ಬಿಜೆಪಿ ಮತ್ತು ಜೆಡಿಎಸ್ ನಾಯಕರ ಕುತಂತ್ರದಿಂದ ಸಿದ್ದರಾಮಯ್ಯನವರ ತೇಜೋವಧೆ ನಡೆಯುತ್ತಿದೆ. ಇದನ್ನು ಖಂಡಿಸಿ ಸೆ.26ರಂದು(ಇಂದು) ಶಿಕಾರಿಪುರ ಪಟ್ಟಣವನ್ನು ಸಂಪೂರ್ಣವಾಗಿ ಬಂದ್ ಮಾಡಲು ತಾಲೂಕು ಅಹಿಂದ ಸಂಘಟನೆ ಕರೆ ನೀಡಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಶಿಕಾರಿಪುರ ತಾಲೂಕು ಅಹಿಂದ ಒಕ್ಕೂಟದ ಯುವ ಘಟಕದ ಅಧ್ಯಕ್ಷ ಮಾಲತೇಶ್, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜಕಾರಣದಲ್ಲಿ ಬಿಳಿ ಹಾಳೆಯಂತಿರುವ ಸಿದ್ದರಾಮಯ್ಯನವರಿಗೆ ಕಳಂಕ ಅಂಟಿಸಲು ಕುತಂತ್ರ ನಡೆಸಿದ್ದಾರೆ. ಈ ಉದ್ದೇಶಕ್ಕಾಗಿ ಮುಡಾ ಹಗರಣ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಜೆಪಿ, ಜೆಡಿಎಸ್ ನಾಯಕರ ಕುತಂತ್ರವನ್ನು ಖಂಡಿಸಿ ಬಂದ್‌ಗೆ ಕರೆ ನೀಡಲಾಗಿದೆ. ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ವ್ಯಾಪಾರಸ್ಥರು ಅಂಗಡಿ ಮುಂಗಟ್ಟು ಬಂದ್ ಮಾಡಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸಂಜೆ ಆರು ಗಂಟೆಯವರೆಗೆ ಈ ಬಂದ್ ಇರಲಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದ ಜನತೆಗೆ ಐದು ಗ್ಯಾರಂಟಿಗಳನ್ನು ನೀಡಿರುವಂತಹ ಸಿದ್ದರಾಮಯ್ಯ ಸರ್ಕಾರವನ್ನು ಉರುಳಿಸಲು ಷಡ್ಯಂತ್ರ ನಡೆಸಲಾಗುತ್ತಿದೆ. ಇದನ್ನು ಜನತೆ ವಿರೋಧಿಸಬೇಕು. ಬಂದ್‌ಗೆ ಎಲ್ಲರೂ ಸಹಕರಿಸಬೇಕು ಎಂದು ಇಂದು ಬೆಳಗ್ಗಿನಿಂದಲೇ ಮೈಕ್ ಮೂಲಕ ಘೋಷಣೆ ಮಾಡಲಾಗಿತ್ತು. ಶಾಲಾ-ಕಾಲೇಜುಗಳು ಎಂದಿನಂತೆ ನಡೆಯುತ್ತಿದೆ.
ಇದನ್ನು ಓದಿದ್ದೀರಾ? ಬಾಗಲಕೋಟೆ | ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ನಾಲ್ವರು ಸ್ಥಳದಲ್ಲೇ ಸಾವು
ಬಂದ್ ಕರೆಗೆ ಸ್ವಯಂಪ್ರೇರಿತವಾಗಿ ಸಾರ್ವಜನಿಕರು ಸ್ಪಂದಿಸಿದ್ದು, ಶಿಕಾರಿಪುರ ಪಟ್ಟಣದಲ್ಲಿ ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟುಗಳು ಬಂದ್ ಆಗಿದೆ. ಸಾರಿಗೆ ಕೂಡ ಬಂದ್ ಆಗಿದೆ. ಸ್ವಂತ ವಾಹನ ಇರುವವರು ಓಡಾಡುತ್ತಿದ್ದಾರೆ. ಆದರೂ, ಶಿಕಾರಿಪುರ ಪಟ್ಟಣ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.
ಪ್ರತಿಭಟನೆ
ಅಲ್ಲದೇ, ತಾಲೂಕು ಅಹಿಂದ ಸಂಘಟನೆಯ ವತಿಯಿಂದ ಬಿಜೆಪಿ-ಜೆಡಿಎಸ್ ವಿರುದ್ಧ ಪ್ರತಿಭಟನೆ ಕೂಡ ಹಮ್ಮಿಕೊಳ್ಳಲಾಗಿದೆ.
ನಗರದ ಕನಕ ಪಾರ್ಕ್‌ನಿಂದ ಪ್ರತಿಭಟನಾ ಮೆರವಣಿಗೆ ನಡೆದಿದ್ದು, ಸಂಗೊಳ್ಳಿ ರಾಯಣ್ಣನ ಪ್ರತಿಮೆ ಮಾಲಾರ್ಪಣೆ ಮಾಡಲಾಯಿತು. ನಂತರ ಖಾಸಗಿ ಬಸ್ ನಿಲ್ದಾಣದವರೆಗೆ ಬೃಹತ್ ಮೆರವಣಿಗೆ ಕೂಡ ಹಮ್ಮಿಕೊಳ್ಳಲಾಯಿತು.
ಪ್ರತಿಭಟನೆಯಲ್ಲಿ ಅಹಿಂದ ಯುವ ಘಟಕದ ಅಧ್ಯಕ್ಷ ನಗರದ ಮಾಲತೇಶ್, ಪುರಸಭಾ ಸದಸ್ಯ ಉಳ್ಳಿ ದರ್ಶನ್, ಭಂಡಾರಿ ಮಾಲತೇಶ್, ತಾಲೂಕು ಅಹಿಂದ ಸಂಘಟನೆ ಅಧ್ಯಕ್ಷ ಕಾಗಿನಲ್ಲಿ ರಂಗಪ್ಪ, ಕಸಬಾ ಸೊಸೈಟಿ ನಿರ್ದೇಶಕ ನಗರದ ರವಿ ಕಿರಣ್, ಡಿ.ಆರ್.ಗಿರೀಶ್, ಅಹಿಂದ ಮುಖಂಡರಾದ ನಗರದ ರವೀಂದ್ರ ಕಿಟ್ಟಿ, ಬನ್ನೂರು ಸುನಿಲ್ ಮತ್ತಿತರರು ಉಪಸ್ಥಿತರಿದ್ದರು.
