ಬೆಂಗಳೂರು ನಗರದ ವೈಯಾಲಿಕಾವಲ್‌ನಲ್ಲಿ ನಡೆದ ಮಹಾಲಕ್ಷ್ಮೀ ಕೊಲೆ ಪ್ರಕರಣದಲ್ಲಿ ಪ್ರಧಾನ ಶಂಕಿತ ಆರೋಪಿ ಮುಕ್ತಿರಂಜನ್ ರಾಯ್ ಒಡಿಶಾದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ 29 ವರ್ಷದ ಯುವತಿಯನ್ನು ಕೊಂದು ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ತುಂಬಲಾಗಿತ್ತು. ಈ ಕೃತ್ಯ ಎಸಗಿ ಊರಿಗೆ ಪರಾರಿಯಾಗಿದ್ದ ಶಂಕಿತ ಆರೋಪಿ ಒಡಿಶಾದ ಭದ್ರಕ್ ಪಟ್ಟಣದಲ್ಲಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ಸೆಪ್ಟೆಂಬರ್ 21ರಂದು 29 ವರ್ಷದ ಮಹಾಲಕ್ಷ್ಮಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪದ ಮೇಲೆ ಮುಕ್ತಿ ರಂಜನ್ ರಾಯ್ (30) ಎಂಬಾತನನ್ನು ಬಂಧಿಸಲು ಕರ್ನಾಟಕ ಪೊಲೀಸರು ಒಡಿಶಾದಲ್ಲಿ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ ಆರೋಪಿ ಶವವಾಗಿ ಪತ್ತೆಯಾಗಿದ್ದಾನೆ.
ಇದನ್ನು ಓದಿದ್ದೀರಾ? ಬೆಂಗಳೂರು | ಯುವತಿ ಮಹಾಲಕ್ಷ್ಮೀ ಕೊಲೆ ಪ್ರಕರಣ: ಆರೋಪಿಯ ಮಾಹಿತಿ ಲಭ್ಯ ಎಂದ ಕಮಿಷನರ್
ಇನ್ನು ಡೆತ್‌ನೋಟ್ ಕೂಡಾ ಪತ್ತೆಯಾಗಿದೆ ಎನ್ನಲಾಗಿದೆ. ಈ ಕೊಲೆಯನ್ನು ತಾನೇ ಮಾಡಿರುವುದಾಗಿ ಆರೋಪಿ ಮುಕ್ತಿ ರಂಜನ್ ರಾಯ್ ತಪ್ಪೊಪ್ಪಿಕೊಂಡಿರುವ ಡೆತ್‌ನೋಟ್ ಪತ್ತೆಯಾಗಿದೆ ಎಂದು ವರದಿಯಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಬೆಂಗಳೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿದ ಭದ್ರಕ್ ಎಸ್‌ಪಿ ವರುಣ್ ಗುಂಟುಪಲ್ಲಿ, “ಬೆಂಗಳೂರಿನ ಕೊಲೆಗೆ ಸಂಬಂಧಿಸಿದಂತೆ ಬಂಧನಕ್ಕೆ ಹೆದರಿ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವಂತೆ ಕಂಡುಬಂದಿದೆ. ಬೆಂಗಳೂರು ಪೊಲೀಸರು ಕಳೆದ ಮೂರು ದಿನಗಳಿಂದ ಭದ್ರಕ್ ಮತ್ತು ಬಾಲಸೋರ್ ಜಿಲ್ಲೆಗಳಲ್ಲಿ ಶಂಕಿತ ಆರೋಪಿಯ ಶೋಧ ನಡೆಸುತ್ತಿದ್ದರು. ನಾವು ಅವರಿಗೆ ಅಗತ್ಯವಿರುವ ಎಲ್ಲ ಸಹಾಯವನ್ನು ನೀಡಿದ್ದೇವೆ” ಎಂದು ತಿಳಿಸಿದ್ದಾರೆ.
ವರದಿ ಪ್ರಕಾರ ಮುಕ್ತಿ ರಂಜನ್ ರಾಯ್ ಧುಸುರಿ ಪ್ರದೇಶದ ನಿವಾಸಿಯಾಗಿದ್ದು, ಬೆಂಗಳೂರಿನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಈತ ಸೆಪ್ಟೆಂಬರ್ 24ರಂದು ಭದ್ರಕ್ ತಲುಪಿದ್ದ ಎಂದು ರಾಯ್ ಕುಟುಂಬ ಹೇಳಿದೆ.
