಿಯಾಣವನ್ನು 10 ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿತ್ತು. ರೈತರ ಜಮೀನುಗಳನ್ನು ಲೂಟಿ ಮಾಡಲಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಥಿತಿ ಹೇಗಿದೆ ನೋಡಿ. ಭೂ ಹಗರಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಆರೋಪಿಯಾಗಿದ್ದಾರೆ. ನಿನ್ನೆ (ಮಂಗಳವಾರ) ಕರ್ನಾಟಕ ಹೈಕೋರ್ಟ್ ತನಿಖೆಗೆ ಆದೇಶಿಸಿರುವುದು ಸರಿಯಾಗಿದೆ. ಪ್ರಕರಣದ ತನಿಖೆ ನಡೆಸಬೇಕು ಎಂದಿದೆ. ದಲಿತರ ಹಣದಲ್ಲಿಯೂ ಕಾಂಗ್ರೆಸ್ ಹಗರಣ ಮಾಡಿದೆ. ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್‌ಗಿಂತ ಅಪ್ರಾಮಾಣಿಕ ಪಕ್ಷ ಮತ್ತೊಂದಿಲ್ಲ” ಎಂದಿದ್ದಾರೆ.
“ಹರಿಯಾಣದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ದುರ್ಬಲವಾಗುತ್ತಿದೆ. ಹರಿಯಾಣದಲ್ಲಿ ಬಿಜೆಪಿಗೆ ಬೆಂಬಲ ಹೆಚ್ಚುತ್ತಿದೆ. ಇಡೀ ಹರಿಯಾಣವೇ ‘ಫಿರ್ ಏಕ್ ಬಾರ್ ಬಿಜೆಪಿ ಸರ್ಕಾರ್’ (ಮತ್ತೊಮ್ಮೆ ಬಿಜೆಪಿ ಸರ್ಕಾರ) ಎನ್ನುತ್ತಿದೆ” ಎಂದು ಮೋದಿ ಹೇಳಿದ್ದಾರೆ.
“ಒಂದು ವೇಳೆ ಅಕಸ್ಮಾತ್‌ಆಗಿ ಕಾಂಗ್ರೆಸ್ ಹರಿಯಾಣದಲ್ಲಿ ಅಧಿಕಾರಕ್ಕೆ ಬಂದರೆ, ಅದು ರಾಜ್ಯವನ್ನು ನಾಶಪಡಿಸುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವುದು ಎಂದರೆ ಹರಿಯಾಣದ ಸ್ಥಿರತೆ ಮತ್ತು ಅಭಿವೃದ್ಧಿಯನ್ನು ಪಣಕ್ಕಿಡುವುದು ಎಂದರ್ಥ” ಎಂದು ಮೋದಿ ಪ್ರತಿಪಾದಿಸಿದ್ದಾರೆ.
ಮುಡಾ ಪ್ರಕರಣದಲ್ಲಿ ರಾಜ್ಯಪಾಲರ ಆದೇಶದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಅದಾಗ್ಯೂ, ಪ್ರಕರಣದಲ್ಲಿ ಬಿಎನ್‌ಎಸ್‌ಎಸ್ 218 ಹಾಗೂ ಪಿಸಿ ಕಾಯ್ದೆ 19ರಂತೆ ತನಿಖೆಗೆ ಅನುಮತಿ ನೀಡಲು ಹೈಕೋರ್ಟ್ ನಿರಾಕರಿಸಿದ್ದು, ಪಿಸಿ ಕಾಯ್ದೆಯ 17ಎ ಪ್ರಕಾರ ಮಾತ್ರವೇ ತನಿಖೆಗೆ ಅವಕಾಶ ನೀಡಿದೆ.
ಹೈಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, “ಇದೊಂದು ಕಾನೂನಾತ್ಮಕ ಹೋರಾಟ. ಈ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚೆ ಮಾಡಿ ಪ್ರತಿಕ್ರಿಯೆ ನೀಡುವೆ. ನನ್ನ ಪ್ರಕಾರ ನಾನು ತಪ್ಪು ಮಾಡಿಲ್ಲ. 17 ಎ ರಡಿ ತನಿಖೆ ಮಾಡಲು ಆದೇಶ ನೀಡಿದ ಮಾತ್ರಕ್ಕೆ ನಾನು ತಪ್ಪು ಮಾಡಿದ್ದೇನೆ ಎಂದಲ್ಲ. ಬಿ ಎನ್.ಎಸ್.ಎಸ್ ಕಾಯ್ದೆಯಡಿ 218 ಆದೇಶ ಮಾಡಿಲ್ಲ” ಎಂದಿದ್ದಾರೆ.
“ಹಗರಣ ಅರೋಪವು ಬಿಜೆಪಿ ಹಾಗೂ ಜೆಡಿಎಸ್‌ನ ಪಿತೂರಿ. ಅವರ ಪಿತೂರಿಗೆ ನಾನು ಹೆದರುವುದಿಲ್ಲ. ಅವರು ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬಂದವರಲ್ಲ. ವಿಧಾನಸಭೆ ಚುನಾವಣೆಯಲ್ಲಿಯೂ ಸೋತಿದ್ದಾರೆ. ಅವರು ಹಣಬಲದಿಂದ, ಆಪರೇಷನ್ ಕಮಲ ಮಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರೇ ಹೊರತು, ಜನರ ಆಶೀರ್ವಾದದೊಂದಿಗೆ ಎಂದಿಗೂ ಬಿಜೆಪಿ-ಜೆಡಿಎಸ್ ಅಧಿಕಾರಕ್ಕೆ ಬಂದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನ ಗೆದ್ದಿರುವ ಕಾಂಗ್ರೆಸ್ ಬಂದಿದ್ದರಿಂದ ಆಪರೇಷನ್ ಕಮಲ ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ದುಡ್ಡನ್ನು ಕೊಟ್ಟು ಶಾಸಕರನ್ನು ಖರೀದಿಸುವ ಪ್ರಯತ್ನ ಮಡಿದರು. ನಮ್ಮ ಯಾವ ಶಾಸಕರೂ ದುಡ್ಡಿನ ಹಿಂದೆ ಹೋಗದ ಕಾರಣ,ಅವರ ಪ್ರಯತ್ನ ವಿಫಲವಾಯಿತು” ಎಂದು ಹೇಳಿದ್ದಾರೆ.
ನಕಲಿ ರಾಷ್ಟ್ರವಾದಿ ಗಳಿಗೆ ಮೂರನೇ ಬಾರಿಗೆ ಅವಕಾಶ ಕೊಟ್ಟು ದೇಶದ ಭವಿಷ್ಯವನ್ನೇ ಪಣಕ್ಕಿಡಲಾಗಿದೆ