ಅರಣ್ಯ ಭೂಮಿ ಡಿನೋಟಿಫೈ ಆದರೆ, ಆ ಭೂಮಿಗೆ ಚಿನ್ನದ ಬೆಲೆ ದೊರೆಯುತ್ತದೆ. ಅದು, ಎಚ್‌ಎಂಟಿ ಪಾಲಾಗುತ್ತದೆ. ಅರ್ಥಾತ್ ಕೇಂದ್ರ ಸರ್ಕಾರದ ಪಾಲಾಗುತ್ತದೆ. ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಅಧೀನಕ್ಕೆ ಒಳಪಡುತ್ತದೆ.
ರಾಜ್ಯ ರಾಜಕಾರಣದಲ್ಲಿ ಸದ್ಯ ಅಕ್ರಮ, ಅವ್ಯವಹಾರ, ನಿವೇಶನ ಹಂಚಿಕೆ, ಅಕ್ರಮ ಡಿನೋಟಿಫಿಕೇಷ್ ಹಾಗೂ ಭೂ ಒತ್ತವರಿ ಕುರಿತ ಚರ್ಚೆಗಳೇ ಹೆಚ್ಚಾಗುತ್ತಿವೆ. ಮುಡಾ ಅಕ್ರಮ ನಿವೇಶನ ಹಂಚಿಕೆ ವಿಚಾರ ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ-ಜೆಡಿಎಸ್ ಅಬ್ಬರಿಸಿ ಬೊಬ್ಬಿರಿಯುತ್ತಿವೆ. ಸಿದ್ದರಾಮಯ್ಯರ ರಾಜೀನಾಮೆ ಆಗ್ರಹಿಸಿ, ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ. ಇದೇ ಸಮಯದಲ್ಲಿ, ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದಿರುವ ಕೊರೋನ ಮೆಡಿಸಿನ್ ಹಗರಣ, 40% ಕಮಿಷನ್, ಪಿಎಸ್ಐ ಹಗರಣ, ಕ್ರಿಪ್ಟೊಕರೆನ್ಸಿ ಸೇರಿದಂತೆ ನಾನಾ ಅವ್ಯವಹಾರಗಳ ಬಗ್ಗೆ ಕಾಂಗ್ರೆಸ್ ಸರ್ಕಾರ ತನಿಖೆ ನಡೆಸುತ್ತಿದೆ. ಜೊತೆಗೆ, 2007-10ರ ನಡುವೆ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಡೆದಿರುವ ಬೆಂಗಳೂರಿನ ಗಂಗಾನಗರದ 1.11 ಎಕರೆ ಅಕ್ರಮ ಡಿನೋಟಿಫಿಕೇಷನ್ ಹಗರಣ ಮತ್ತೆ ಮುನ್ನೆಲೆಗೆ ಬಂದಿದೆ. ಲೋಕಾಯುಕ್ತ ತನಿಖೆಯನ್ನು ಚುರುಕುಗೊಳಿಸಿದೆ.
ಇದೆಲ್ಲದರ ನಡುವೆ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸರ್ಕಾರಿ ಸ್ವಾಮ್ಯದ ಎಚ್‌ಎಂಟಿ ಕಾರ್ಖಾನೆಯ ವಶದಲ್ಲಿರುವ ಭೂವಿವಾದ ಮುನ್ನೆಲೆಗೆ ಬಂದಿದೆ. ಬೆಂಗಳೂರಿನ ಪೀಣ್ಯದಲ್ಲಿ 10,000 ಕೋಟಿ ರೂ. ಮೌಲ್ಯದ 599 ಎಕರೆ ಅರಣ್ಯ ಭೂಮಿ ಎಚ್‌ಎಂಟಿ ವಶದಲ್ಲಿದೆ. ಆ ಪೈಕಿ, ಈಗಾಗಲೇ ನೂರಾರು ಎಕರೆ ಭೂಮಿಯನ್ನು ಖಾಸಗಿಯವರಿಗೆ ಕಾರ್ಖಾನೆ ಮಾರಾಟ ಮಾಡಿದೆ. ಆ ಅರಣ್ಯ ಭೂಮಿಯಲ್ಲಿ ಈಗ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತುತ್ತಿವೆ.
ಹೀಗಾಗಿ, ಅರಣ್ಯ ಭೂಮಿಯು ಖಾಸಗಿ ಮತ್ತು ವಾಣಿಜ್ಯ ಉದ್ದೇಶಕ್ಕೆ ಮಾರಾಟ ಮತ್ತು ಬಳಕೆಯಾಗುತ್ತಿದೆ. ಮಾತ್ರವಲ್ಲದೆ, ಉಳಿದ ಭೂಮಿಯನ್ನೂ ಡಿನೋಟಿಫಿಕೇಷನ್ ಮಾಡಲು ಡಿನೋಟಿಫೈ ಮಾಡಲು ಸಚಿವರು ಮತ್ತು ಸಚಿವ ಸಂಪುಟದ ಅನುಮೋದನಯನ್ನೇ ಪಡೆಯದೆ ಅರಣ್ಯ ಅಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಅಧಿಕಾರಿಗಳ ಈ ನಡೆ, ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ. ಅದರಲ್ಲೂ, ಎಚ್.ಡಿ ಕುಮಾರಸ್ವಾಮಿ ಅವರು ಕೇಂದ್ರ ಕೈಗಾರಿಕಾ ಸಚಿವರಾದ ಬಳಿಕ ಅಧಿಕಾರಿಗಳು ಎಚ್‌ಎಂಟಿ ವಶದಲ್ಲಿರುವ ಅರಣ್ಯ ಭೂಮಿಯ ಡಿನೋಟಿಫೈಗೆ ಅರ್ಜಿ ಸಲ್ಲಿಸಿರುವುದು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ಹಗ್ಗ-ಜಗ್ಗಾಟಕ್ಕೆ ಕಾರಣವಾಗಿದೆ. ಮಾತ್ರವಲ್ಲದೆ, ಸರ್ಕಾರಿ ಅರಣ್ಯ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿಸಿ, ಖಾಸಗಿಯವರಿಗೆ ಅಥವಾ ಖಾಸಗಿ ಉದ್ದೇಶಕ್ಕೆ ಬಳಸಲು ಕುಮಾರಸ್ವಾಮಿ ಅವರೇ ಮುಂದಾಗಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ.
ಅಂದಹಾಗೆ, ಬೆಂಗಳೂರು ಸುತ್ತಮುತ್ತ ಹಸಿರು ಹೊದಿಕೆ ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರು ಹೊರವಲಯದಲ್ಲಿ ನೆಡುತೋಪು ಬೆಳೆಸುವುದಕ್ಕಾಗಿ ಭೂಮಿಯನ್ನು 1990ರ ದಶಕದಲ್ಲಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಅದರಲ್ಲಿ, ಎಚ್‌ಎಂಟಿಗೆ ಅಧೀನದಲ್ಲಿದ್ದ ಭೂಮಿಯೂ ಸೇರಿತ್ತು. ಆದರೆ, ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉದ್ದೇಶಿತ ನೆಡುತೋಪುಗಳು ಮೇಲೇಳಲಿಲ್ಲ. ಮಾತ್ರವಲ್ಲದೆ, ಆ ಭೂಮಿಯನ್ನು ಇಲಾಖೆ ತನ್ನ ವಶಕ್ಕೂ ಪಡೆಯಲಿಲ್ಲ. ಪರಿಣಾಮ, ಭೂಮಿ ಎಚ್‌ಎಂಟಿ ಸ್ವಾಧೀನದಲ್ಲೇ ಉಳಿದುಕೊಂಡಿತು.
ಆ ಪೈಕಿ, ಈಗಾಗಲೇ ಎಚ್ಎಂಟಿ 165 ಎಕರೆ ಜಮೀನನ್ನು, 313.65 ಕೋಟಿ (313,65,52,681 ರೂ.)ಗೆ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಮಾರಾಟ ಮಾಡಿದೆ. ಮಾರಾಟವಾದ ಈ ಭೂಮಿಯ ಪೈಕಿ, 27 ಎಕರೆ ಭೂಮಿಯನ್ನು ಪ್ರೆಸ್ಟೀಜ್ ಕಂಪನಿ ಖರೀದಿಸಿದ್ದು, ಅಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಾಣ ಮಾಡುತ್ತಿದೆ. ಈಗಾಗಲೇ ಮಾರಾಟವಾಗಿರುವ ಇತರ ಭೂಮಿಯಲ್ಲಿಯು ಖಾಸಗಿ ಬಿಲ್ಡಿಂಗ್‌ಗಳು, ಉದ್ದಿಮೆಗಳು ತಲೆ ಎತ್ತುತ್ತಿವೆ.
ಈ ಹಿನ್ನೆಲೆಯಲ್ಲಿ, ಎಚ್‌ಎಂಟಿ ಪ್ರದೇಶದಲ್ಲಿದ್ದ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಯ ಅಧೀನಕ್ಕೆ ಪಡೆದುಕೊಂಡು, ನಿಯಮ 64ಎ ಅಡಿಯಲ್ಲಿ ಅಲ್ಲಿನ ಒತ್ತುವರಿ ತೆರವುಗೊಳಿಸಲು 2015ರಲ್ಲಿ ಅಂದಿನ ಎ.ಪಿ.ಸಿ.ಸಿ.ಎಫ್ ವೆಂಕಟಸುಬ್ಬಯ್ಯ ಅವರು ಪ್ರಕ್ರಿಯೆ ನಡೆಸಿ ಆದೇಶಿಸಿದ್ದರು. ಆ ಆದೇಶದ ವಿರುದ್ಧ ಎಚ್ಎಂಟಿ ನಿಗದಿತ ಕಾಲಮಿತಿಯೊಳಗೆ ಮೇಲ್ಮನವಿಯನ್ನೂ ಸಲ್ಲಿಸಲಿಲ್ಲ. ಹೀಗಾಗಿ, ಅದು ಈಗ ಅರಣ್ಯ ಇಲಾಖೆಯ ಸ್ವತ್ತೇ ಆಗಿದೆ.
ಈ ವರದಿ ಓದಿದ್ದೀರಾ?: ಈದಿನ.ಕಾಮ್ ತನಿಖಾ ವರದಿ | ಸರ್ಕಾರಿ ಸ್ವತ್ತು ಗುಳುಂ ಹಗರಣ; ಒಂದೇ ಎಫ್‌ಐಆರ್‌ನಲ್ಲಿ ಇಬ್ಬರು ‘ಸಿಎಂ’ಗಳು
ಹೀಗಿರುವಾಗ, ಅರಣ್ಯ ಅಧಿಕಾರಿಗಳು ರಾಜ್ಯ ಸಚಿವರು ಮತ್ತು ಸಚಿವ ಸಂಪುಟದ ಗಮನಕ್ಕೂ ತರದೆ, ಎಚ್‌ಎಂಟಿ ವಶದಲ್ಲಿರುವ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಲು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಗಮನಾರ್ಹ ಸಂಗತಿ ಎಂದರೆ, ಕರ್ನಾಟಕ ಅರಣ್ಯ ಕಾಯ್ದೆ-1963ರ ಸೆಕ್ಷನ್ 17ರಡಿಯಲ್ಲಿ ಮೀಸಲು ಅರಣ್ಯ ಎಂದು ಅಧಿಸೂಚನೆಯಾದ ಯಾವುದೇ ಭೂಮಿಯನ್ನು ನೇರವಾಗಿ ‘ಅರಣ್ಯವಲ್ಲ’ ಎಂದು ಘೋಷಿಸಲು ಸಾಧ್ಯವಿಲ್ಲ. ಹಾಗೆ ಘೋಷಿಸಬೇಕೆಂದರೆ, ವಿಧಾನಮಂಡಲದ ಉಭಯ ಸದನಗಳಲ್ಲಿ ನಿರ್ಣಯ ಅಂಗೀಕಾರವಾಗಬೇಕು. ಜೊತೆಗೆ, ಕರ್ನಾಟಕ ಸರ್ಕಾರದ ಕಾರ್ಯ ಕಲಾಪಗಳ ನಿರ್ವಹಣಾ ನಿಯಮಾವಳಿ 1977ರ ಪ್ರಥಮ ಪರಿಶಿಷ್ಟದಲ್ಲಿ ಹೇಳಲಾಗಿರುವಂತೆ ಸರ್ಕಾರಿ ಭೂಮಿಯನ್ನು ಯಾವುದೇ ಇತರ ಸರ್ಕಾರಿ ಇಲಾಖೆಗೆ ವರ್ಗಾವಣೆ ಮಾಡಬೇಕಾದ ಸಂದರ್ಭದಲ್ಲಿ ಅದರ ಮೌಲ್ಯ 5 ಕೋಟಿ ರೂ.ಗಿಂತ ಹೆಚ್ಚಾಗಿದ್ದಲ್ಲಿ, ಕಡ್ಡಾಯವಾಗಿ ಸಚಿವ ಸಂಪುಟದ ಪೂರ್ವಾನುಮತಿ ಪಡೆಯಬೇಕು. ಆದರೆ, ಅಧಿಕಾರಿಗಳು ಇದಾವುದೇ ಕ್ರಮವನ್ನು ಅನುಸರಿಸದೆ, ನೇರವಾಗಿ ಡಿನೋಟಿಫಿಕೇಷನ್‌ಗಾಗಿ ಸುಪ್ರಿಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದು, ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಮಾತ್ರವಲ್ಲ, ಅಧಿಕಾರಿಗಳ ಈ ನಡೆಯ ಹಿಂದೆ ಕೇಂದ್ರ ಕೈಗಾರಿಕಾ ಸಚಿವರ ಪಾತ್ರವಿದೆಯೇ ಎಂಬ ಶಂಕೆಯನ್ನೂ ಹುಟ್ಟುಹಾಕಿದೆ.
ಮೊದಲೇ ಹೇಳಿದಂತೆ, ಎಚ್‌ಎಂಟಿ ವಶದಲ್ಲಿರುವ 599 ಎಕರೆ ಭೂಮಿ ಬೆಂಗಳೂರಿನ ಹೃದಯ ಭಾಗದಲ್ಲಿಯೇ ಇದೆ. ಪೀಣ್ಯ ಕೈಗಾರಿಕಾ ಪ್ರದೇಶವೂ ಆಗಿದ್ದು, ಅಲ್ಲಿನ ಭೂಮಿಗೆ ಭಾರೀ ಬೆಲೆಯಿದೆ. ಎಚ್‌ಎಂಟಿ ಅಧೀನದಲ್ಲಿರುವ ಭೂಮಿಗೆ ಪ್ರಸ್ತುತ ಮಾರುಕಟ್ಟೆ ಬೆಲೆಯಲ್ಲಿ ಕನಿಷ್ಠ 10,000 ಕೋಟಿ ರೂ. ಬೆಲೆ ಇದೆ. ಹೀಗಾಗಿ, ಆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿಸಿ, ರಾಜ್ಯ ಅರಣ್ಯ ಇಲಾಖೆಯಿಂದ ಮರಳಿ ಎಚ್‌ಎಂಟಿ ಪಡೆದುಕೊಂಡರೆ, ಆ ಭೂಮಿಗೆ ಚಿನ್ನದ ಬೆಲೆ ದೊರೆಯುತ್ತದೆ. ಅದು, ಎಚ್‌ಎಂಟಿ ಪಾಲಾಗುತ್ತದೆ. ಅರ್ಥಾತ್ ಕೇಂದ್ರ ಸರ್ಕಾರದ ಪಾಲಾಗುತ್ತದೆ. ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಅಧೀನಕ್ಕೆ ಒಳಪಡುತ್ತದೆ.
ಅರಣ್ಯ ಇಲಾಖೆಯಿಂದ ಆ ಭೂಮಿ ಡಿನೋಟಿಫೈ ಆಗಿ, ಕೇಂದ್ರ ಕೈಗಾರಿಕಾ ಸಚಿವಾಲಯಕ್ಕೆ ಒಳಪಟ್ಟರೆ, ಅದನ್ನು ಕುಮಾರಸ್ವಾಮಿ ಅವರು ಕೈಗಾರಿಕೆ, ಕೈಗಾರಿಕೋದ್ಯಮದ ಹೆಸರಿನಲ್ಲಿ ತಮಗಿಷ್ಟ ಬಂದಂತೆ ಬಳಸಬಹುದಾದ ಅವಕಾಶವೂ ಸಿಗುತ್ತದೆ. ಸಚಿವರು ಎಚ್‌ಎಂಟಿ ಅಭಿವೃದ್ಧಿಗಾಗಿ ಆ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಆ ಭೂಮಿ ಡಿನೋಟಿಫೈ ಆದರೆ, ಅದರ ಫಲಾನುಭವಿ ಯಾರಾಗಲಿದ್ದಾರೆ ಎಂಬುದಕ್ಕೆ ಖಾತ್ರಿ ಇಲ್ಲ.
ಈಗಾಗಲೇ, ಹಿಂದುಳಿದ ವರ್ಗಗಳ ವಸತಿ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ಸ್ವಾಧೀನಪಡಿಸಿಕೊಂಡಿದ್ದ ಗಂಗಾನಗರದ 1.11 ಎಕರೆ ಭೂಮಿಯನ್ನು 2007ರಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಡಿನೋಟಿಫೈ ಮಾಡಲು ಕಡತ ತೆರೆದಿದ್ದರು. 2010ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರ ಆ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿ ಆದೇಶ ಹೊರಡಿಸಿದ್ದರು. ಅಲ್ಲದೆ, ಆ ಭೂಮಿಯನ್ನು ಕುಮಾರಸ್ವಾಮಿ ಅವರ ಬಾಮೈದನ ಹೆಸರಿಗೆ ನೋಂದಣಿಯನ್ನೂ ಮಾಡಿಕೊಡಲಾಯಿತು. ಹಿಂದುಳಿದ ಜನರಿಗೆ ವಸತಿ ಒದಗಿಸಬೇಕಿದ್ದ ಭೂಮಿ, ಈಗ ಕುಮಾರಸ್ವಾಮಿ ಬಾಮೈದನ ಹೆಸರಿನಲ್ಲಿ ಭದ್ರವಾಗಿದೆ. ಅದರ ನೇರ ಫಲಾನುಭವಿ ಕುಮಾರಸ್ವಾಮಿ ಮತ್ತು ಪರೋಕ್ಷ ಫಲಾನುಭವಿ ಯಡಿಯೂರಪ್ಪ ಎಂದು ಆರೋಪಿಸಲಾಗಿದೆ. ಈ ಅಕ್ರಮ ಡಿನೋಟಿಫಿಕೇಷನ್ ಹಗರಣದಲ್ಲಿ ಈ ಇಬ್ಬರು ಎ1, ಎ2 ಆರೋಪಿಗಳೂ ಆಗಿದ್ದಾರೆ.
ಈಗ ಕುಮಾರಸ್ವಾಮಿ ಅವರೇ ಕೇಂದ್ರ ಕೈಗಾರಿಕಾ ಸಚಿವರೂ ಆಗಿದ್ದು, ಎಚ್‌ಎಂಟಿ ಅವರ ಇಲಾಖೆಯ ಅಧೀನದಲ್ಲೇ ಇದೆ. ಎಚ್‌ಎಂಟಿ ಪ್ರದೇಶದ ಭೂಮಿ ಡಿನೋಟಿಫೈ ಆಗಿ, ಕೇಂದ್ರ ಕೈಗಾರಿಕಾ ಸಚಿವಾಲಯದ ಅಧೀನಕ್ಕೆ ಒಳಪಟ್ಟರೆ, ಅದರ ಫಲಾನುಭವಿ ಯಾರಾಗಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ. ಒಂದು ವೇಳೆ, ಡಿನೋಟಿಫೈ ಆಗಿಬಿಟ್ಟರೆ, ಆ ಭೂಮಿಯ ಮೇಲೆ ಹಣದ ಹೊಳೆಯೇ ಹರಿಯಬಹುದು. ಬಿಜೆಪಿ-ಜೆಡಿಎಸ್ ಜೊತೆಗೆ ಸಂಬಂಧ, ಸಂಪರ್ಕ ಹೊಂದಿರುವವರು ಭೂಮಿಯ ಫಲಾನುಭವಿಗಳೂ ಆಗಬಹುದು ಎಂಬ ಮಾತುಗಳೂ ಇವೆ.
ಇದೆಲ್ಲದರ ನಡುವೆ, ಎಚ್‌ಎಂಟಿ ಪ್ರದೇಶದ ಭೂಮಿಯನ್ನು ಖಾಸಗಿ ಸಂಸ್ಥೆಗಳಿಗೆ, ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶಕ್ಕಾಗಿ ನಿಯಮಗಳನ್ನು ಗಾಳಿಗೆ ತೂರಿ, ಸಚಿವರ ಮತ್ತು ಸಚಿವ ಸಂಪುಟದ ಅನುಮೋದನೆ ಇಲ್ಲದೆ, ಆ ಭೂಮಿಯನ್ನು ಡಿನೋಟಿಫೈ ಮಾಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಅದಕ್ಕೆ ಅವಕಾಶ ನೀಡುವುದಿಲ್ಲ. ಎಚ್‌ಎಂಟಿ ಪ್ರದೇಶದ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಯ ವಶಕ್ಕೆ ಪಡೆಯಲಾಗುತ್ತದೆ. ಒತ್ತುವರಿ ತೆರವುಗೊಳಿಸಲಾಗುತ್ತದೆ ಎಂದು ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಜೊತೆಗೆ, ಸಚಿವರ ಅಥವಾ ಸಚಿವ ಸಂಪುಟದ ಪೂರ್ವಾನುಮತಿ ಪಡೆಯದೆ ಸಾವಿರಾರು ಕೋಟಿ ರೂ. ಮೌಲ್ಯದ ಅರಣ್ಯ ಭೂಮಿಯನ್ನು ಡಿನೋಟಿಫೈಗೆ ಆದೇಶ ಮಾಡಿಸಿ, ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿರುವ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಎಲ್ಲ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಸಹ ಜಾರಿ ಮಾಡಿದ್ದಾರೆ. ಮಾತ್ರವಲ್ಲದೆ, ಅಧಿಕಾರಿಗಳು ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆಯಲು ಮತ್ತೊಂದು ಅರ್ಜಿ ಸಲ್ಲಿಸಲಾಗಿದೆ. ಆ ಭೂಮಿಯನ್ನು ಅರಣ್ಯ ಇಲಾಖೆಯ ವಶಕ್ಕೆ ಪಡೆದು, ಲಾಲ್‌ಬಾಗ್ ಅಥವಾ ಕಬ್ಬನ್ ಪಾರ್ಕ್ ರೀತಿಯಲ್ಲಿ ಅಭಿವೃದ್ಧಿ ಪಡಿಸುತ್ತೇವೆಂದು ಸಚಿವ ಖಂಡ್ರೆ ಹೇಳಿಕೊಂಡಿದ್ದಾರೆ.
ಆದರೆ, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ವಾದವೇ ಬೇರೆ ಇದೆ. ”ಎಚ್‌ಎಂಟಿ ಕಾರ್ಖಾನೆಯನ್ನು ಉಳಿಸುವ ಉದ್ದೇಶದಿಂದ ಪರಿಣಿತರ ಸಮಿತಿ ರಚನೆಗೆ ಕ್ರಮ ಕೈಗೊಳ್ಳಲಾಗಿದೆ. ಕಾರ್ಖಾನೆ ಪ್ರದೇಶದ ಭೂಮಿಯನ್ನು ಯಾವ ಕಾರಣಕ್ಕೂ ಸರ್ಕಾರಕ್ಕೆ (ಅರಣ್ಯ ಇಲಾಖೆ) ಹಿಂದಿರುಗಿಸುವ ಪ್ರಶ್ನೆಯೇ ಇಲ್ಲ. ನಷ್ಟದಲ್ಲಿದೆ ಎಂಬ ಕಾರಣಕ್ಕೆ ಎಚ್‌ಎಂಟಿ ಕಾರ್ಖಾನೆಯನ್ನು ಮುಚ್ಚಲು ಕೇಂದ್ರ ಸರ್ಕಾರ 2016ರಲ್ಲೇ ತೀರ್ಮಾನಿಸಿತ್ತು. ಪ್ರಧಾನಿ, ಹಣಕಾಸು ಸಚಿವರ ಮನವೊಲಿಸಿ ಕಾರ್ಖಾನೆಗೆ ಕಾಯಕಲ್ಪ ನೀಡುವ ಗುರಿ ಹಾಕಿಕೊಂಡಿದ್ದೇನೆ. ರಾಜ್ಯ ಸರ್ಕಾರ ನಮಗೆ ಸಹಕಾರ ನೀಡಬೇಕು. ಭೂಮಿ ವಿಚಾರದಲ್ಲಿ ಸರ್ಕಾರ ಕಿರುಕುಳ ನೀಡಿದರೆ, ಕಾನೂನು ಹೋರಾಟ ನಡೆಸುತ್ತೇವೆ” ಎಂದಿದ್ದಾರೆ.
ಅದೇನೆ ಇರಲಿ, ಎಚ್‌ಎಂಟಿ ಪ್ರದೇಶದಲ್ಲಿರುವ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು, ಅದು ಅರಣ್ಯ ಇಲಾಖೆಗೆ ಹಸ್ತಾಂತರಗೊಂಡು, ಅರಣ್ಯ ಭೂಮಿಯಾಗಿ ಗುರುತಿಸಿಕೊಂಡಿದೆ. ಅದನ್ನು ತನ್ನ ವಶದಲ್ಲಿ ಇಟ್ಟುಕೊಳ್ಳುವ ಅಧಿಕಾರ ಎಚ್‌ಎಂಟಿಗೆ ಇಲ್ಲ. ಆ ಭೂಮಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡು, ನೆಡುತೋಪು ನಿರ್ಮಾಣ ಮಾಡುವುದೇ, ಇಲ್ಲವೇ ಡಿನೋಟಿಫೈ ಆಗಿ ಖಾಸಗಿಯವರಿಗೆ ಮಾರಾಟವಾಗುವುದೇ ಅಥವಾ ರಾಜ್ಯ ಸರ್ಕಾರವು ಅದನ್ನು ವಶಕ್ಕೆ ಪಡೆದು, ಬೇರೆ ಉದ್ದೇಶಕ್ಕೆ ಬಳಸಿಕೊಳ್ಳುವುದೇ? …ಕಾದು ನೋಡಬೇಕಿದೆ.