ರಾಜೀವ್ ಗಾಂಧಿ ವೈದ್ಯಕೀಯ ವಿವಿಯನ್ನು ಹಂತ ಹಂತವಾಗಿ ರಾಮನಗರಕ್ಕೆ ಸ್ಥಳಾಂತರ ಹಾಗೂ ಕನಕಪುರ ಮೆಡಿಕಲ್ ಕಾಲೇಜಿಗೆ ಮೂಲಸೌಕರ್ಯ ಹೆಚ್ಚಿಸಿ ಎನ್ ಎಂ ಸಿ (ನ್ಯಾಷನಲ್ ಮೆಡಿಕಲ್ ಕಮಿಷನ್)ಗೆ ಮರು ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ರಾಮನಗರ ಹಾಗೂ ಕನಕಪುರ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಹಾಗೂ ಕಾರ್ಯಾರಂಭ ಸಂಬಂಧ ವಿಧಾನಸೌಧದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ವಸತಿ ಸಚಿವ ಜಮೀರ್ ಅಹ್ಮದ್, ಉಪಕುಲಪತಿ ಹಾಗೂ ಶಾಸಕ ಶಿವಲಿಂಗೇಗೌಡ ಅವರು ಬುಧವಾರ ಸಭೆ ನಡೆಸಿದರು.
ಸಭೆ ಬಳಿಕ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಶಿವಕುಮಾರ್ ಅವರು, “ರಾಮನಗರದಲ್ಲಿ ಕಟ್ಟಡ ನಿರ್ಮಾಣಕ್ಕೆ ಇರುವ ಭೂ ಸ್ವಾಧೀನ ಸಮಸ್ಯೆಗೆ ಪರಿಹಾರ ನೀಡಿ ಕಾಮಗಾರಿ ನಡೆಸಲಾಗುತ್ತಿದೆ. ರಾಮನಗರದಲ್ಲಿ ಮೆಡಿಕಲ್ ಕಾಲೇಜು ಪ್ರಾರಂಭ ಮಾಡಲು ಅಗತ್ಯ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ. ವೈದ್ಯಕೀಯ ವಿವಿ ಕೇಂದ್ರ ಕಚೇರಿಯನ್ನು ರಾಮನಗರಕ್ಕೆ ಸ್ಥಳಾಂತರಗೊಳಿಸಲು ಸೂಚಿಸಿದ್ದೇನೆ. ಈ ವಿಚಾರವಾಗಿ ಈ ಹಿಂದೆ ಸರ್ಕಾರಿ ಆದೇಶ ಹೊರಡಿಸಲಾಗಿದ್ದು, ಹಂತ ಹಂತವಾಗಿ ಸ್ಥಳಾಂತರಿಸಲಾಗುವುದು” ಎಂದು ತಿಳಿಸಿದರು.
“ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಬಜೆಟ್ ನಲ್ಲಿ ಘೋಷಣೆ ಮಾಡಲಾಗಿತ್ತು. ಗೃಹ ಮಂಡಳಿಯಿಂದ ಜಮೀನು ಪಡೆದು ಕಾಲೇಜು ಕಟ್ಟಡ ನಿರ್ಮಾಣ ಮಾಡಲಾಗುವುದು. ಕನಕಪುರದಲ್ಲಿ ಮೂಲಸೌಕರ್ಯ ಇಲ್ಲ ಎಂದು ಎನ್ಎಂಸಿಯಿಂದ ಅರ್ಜಿ ತಿರಸ್ಕರಿಸಲಾಗಿತ್ತು. ಹೀಗಾಗಿ ಮೂಲಸೌಕರ್ಯ ಹೆಚ್ಚಿಸಿ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ” ಎಂದು ಹೇಳಿದರು.
“ಹಿಂದೆ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಆರಂಭಿಸಲು ಟೆಂಡರ್ ಕರೆದು ಭೂಮಿ ಪೂಜೆ ಮಾಡಲಾಗಿತ್ತು. ನಂತರ ಯಡಿಯೂರಪ್ಪನವರ ಸರ್ಕಾರದಲ್ಲಿ ಮಾಜಿ ಸಚಿವ ಸುಧಾಕರ್ ಅವರು ಚಿಕ್ಕಬಳ್ಳಾಪುರಕ್ಕೆ ಆ ಮೆಡಿಕಲ್ ಕಾಲೇಜು ತೆಗೆದುಕೊಂಡು ಹೋದರು. ಆಗ ₹450 ಕೋಟಿ ಇದ್ದ ಮೆಡಿಕಲ್ ಕಾಲೇಜು ನಿರ್ಮಾಣ ವೆಚ್ಚ ₹850 ಕೋಟಿಗೆ ಏರಿಕೆಯಾಗಿದೆ” ಎಂದರು.
ವಿವಿಯನ್ನು ಯಾವಾಗ ಸ್ಥಳಾಂತರ ಮಾಡಲಾಗುವುದು ಎಂದು ಕೇಳಿದಾಗ, “ರಾಜೀವ್ ಗಾಂಧಿ ವಿವಿ ಕೇಂದ್ರ ಕಚೇರಿ ರಾಮನಗರದಲ್ಲಿ ನಿರ್ಮಾಣ ಮಾಡಬೇಕು ಎಂದು 2008ರಲ್ಲೇ ಸರ್ಕಾರದ ಆದೇಶ ಹೊರಡಿಸಿ ಬಿಲ್ ಮಂಡಿಸಲಾಗಿದೆ. ಇದನ್ನು ಹಂತ ಹಂತವಾಗಿ ಸ್ಥಳಾಂತರ ಮಾಡಲಾಗುವುದು” ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ತಪ್ಪು ಮಾಡಿಲ್ಲ
ಮೂಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ವಿಚಾರಣೆಯನ್ನು ಲೋಕಾಯುಕ್ತಕ್ಕೆ ನೀಡಿರುವ ಬಗ್ಗೆ ಕೇಳಿದಾಗ, “ನ್ಯಾಯಾಲಯ ತನಿಖೆಗೆ ಆದೇಶ ನೀಡಿದ್ದರೆ, ತನಿಖೆ ನಡೆಯುತ್ತದೆ. ಮೂಡಾ ಅಕ್ರಮದಲ್ಲಿ ಮುಖ್ಯಮಂತ್ರಿಗಳು ಭಾಗಿಯಾಗಿಲ್ಲ ಎಂದು ನಮಗೆ ಭರವಸೆ ಇದೆ. ಈ ಪ್ರಕರಣದಲ್ಲಿ ತಪ್ಪು ನಡೆದಿದ್ದರೆ ಅಧಿಕಾರಿಗಳಿಂದ ಆಗಿರಬಹುದು. ಈ ಬಗ್ಗೆ ನನಗೆ ಗೊತ್ತಿಲ್ಲ. ಇದರಲ್ಲಿ ಮುಖ್ಯಮಂತ್ರಿಗಳ ಪಾತ್ರ ಇಲ್ಲ. ಅವರು ದೋಷಮುಕ್ತರಾಗಿ ಬರುತ್ತಾರೆ ಎಂದು ಸ್ಪಷ್ಟವಾಗಿ ಹೇಳಬಲ್ಲೆ” ಎಂದು ತಿಳಿಸಿದರು.
ಮೊದಲು ವಿರೋಧಪಕ್ಷದವರು ರಾಜೀನಾಮೆ ನೀಡಲಿ
ಸಿದ್ದರಾಮಯ್ಯ ಅವರ ರಾಜೀನಾಮೆ ಆಗ್ರಹಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪ್ರತಿಭಟನೆ ನಡೆಸುವ ಬಗ್ಗೆ ಕೇಳಿದಾಗ, “ಯಾವ ಪ್ರಕರಣದಲ್ಲಿ ಯಾವ ಯಾವ ಕೇಂದ್ರ ಸಚಿವರ ವಿರುದ್ಧ ತನಿಖೆ ನಡೆಯುತ್ತಿದೆ. ಅವರು ಅಧಿಕಾರದಲ್ಲಿ ಮುಂದುವರಿದಿಲ್ಲವೇ? ಮೊದಲು ಅವರ ರಾಜೀನಾಮೆ ತೆಗೆದುಕೊಳ್ಳಿ. ನಂತರ ನಮ್ಮ ಮುಖ್ಯಮಂತ್ರಿಗಳ ರಾಜೀನಾಮೆ ಬಗ್ಗೆ ಚರ್ಚೆ ಮಾಡೋಣ” ಎಂದು ತಿಳಿಸಿದರು.