ಆರು ತಿಂಗಳಿಂದ ರಾಜ್ಯದಲ್ಲಿ ವಿಜೃಂಭಿಸಿದ ಕೆಡುಕಿನ ಸುದ್ದಿಗಳು; ಮುಂದುವರಿದ ಬಂಧನ ಪರ್ವ

Date:

Advertisements

ಕಳೆದ ಏಪ್ರಿಲ್‌ನಿಂದ ರಾಜ್ಯದಲ್ಲಿ ಅಪರಾಧ ಪ್ರಕರಣಗಳದ್ದೇ ಸದ್ದು. ಹಾಸನದ ಸಂಸದ ಪ್ರಜ್ವಲ್‌ ರೇವಣ್ಣನ ಅತ್ಯಾಚಾರದ ಸಾವಿರಾರು ವಿಡಿಯೊಗಳ ಪೆನ್‌ಡ್ರೈವ್‌ ಇಡೀ ದೇಶವನ್ನೇ ಅಚ್ಚರಿಗೆ ತಳ್ಳಿತ್ತು. ಜೂನ್‌ನಲ್ಲಿ ನಟ ದರ್ಶನ್‌ ಗ್ಯಾಂಗಿನ ಪಾತಕಕೃತ್ಯ, ಮತ್ತೀಗ ಬಿಜೆಪಿ ಶಾಸಕ ಮುನಿರತ್ನ ಅತ್ಯಾಚಾರ ಪ್ರಕರಣದಲ್ಲಿ ಜೈಲುಪಾಲು. ಈ ಮಧ್ಯೆ ವಾಲ್ಮೀಕಿ ನಿಗಮ ಅಕ್ರಮದಲ್ಲಿ ಸಚಿವ ನಾಗೇಂದ್ರ ಬಂಧನ, ಯಡಿಯೂರಪ್ಪ ಮೇಲಿನ ಪೋಕ್ಸೊ ಪ್ರಕರಣ, ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗಿದೆ…

2024ರ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಪೊಲೀಸರು ಮತ್ತು ವಕೀಲರಿಗೆ ಕೈ ತುಂಬ ಕೆಲಸ ಸಿಕ್ಕಿದೆ. ಕೊಲೆ, ಭ್ರಷ್ಟಾಚಾರ, ಅತ್ಯಾಚಾರ ಪ್ರಕರಣಗಳಲ್ಲಿ ಸಿನಿಮಾ ನಟರು, ರಾಜಕಾರಣಿಗಳು ಸಿಲುಕಿದ್ದಾರೆ. ಬಂಧನಕ್ಕೊಳಗಾದ ಸೆಲೆಬ್ರಿಟಿಗಳು, ರಾಜಕಾರಣಿಗಳು ಮತ್ತು ಪ್ರತಿಷ್ಠಿತರ ಪಟ್ಟಿ ನೋಡಿದ್ರೆ ರಾಜ್ಯಕ್ಕೆ ಪತ್ಯೇಕ ಕೋರ್ಟ್‌ ಮಾತ್ರವಲ್ಲ, ಪ್ರತ್ಯೇಕ ಜೈಲೂ ಬೇಕಾದೀತು. ಎಲ್ಲ ರಾಜಕೀಯ ಪಕ್ಷದವರು, ಸಿನಿಮಾ ನಟರು, ಅಷ್ಟೇ ಏಕೆ ಬ್ಲ್ಯಾಕ್‌ಮೇಲ್‌ ಮಾಡುತ್ತ ಜನರನ್ನು ಸುಲಿಗೆ ಮಾಡುತ್ತಿದ್ದ ಪತ್ರಕರ್ತರ ಗ್ಯಾಂಗ್‌ ಕೂಡಾ ಕಂಬಿ ಹಿಂದೆ ಬಂಧಿಯಾಗಿದೆ. ಗೃಹ ಇಲಾಖೆ, ಪೊಲೀಸರು, ಲೋಕಾಯುಕ್ತ, ಸಿಐಡಿಯಂತಹ ತನಿಖಾ ಸಂಸ್ಥೆಗಳು ಸರಿಯಾಗಿ ಕೆಲಸ ಮಾಡಿದ್ರೆ ಇನ್ನೂ ಒಂದು ಡಜನ್‌ ರಾಜಕಾರಣಿಗಳು ಪರಪ್ಪನ ಅಗ್ರಹಾರ ಸೇರುವುದು ನಿಶ್ಚಿತ.

ಇದುವರೆಗೆ ರಾಜ್ಯ, ಯಾಕೆ ದೇಶವೇ ಕಂಡಿರದಂತಹ ಪ್ರಕರಣಗಳು ಕರ್ನಾಟಕದಿಂದ ಸುದ್ದಿಯಾದವು. ಕಳೆದ ಏಪ್ರಿಲ್‌ನಲ್ಲಿ ಹಾಸನದ ಸಂಸದ ಪ್ರಜ್ವಲ್‌ ರೇವಣ್ಣನ ವಿರುದ್ಧ ಕೇಳಿ ಬಂದ ಆರೋಪ ಇಡೀ ದೇಶವನ್ನೇ ಅಚ್ಚರಿಗೆ ತಳ್ಳಿತ್ತು. ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ನಾಲ್ಕು ದಿನ ಇರುವಾಗ ಪ್ರಜ್ವಲ್‌ ರೇವಣ್ಣನ ಮೊಬೈಲ್‌ನಿಂದ ಡೌನ್‌ಲೋಡ್‌ ಮಾಡಲಾದ ನೂರಕ್ಕೂ ಹೆಚ್ಚು ಮಹಿಳೆಯರ ಜೊತೆಗಿನ ಲೈಂಗಿಕ ಚಟುವಟಿಕೆಯ ವಿಡಿಯೊ ಇರುವ ಪೆನ್‌ಡ್ರೈವ್‌ ಸಾರ್ವಜನಿಕರ ಕೈಗೆ ಸಿಕ್ಕಿ ಅದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು. ಮತದಾನ ಮುಗಿಯುತ್ತಿದ್ದಂತೆ ಬಂಧನದ ಭೀತಿಯಿಂದ ಪ್ರಜ್ವಲ್‌ ಜರ್ಮನಿಗೆ ಪರಾರಿಯಾಗಿದ್ದ. ವಿಡಿಯೊದಲ್ಲಿದ್ದ ಮನೆ ಕೆಲಸದ ವೃದ್ಧೆ ಹೊಳೆನರಸೀಪುರ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಿಸಿದ್ದರು. ಪೊಲೀಸರು ಪ್ರಜ್ವಲ್‌ ಬಂಧನಕ್ಕೆ ರೆಡ್‌ಕಾರ್ನರ್‌ ನೋಟಿಸ್‌ ಹೊರಡಿಸಿದ್ದರು. ಈ ಮಧ್ಯೆ ಎಚ್‌ ಡಿ ರೇವಣ್ಣ ಎಡವಟ್ಟು ಮಾಡಿಕೊಂಡಿದ್ದರು. ಅಲ್ಲಿಂದ ಶುರುವಾದ ಬಂಧನ ಪರ್ವ ದೇವೇಗೌಡರ ಕುಟುಂಬದ ಮೂವರನ್ನು ಪರಪ್ಪನ ಅಗ್ರಹಾರ ಜೈಲು ಕಾಣುವಂತೆ ಮಾಡಿದೆ. ಆ ನಂತರ ಸರಣಿಯಂತೆ ಅಪರಾಧ ಪ್ರಕರಣಗಳು ದಾಖಲಾಗುತ್ತಲೇ ಇವೆ. ಅವುಗಳ ಸಂಪೂರ್ಣ ವಿವರ ಇಲ್ಲಿದೆ.

Advertisements
hd revanna complete family

ಅತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣ ಶಾಸಕ ಎಚ್‌ ಡಿ ರೇವಣ್ಣ ಬಂಧನ: ಸಂಸದನಾಗಿದ್ದ ಪ್ರಜ್ವಲ್‌ ರೇವಣ್ಣನ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಶಾಸಕ ರೇವಣ್ಣ ಮೇ 5ರಂದು ಬಂಧನಕ್ಕೊಳಗಾಗಿದ್ದರು. ವಾರದ ನಂತರ ಜಾಮೀನಿನಿಂದ ಬಿಡುಗಡೆಯಾಗಿದ್ದಾರೆ.

ಸಂತ್ರಸ್ತೆಯ ಅಪಹರಣದ ಸೂತ್ರದಾರಿ ಭವಾನಿ ರೇವಣ್ಣ ವಿರುದ್ಧ ಪ್ರಕರಣ: ಅಪಹರಣದ ಕೇಸಿನಲ್ಲಿ ಭವಾನಿ ರೇವಣ್ಣ ಅವರ ಮೇಲೂ ಸಂತ್ರಸ್ತೆ ಆರೋಪ ಮಾಡಿದ್ದರು. ಬಂಧನದಿಂದ ಬಚಾವ್‌ ಆಗಲು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಭವಾನಿ ನಿರೀಕ್ಷಣಾ ಜಾಮೀನು ಪಡೆದು ಎಸ್‌ಐಟಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದರು.

ಹಲವು ಮಹಿಳೆಯರ ಅತ್ಯಾಚಾರ ಆರೋಪಿ ಪ್ರಜ್ವಲ್‌ ರೇವಣ್ಣ ಬಂಧನ: ಮತದಾನ ಮುಗಿಯುತ್ತಿದ್ದಂತೆ ಜರ್ಮನಿಗೆ ಪಲಾಯನ ಮಾಡಿ, ಒಂದು ತಿಂಗಳ ನಂತರ ಮೇ ಕೊನೆಗೆ ಪ್ರಜ್ವಲ್‌ ರೇವಣ್ಣ ಬೆಂಗಳೂರಿಗೆ ಬರುತ್ತಿದ್ದಂತೆ ಎಸ್‌ಐಟಿ ಬಂಧಿಸಿತ್ತು. ಈ ಪ್ರಕರಣದಲ್ಲಿ ಪೊಲೀಸರು ನಾಲ್ಕು ಸಾವಿರ ಪುಟಗಳ ಚಾರ್ಜ್‌ಶೀಟನ್ನು ಕೋರ್ಟ್ ಗೆ ಸಲ್ಲಿಸಿದ್ದಾರೆ. ಪ್ರಜ್ವಲ್‌ ರೇವಣ್ಣನ ಜಾಮೀನು ಅರ್ಜಿ ವಿಚಾರಣೆ ನಡೆದು ತೀರ್ಪು ಕಾಯ್ದಿಸಿದೆ ಹೈಕೋರ್ಟ್.

ಲೈಂಗಿಕ ಕಿರುಕುಳ ಆರೋಪದಡಿ ದೇವರಾಜೇಗೌಡ ಬಂಧನ: ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣದ ವಿಡಿಯೋ ಲೀಕ್‌ ಮಾಡಿದ್ದು ಬಿಜೆಪಿಯ ವಕೀಲ ದೇವರಾಜೇಗೌಡ ಎಂಬ ಆರೋಪ ಕೇಳಿ ಬಂದಿತ್ತು. ಪದೇ ಪದೇ ಪ್ರೆಸ್‌ಮೀಟ್‌ ಮಾಡಿ ಡಿ ಕೆ ಶಿವಕುಮಾರ್‌ ವಿರುದ್ಧ ಆರೋಪ ಮಾಡುತ್ತಿದ್ದರು. ಅದೇ ಸಮಯದಲ್ಲಿ ದೇವರಾಜೇಗೌಡ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ದೂರು ನೀಡಿದ್ದರು. ಆತ ವಿಡಿಯೋ ಕಾಲ್‌ ಮೂಲಕ ಅಶ್ಲೀಲವಾಗಿ ನಡೆದುಕೊಂಡಿರುವ ದಾಖಲೆಗಳ ಆಧಾರದಲ್ಲಿ ಪೊಲೀಸರು ಮೇ 12ರಂದು ಬಿಜೆಪಿ ಮುಖಂಡ ದೇವರಾಜೇಗೌಡನನ್ನು ಬಂಧಿಸಿದ್ದರು. ಆತನಿಗೆ ಇತ್ತೀಚೆಗೆ ಜಾಮೀನು ಸಿಕ್ಕಿದೆ.

ಕಾರ್ಯಕರ್ತನಿಗೆ ಲೈಂಗಿಕ ಕಿರುಕುಳ ಆರೋಪದಡಿ ಸೂರಜ್‌ ರೇವಣ್ಣ ಬಂಧನ: ರೇವಣ್ಣ, ಪ್ರಜ್ವಲ್‌, ಭವಾನಿ ಮೂವರೂ ಕಾನೂನು ಸಂಘರ್ಷದಲ್ಲಿರುವಾಗಲೇ ಮತ್ತೊಬ್ಬ ಜೆಡಿಎಸ್‌ನ ಎಂಎಲ್‌ಸಿ ಸೂರಜ್‌ ರೇವಣ್ಣ ವಿರುದ್ಧ ಕಾರ್ಯಕರ್ತರೊಬ್ಬರು ಲೈಂಗಿಕ ಕಿರುಕುಳದ ಆರೋದಡಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಜೂನ್‌ 24ರಂದು ಬಂಧನಕ್ಕೊಳಗಾದ ಸೂರಜ್‌ ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾನೆ.

ದರ್ಶನ್‌ ಪವಿತ್ರಾ ಗೌಡ

ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ನಟ ದರ್ಶನ್‌ ಬಂಧನ: ನಟ ದರ್ಶನ್‌ ತನ್ನ ಗೆಳತಿ ಪವಿತ್ರಾ ಗೌಡಳಿಗೆ ಅಶ್ಲೀಲ ಮೆಸೇಜ್‌ ಮಾಡಿದ್ದ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು ಪಟ್ಟಣಗೆರೆ ಶೆಡ್‌ನಲ್ಲಿ ಭಯಾನಕವಾಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿ ಶವವನ್ನು ಮೋರಿಯಲ್ಲಿ ಎಸೆದು ಹೋದ ಪ್ರಕರಣದಲ್ಲಿ ಪವಿತ್ರಾ ಗೌಡ ಹಾಗೂ ಸಹಚರರ ಜೊತೆ ದರ್ಶನ್‌ ಕೂಡಾ ಜೂನ್‌ 10ರಂದು ಬಂಧನಕ್ಕೊಳಗಾಗಿದ್ದಾರೆ. ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಸದ್ಯ ಬಳ್ಳಾರಿ ಜೈಲಿನಲ್ಲಿ ದರ್ಶನ್‌ ಬಂಧಿ.

ನಿಗಮದ ಹಣ ದುರುಪಯೋಗ; ಸಚಿವ ನಾಗೇಂದ್ರ ಇಡಿಯಿಂದ ಬಂಧನ: ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಅಧೀಕ್ಷಕ ಚಂದ್ರಶೇಖರನ್.ಪಿ ಆತ್ಮಹತ್ಯೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತ ಕಾಲ ಕಳೆಯುತ್ತಿದ್ದ ವಿಪಕ್ಷಗಳಿಗೆ ಆಹಾರ ಸಿಕ್ಕಿತ್ತು. ನಿಗಮದ ಹಣ ದುರುಪಯೋಗದಡಿ ಸಚಿವ ನಾಗೇಂದ್ರ ಅವರನ್ನು ಜುಲೈ 11ರಂದು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ನಿಗಮದ 187ಕೋಟಿ ರೂ. ಹಣವನ್ನು ದುರುಪಯೋಗಪಡಿಸಲಾಗಿದೆ ಎಂದು ಮರಣ ಪತ್ರ ಬರೆದಿಟ್ಟು ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡ ನಂತರ ಪ್ರಕರಣ ಬೆಳಕಿಗೆ ಬಂದಿತ್ತು. ಮಂತ್ರಿ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡಿದ್ದರು. ಸರ್ಕಾರ ಹಗರಣದ ತನಿಖೆಯನ್ನು ಎಸ್ಐಟಿಗೆ ವಹಿಸಿತ್ತು. ಆದರೆ ಅಷ್ಟರಲ್ಲಿ ಇಡಿ ತನಿಖೆ ಕೈಗೆತ್ತಿಕೊಂಡಿತ್ತು.

SACHIVA NAGENDRA
ಬಿ ನಾಗೇಂದ್ರ

ಬಿಜೆಪಿ ಅವಧಿಯಲ್ಲಿ ನಡೆದ ಅವ್ಯವಹಾರದಲ್ಲಿ ಡಿ ಎಸ್‌ ವೀರಯ್ಯ ಬಂಧನ: ಡಿ ದೇವರಾಜ ಅರಸು ಟ್ರಕ್‌ ಟರ್ಮಿನಲ್‌ (ಡಿಡಿಯುಟಿಟಿಎಲ್‌) ಅಕ್ರಮ ಸಂಬಂಧ ಬಿಜೆಪಿ ನಾಯಕ, ವಿಧಾನ ಪರಿಷತ್​ ಮಾಜಿ ಸದಸ್ಯ ಡಿ ಎಸ್ ವೀರಯ್ಯ ಅವರನ್ನು ಸಿಐಡಿ ಪೊಲೀಸರು ಜುಲೈ 12ರಂದು ಬಂಧಿಸಿದ್ದಾರೆ.

ಜಾತಿನಿಂದನೆ, ಕಮಿಷನ್‌ ಬೇಡಿಕೆ, ಅತ್ಯಾಚಾರದ ಕೇಸಿನಲ್ಲಿ ಮುನಿರತ್ನ ಬಂಧನ: ಗುತ್ತಿಗೆದಾರರೊಬ್ಬರನ್ನು ಕಚೇರಿಗೆ ಕರೆಸಿಕೊಂಡು ಕಮಿಷನ್‌ ಕೊಟ್ಟಿಲ್ಲ ಯಾಕೆ ಎಂದು ದಬಾಯಿಸುತ್ತಾ ಆತನ ತಾಯಿ, ಪತ್ನಿಯ ಘನತೆಗೆ ಧಕ್ಕೆ ತರುವಂತೆ ಮಾತಾಡಿದ್ದಲ್ಲದೇ, ಗುತ್ತಿಗೆದಾರನ ದಲಿತ ಸ್ನೇಹಿತರೊಬ್ಬರ ಬಗ್ಗೆ ಜಾತಿನಿಂದನೆ ಮಾಡಿರುವ ಆರೋಪದಲ್ಲಿ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರನ್ನು ಸೆ. 13ರಂದು ಬಂಧಿಸಲಾಗಿತ್ತು. ಸೆ. 18 ಜಾಮೀನು ಸಿಕ್ಕಿತ್ತು. ಆದರೆ, ಅಂದೇ ಕಗ್ಗಲೀಪುರ ಪೊಲೀಸ್‌ ಠಾಣೆಯಲ್ಲಿ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಮತ್ತೆ ಬಂಧನಕ್ಕೊಳಗಾಗಿದ್ದಾರೆ. ಮುನಿರತ್ನ ವಿರುದ್ಧದ ಜಾತಿನಿಂದನೆ ಕೇಸ್‌, ಎರಡು ಅತ್ಯಾಚಾರ ಪ್ರಕರಣಗಳ ತನಿಖೆಗೆ ಸರ್ಕಾರ ಬಿ ಕೆ ಸಿಂಗ್‌ ನೇತೃತ್ವದ ವಿಶೇಷ ತನಿಖಾ ತಂಡವನ್ನು ನೇಮಿಸಿದೆ.

ದಿವ್ಯಾ ವಸಂತ
ದಿವ್ಯಾ ವಸಂತ

ಪತ್ರಕರ್ತರ ಹನಿಟ್ರ್ಯಾಪ್‌ ಟೀಂ ಬಂಧನ: ಸುದ್ದಿವಾಹಿನಿಯೊಂದರ ಮಾಜಿ ನಿರೂಪಕಿ ದಿವ್ಯಾ ವಸಂತ, ಖಾಸಗಿ ಸುದ್ದಿ ವಾಹಿನಿಯ ಮಾಜಿ ಸಿಇಒ ರಾಜಾನುಕುಂಟೆ ವೆಂಕಟೇಶ್, ದಿವ್ಯಾ ಸಹೋದರ ಸಂದೇಶ್ ಸೇರಿಕೊಂಡು ಮಸಾಜ್‌ ಪಾರ್ಲರ್ ಒಂದರ ಮಾಲೀಕರಿಗೆ ಬೆದರಿಸಿ ಹದಿನೈದು ಲಕ್ಷ ಹಣ ನೀಡುವಂತೆ ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪದಡಿ ಜು. 14ರಂದು ಬಂಧಿಸಲಾಗಿತ್ತು. ತಾವೇ ಯುವತಿಯೊಬ್ಬಳನ್ನು ಇಂದಿರಾನಗರದ ಸ್ಪಾದಲ್ಲಿ ಕೆಲಸಕ್ಕೆ ಸೇರಿಸಿ, ತಮ್ಮ ತಂಡದ ಯುವಕನೇ ಆಕೆಯೊಂದಿಗೆ ಸಲುಗೆಯಿಂದ ಇರುವ ವಿಡಿಯೊ ಮಾಡಿಟ್ಟುಕೊಂಡು ಅದನ್ನು ಸ್ಪಾದ ಮಾಲೀಕರಿಗೆ ತೋರಿಸಿ ಹಣ ವಸೂಲಿಗಿಳಿದಿತ್ತು ಈ ಟೀಂ.

ಚೆಕ್‌ ಬೌನ್ಸ್‌ ಕೇಸಿನಲ್ಲಿ ನಟಿ ಪದ್ಮಜಾ ರಾವ್‌ಗೆ ಶಿಕ್ಷೆ: ಸಿನಿಮಾ ಮತ್ತು ಕಿರುತೆರೆ ನಟಿ ಪದ್ಮಜಾ ರಾವ್‌ ಅವರಿಗೆ ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ. 2021ರಲ್ಲಿ ವೀರೇಂದ್ರ ಶೆಟ್ಟಿ ಎಂಬವರಿಂದ 40 ಲಕ್ಷ ಸಾಲ ಪಡೆದಿರುತ್ತಾರೆ. ಅದಕ್ಕಾಗಿ ನೀಡಿದ ಚೆಕ್‌ ಬೌನ್ಸ್‌ ಆಗಿತ್ತು. ಹಣವನ್ನು ವಾಪಸ್‌ ಮಾಡಿರಲಿಲ್ಲ. ಅವರು ಕೋರ್ಟ್‌ ಮೆಟ್ಟಿಲೇರಿದ್ದರು. ಕೋರ್ಟ್‌ ಒಂದು ತಿಂಗಳೊಳಗೆ ನಿರ್ದೇಶಕ ವೀರೇಂದ್ರ ಶೆಟ್ಟಿ ಅವರಿಗೆ 40 ಲಕ್ಷದ 20,000 (ದಂಡ ಸಹಿತ) ರೂ. ನೀಡಬೇಕು ಎಂದು‌ ಆ. 27ರಂದು ಆದೇಶಿಸಿದೆ.

padmaja
ಪದ್ಮಜಾ ರಾವ್

ಪೋಕ್ಸೊ ಪ್ರಕರಣ; ಬಂಧನದಿಂದ ತಪ್ಪಿಸಿಕೊಂಡ ಬಿ ಎಸ್‌ ಯಡಿಯೂರಪ್ಪ: ಕಳೆದ ಮಾರ್ಚ್‌ನಲ್ಲಿ ಬಿಜೆಪಿಯ ಹಿರಿಯ ಮುಖಂಡ ಬಿ ಎಸ್‌ ಯಡಿಯೂರಪ್ಪ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ತಮ್ಮ ಮನೆಗೆ ಸಹಾಯ ಕೇಳಿ ಬಂದ ಮಹಿಳೆಯ ಅಪ್ರಾಪ್ತ ಮಗಳನ್ನು ಕೋಣೆಗೆ ಕರೆದೊಯ್ದು ಆಕೆಯ ಟೀ ಶರ್ಟ್‌ನ ಒಳಗೆ ಕೈ ಹಾಕಿ ಎದೆಯ ಭಾಗವನ್ನು ಮುಟ್ಟಿರುವುದಾಗಿ ಬಾಲಕಿ ತಾಯಿ ಆರೋಪ ಮಾಡಿದ್ದರು. ಖುದ್ದು ಯಡಿಯೂರಪ್ಪ ಅವರನ್ನು ಆ ಬಗ್ಗೆ ಮಹಿಳೆ ಪ್ರಶ್ನಿಸುತ್ತಿರುವ ವಿಡಿಯೊ ದಾಖಲೆ ಸಹಿತ ಆಕೆ ದೂರು ನೀಡಿದ್ದರು. ಪ್ರಕರಣ ಸಿಐಡಿಗೆ ವಹಿಸಿತ್ತು ಸರ್ಕಾರ. ಅದಾಗಿ ಮೂರು ತಿಂಗಳಾದರೂ ಯಡಿಯೂರಪ್ಪ ಅವರ ಬಂಧನವಾಗಿಲ್ಲ ಎಂದು ಜೂನ್‌ನಲ್ಲಿ ದೂರುದಾರೆ ಮೃತಪಟ್ಟಿದ್ದಾರೆ. ಆಕೆಯ ಪುತ್ರ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದ ಕಾರಣ ಹೈಕೋರ್ಟ್‌ ಯಡಿಯೂರಪ್ಪ ವಿರುದ್ಧ ಬಂಧನ ವಾರಂಟ್‌ ಜಾರಿ ಮಾಡಿತ್ತು. ಮೂರು ದಿನ ತಲೆಮರೆಸಿಕೊಂಡು ದೆಹಲಿಯಲ್ಲಿದ್ದ ಯಡಿಯೂರಪ್ಪ ಅವರು ನಿರೀಕ್ಷಣಾ ಜಾಮೀನು ಪಡೆದು ಸಿಐಡಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಪ್ರಕರಣದಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇನ್ನೂ ಮುಗಿದಿಲ್ಲ. ಪೋಕ್ಸೊ ಪ್ರಕರಣದಲ್ಲಿ ಆರೋಪಿಯನ್ನು ತಕ್ಷಣ ಬಂಧಿಸಬೇಕು ಎಂಬ ನಿಯಮವನ್ನು ಯಡಿಯೂರಪ್ಪ ಪ್ರಕರಣದಲ್ಲಿ ಪೊಲೀಸರು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ. ಕೋರ್ಟ್‌ ಕೂಡಾ ಯಡಿಯೂರಪ್ಪ ಅವರ ಬಂಧನ ಮಾಡದಂತೆ ತಡೆ ನೀಡಿದೆ.

ಮುಡಾ ಪ್ರಕರಣದಲ್ಲಿ ಸಿ ಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆ: ಮುಡಾದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಅಕ್ರಮವಾಗಿ ಹದಿನಾಲ್ಕು ನಿವೇಶನ ಹಂಚಿಕೆ ಮಾಡಲಾಗಿದೆ ಎಂಬ ವಿಪಕ್ಷಗಳ ಆರೋಪವಾಗಿತ್ತು. ಇದೇ ಸಂದರ್ಭದಲ್ಲಿ ವಕೀಲ ಟಿ ಜೆ ಅಬ್ರಹಾಂ, ಮೈಸೂರಿನ ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್‌ ಎಂಬವರ ಖಾಸಗಿ ದೂರು ಆಧರಿಸಿ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿದ್ದ ಸಿದ್ದರಾಮಯ್ಯ ಅವರ ಅರ್ಜಿ ಹೈಕೋರ್ಟ್‌ ವಜಾ ಮಾಡಿದ ಬೆನ್ನಲ್ಲೇ ಜನಪ್ರತಿನಿಧಿಗಳ ಕೋರ್ಟ್‌ ಲೋಕಾಯುಕ್ತ ತನಿಖೆಗೆ ಆದೇಶಿಸಿದೆ. ಮೂರು ತಿಂಗಳೊಳಗೆ ವರದಿ ನೀಡುವಂತೆ ಸೂಚಿಸಿದೆ. ಗುರುವಾರ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿದಂತೆ ಐದು ಮಂದಿಯ ವಿರುದ್ಧ ಮೈಸೂರಿನಲ್ಲಿ ಎಫ್‌ಐಆರ್‌ ದಾಖಲಾಗಿದೆ. ಸಿದ್ದರಾಮಯ್ಯ ಅವರು ಮುಡಾ ಪ್ರಕರಣದಲ್ಲಿ ಯಾವುದೇ ರೀತಿಯಲ್ಲೂ ಭಾಗಿಯಾಗದೇ ಇದ್ದರೂ, ಇದು ಬಿಜೆಪಿಯ ಕೇಂದ್ರದ ನಾಯಕರ ಅಣತಿಯಂತೆ ಸಿಎಂ ಸ್ಥಾನದಿಂದ ಕೆಳಗಿಳಿಸಲು ನಡೆಸಿರುವ ವ್ಯವಸ್ಥಿತ ಷಡ್ಯಂತ್ರ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೂ ತನಿಖೆ ಎದುರಿಸಬೇಕಾಗಿದೆ.

ಇದನ್ನೂ ಓದಿ ರಾಜ್ಯ ರಾಜಕಾರಣದಲ್ಲಿ BJP-RCB (ರಾಯಣ್ಣ ಚೆನ್ನಮ್ಮ ಬ್ರಿಗೇಡ್) ಹೊಸ ಆಟ!

ಹೀಗೆ ಈ ಆರು ತಿಂಗಳಲ್ಲಿ ಗುಣಾತ್ಮಕ ವಿಷಯಗಳಿಗಿಂತ ಕೆಡುಕಿನ ಸುದ್ದಿಗಳೇ ಹೆಚ್ಚು ಚರ್ಚೆಯಾಗುವಂತಾಯ್ತು. ಹಾಗಂತ ರಾಜ್ಯದಲ್ಲಿ ಒಳ್ಳೆಯದೇನೂ ನಡೆದೇ ಇಲ್ಲವೇ? ನಡೆದಿವೆ. ಆದರೆ, ಜವಾಬ್ದಾರಿ ಮರೆತ ಮಾಧ್ಯಮಗಳು ಕೆಡುಕನ್ನೇ ಸಂಭ್ರಮಿಸಿದ ಪರಿಣಾಮ ಗುಣಾತ್ಮಕ ವಿಚಾರಗಳೆಲ್ಲ ಗೌಣವಾಗುವಂತಾಯ್ತು ಅಷ್ಟೇ.

ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹಿಂದೆಂದಿಗಿಂತ ದಾಖಲೆಯ ಪ್ರಮಾಣದಲ್ಲಿ ಹೆಚ್ಚಾಗಿದೆ. ನಂದಿನಿ ತುಪ್ಪಕ್ಕೆ ತಿರುಪತಿಯಿಂದ ಮತ್ತೆ ಬೇಡಿಕೆ ಬಂದಿದೆ. ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳು ಬರ್ಬಾದ್‌ ಆಗಲಿವೆ ಎಂದು ಅಪಪ್ರಚಾರ ಮಾಡಿದ್ದ ವಿಪಕ್ಷಗಳಿಗೆ ಪ್ರತ್ಯುತ್ತರವಾಗಿ ನಿಗಮಗಳು ಲಾಭದಲ್ಲಿ ನಡೆಯುತ್ತಿವೆ. ಸರ್ಕಾರ ಸಾವಿರದಷ್ಟು ಹೊಸ ಬಸ್‌ಗಳನ್ನು ಖರೀದಿಸಿದೆ. ಕಳೆದ ವರ್ಷ ಬರಗಾಲದ ಛಾಯೆ ಆವರಿಸಿದ್ದ ರಾಜ್ಯದಲ್ಲಿ ಬರದ ಕಾರ್ಮೋಡ ಕರಗಿ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಗೇಟು ಮುರಿದು, ದುರಸ್ತಿ ಕಾರಣಕ್ಕೆ ನೀರು ಹೊರ ಹಾಕಿದ ಮೇಲೂ ತುಂಗಭದ್ರಾ ಡ್ಯಾಂ ತುಂಬಿದೆ. ಮೈಸೂರಿನ ಕೆಆರ್‌ಎಸ್‌ ಡ್ಯಾಂ ಭರ್ತಿಯಾಗಿದೆ. ಕರಾವಳಿ ಮಲೆನಾಡಿನ ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ. ಇಂತಹ ಇನ್ನೂ ಹಲವಾರು ನೆಮ್ಮದಿ ನೀಡುವ ಸಂಗತಿಗಳು ಘಟಿಸಿವೆ. ಆದರೆ ಅಬ್ಬರಿಸಿ ಸುದ್ದಿಯಾದದ್ದು ಕೆಡುಕಿನ ಘಟನೆಗಳು ಮಾತ್ರ. ಅಂದ ಹಾಗೆ ಸೆ.28 ʼವಿಶ್ವ ಸುದ್ದಿ ದಿನʼವಂತೆ!

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X