ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ)ನ 16ನೇ ರಾಜ್ಯ ಸಮ್ಮೇಳನಕ್ಕೆ ಚಿಕ್ಕಬಳ್ಳಾಪುರ ನಗರ ಸಜ್ಜಾಗಿದ್ದು, ವಿದ್ಯಾರ್ಥಿಗಳ ಬೃಹತ್ ಮೆರವಣಿಗೆ ಹಾಗೂ ಬಹಿರಂಗ ಸಮಾವೇಶದ ಮೂಲಕ ಮೂರು ದಿನಗಳ ಸಮ್ಮೇಳನಕ್ಕೆ ಇಂದು ಚಾಲನೆ ದೊರೆಯಲಿದೆ.
ಚಿಕ್ಕಬಳ್ಳಾಪುರ ನಗರದ ಕೆಇಬಿ ಸಮುದಾಯ ಭವನದಲ್ಲಿ ಇದೇ ಗುರುವಾರ(ಸೆ.26), ಶುಕ್ರವಾರ(ಸೆ.27) ಹಾಗೂ ಶನಿವಾರ(ಸೆ.28) ಮೂರು ದಿನಗಳ ಕಾಲ ಸಮ್ಮೇಳನ ನಡೆಯಲಿದ್ದು, ದೇಶದ ಹಾಗೂ ರಾಜ್ಯದ ಶೈಕ್ಷಣಿಕ ಸಮಸ್ಯೆಗಳ ಕುರಿತು ಚಿಂತನ, ಮಂಥನ ನಡೆಯಲಿದೆ.
ಸಮ್ಮೇಳದ ಬಹಿರಂಗ ಸಮಾವೇಶವನ್ನು ಜಿಲ್ಲೆಯವರೇ ಆದ ಖ್ಯಾತ ಚಿಂತಕ ಹಾಗೂ ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್ ಉದ್ಘಾಟಿಸಲಿದ್ದಾರೆ.
ಜಿಲ್ಲೆಯಲ್ಲಿ ಎಸ್ಎಫ್ಐ ಇತಿಹಾಸ:
1971ರ ದಶಕದಲ್ಲಿ ರಾಜ್ಯದಲ್ಲಿಯೆ ಮೊಟ್ಟ ಮೊದಲ ಬಾರಿಗೆ ಭಾರತ ವಿದ್ಯಾರ್ಥಿ ಫಡರೇಷನ್(ಎಸ್ಎಫ್ಐ) ಸಂಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಸಮೀಪ ಇರುವ ಕೋನಕುಂಟ್ಲವಿನಲ್ಲಿ ಸ್ಥಾಪನೆಗೊಂಡು, ಮೊದಲ ಸಮಾವೇಶವೂ ಅಲ್ಲಿಯೇ ನಡೆದ ಇತಿಹಾಸವಿದೆ. ಕಳೆದ 2008 ರಲ್ಲಿ ಚಿಕ್ಕಬಳ್ಳಾಪುರದ ಗುರುರಾಜ ಕಲ್ಯಾಣ ಮಂಟಪದಲ್ಲಿ 11ನೇ ರಾಜ್ಯ ಸಮ್ಮೇಳನ ನಡೆದಿತ್ತು. ಇದೀಗ 16ನೇ ರಾಜ್ಯ ಸಮ್ಮೇಳನ ಮತ್ತೊಮ್ಮೆ ಚಿಕ್ಕಬಳ್ಳಾಪುರದಲ್ಲೇ ನಡೆಯುತ್ತಿದೆ. ಈಗಾಗಲೇ ಸಮ್ಮೇಳನದಲ್ಲಿ ಸ್ವಾಗತ ಸಮಿತಿ ಎಲ್ಲಾ ರೀತಿಯ ಸಿದ್ದತೆಗಳನ್ನು ಕೈಗೊಂಡಿದ್ದು 300 ಜನ ವಿದ್ಯಾರ್ಥಿ ಪ್ರತಿನಿದಿಗಳಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಎಸ್ಎಫ್ಐನ ರಾಷ್ಟ್ರೀಯ ಅಧ್ಯಕ್ಷರಾದ ವಿ.ಪಿ.ಸಾನು, ಉಪಾಧ್ಯಕ್ಷರಾದ ನಿತೀಶ್ ನಾರಾಯಣ್, ಜಂಟಿ ಕಾರ್ಯದರ್ಶಿ ಆದರ್ಶ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.
ಮೂರು ದಿನಗಳ ಕಾಲ ನಡೆಯುವ ಸಮ್ಮೇಳನ
ಸಾರ್ವತ್ರಿಕ ಶಿಕ್ಷಣ, ಸಮಾನತೆ ಹಾಗೂ ಸೌಹಾರ್ದತೆಗಾಗಿ ಎಂಬ ಘೋಷಣೆಯಡಿ ರಾಜ್ಯ ಮಟ್ಟದ 16ನೇ ಎಸ್ಎಫ್ಐ ಸಮ್ಮೇಳನವು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ಇರುವ ಕೆಇಬಿ ಸಮುದಾಯ ಭವನದಲ್ಲಿ ಸೆ.26, 27 ಹಾಗೂ 28ರವರೆಗೆ ಮೂರು ದಿನಗಳ ಕಾಲ ಸಮ್ಮೇಳನ ನಡೆಯಲಿದೆ. ಮೊದಲ ದಿನ ಸಮ್ಮೇಳನದ ಭಾಗವಾಗಿ ವಿದ್ಯಾರ್ಥಿಗಳ ಬೃಹತ್ ರಾಲಿ ಹಾಗೂ ಬಹಿರಂಗ ಸಮಾವೇಶ ಆಯೋಜಿಸಲಾಗಿದೆ. ನಗರದ ಒಕ್ಕಲಿಗರ ಕಲ್ಯಾಣ ಮಂಟಪದಿಂದ ಕೆಇಬಿ ಸಮುದಾಯ ಭನದವರೆಗೂ ರಾಲಿ ನಡೆಯಲಿದ್ದು ಸಮುದಾಯ ಭವನದ ಮುಂದೆ ಬಹಿರಂಗ ಸಮಾವೇಶ ನಡೆಯಲಿದೆ.
300 ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗಿ
ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಮೂರು ದಿನಗಳ ರಾಜ್ಯ ಮಟ್ಟದ 16ನೇ ಸಮ್ಮೇಳನದಲ್ಲಿ ರಾಜ್ಯದ ಜಿಲ್ಲೆಗಳಿಂದ 300 ಕ್ಕೂ ಹೆಚ್ಚು ವಿದ್ಯಾರ್ಥಿ ಪ್ರಗತಿನಿಧಿಗಳು ಭಾಗವಹಿಸಲಿದ್ದಾರೆ. ದೇಶದ, ರಾಜ್ಯದ ಪ್ರಸ್ತುತ ಶೈಕ್ಷಣಿಕ ಕ್ಷೇತ್ರದ ಸಮಸ್ಯೆ, ಸವಾಲುಗಳ ಬಗ್ಗೆ ಸಮ್ಮೇಳನದಲ್ಲಿ ಮೂರು ದಿನಗಳ ಕಾಲ ಚರ್ಚೆ ನಡೆಸಿ ಸೂಕ್ತ ನಿರ್ಣಯಗಳನ್ನು ತೆಗೆದುಕೊಂಡು ಆ ಮೂಲಕ ರಾಜ್ಯದಲ್ಲಿ ವಿದ್ಯಾರ್ಥಿ ಚಳವಳಿಯನ್ನು ಬಲಪಡಿಸಲಾಗುವುದೆಂದು ಅಮರೇಶ ಕಡಗದ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೆಣ್ಣನ್ನು ದೇವಿಯೆಂದು ಪೂಜಿಸುವ ದೇಶದಲ್ಲಿ ದುಡಿಯವ ಹೆಣ್ಣಿನ ಡಬಲ್ ಶಿಫ್ಟ್!
ಇಡ್ಲಿ ಬೆಲೆ ಏರಿಕೆ ವಿರೋಧಿಸಿದ್ದ ಹೋರಾಟದಲ್ಲಿ ನಡೆದಿತ್ತು ಗೋಲಿಬಾರ್!
ಜಿಲ್ಲೆಯಲ್ಲಿ ಎಸ್ಎಫ್ಐ ವಿದ್ಯಾರ್ಥಿ ಸಂಘಟನೆ ಹಲವು ಜನಪರವಾದ ಹೋರಾಟಗಳಿಗೆ ಖ್ಯಾತಿ ಪಡೆದಿದೆ. ಒಂದು ಕಾಲಕ್ಕೆ 80 ದಶಕದಲ್ಲಿ ಚಿಂತಾಮಣಿಯಲ್ಲಿ ಇಡ್ಲಿ ದರ ಹೆಚ್ಚಾದಾಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದಾಗ ಗೋಲಿಬಾರ್ ನಡೆದಿತ್ತು. ಅದೇ ರೀತಿ ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟಕ್ಕೆ ಮುನ್ನುಡಿ ಬರೆದ ಕೀರ್ತಿ ಎಸ್ಎಫ್ಐಗೆ ಸಲ್ಲುತ್ತದೆ. ಅದೇ ರೀತಿ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಯೋಜನೆ ಜಾರಿಗೆ ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಎಸ್ಎಫ್ಐ ಹೋರಾಟ ನಡೆಸಿ ಅದರ ಜಾರಿಗೆ ಪ್ರಮುಖ ಪಾತ್ರವಹಿಸಿತು. ಹೀಗೆ ಜಿಲ್ಲೆಯ ಸಾಮಾಜಿಕ ಸಮಸ್ಯೆಗಳು, ವಿದ್ಯಾರ್ಥಿ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಎಸ್ಎಫ್ಐ ಹೋರಾಟ ಸಾಕಷ್ಟು ಹೋರಾಟಗಳನ್ನು ನಡೆಸುತ್ತಿದೆ.