ಮುಡಾ ಪ್ರಕರಣ ಸಂಬಂಧವಾಗಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಗುರುವಾರ ರಾಜ್ಯ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸಿತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಉಪ ನಾಯಕ ಅರವಿಂದ ಬೆಲ್ಲದ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದರು, ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಉಪಸ್ಥಿತರಿದ್ದರು.
“ಸಿದ್ದರಾಮಯ್ಯ ಕೊಡಲೇ ರಾಜೀನಾಮೆ ಕೊಡಬೇಕು, ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಧಿಕ್ಕಾರ, ಮುಡಾ ಸೈಟ್‍ಗಳನ್ನು ಕೊಳ್ಳೆ ಹೊಡೆದ ಸಿದ್ದರಾಮಯ್ಯನವರಿಗೆ ಧಿಕ್ಕಾರ, ಬೆಲೆ ಏರಿಕೆ, ತೆರಿಗೆ ಏರಿಕೆ ಸಿದ್ದರಾಮಯ್ಯನವರಿಗೆ ಧಿಕ್ಕಾರ..” ಎಂದು ಮೊದಲಾದ ಘೋಷಣೆಗಳನ್ನು ಕೂಗಿದರು.
ಬಿಜೆಪಿ ಪ್ರಮುಖರು ಮಾತನಾಡಿ, ಮುಡಾ ಹಗರಣಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಕೂಡಲೇ ರಾಜೀನಾಮೆ ಕೊಡಬೇಕು. ಕರ್ನಾಟಕ ಕಂಡ ಅತ್ಯಂತ ಭ್ರಷ್ಟ ಸರಕಾರ ಇದು ಎಂದು ಟೀಕಿಸಿದರು.
“ವಿಧಾನಸಭೆ ವಿಸರ್ಜನೆ ಮಾಡಿ ತಮ್ಮ ಹಿಂದೆ ರಾಜ್ಯದ ಜನರಿದ್ದಾರೆ ಎಂದು ತೋರಿಸಿಕೊಟ್ಟರೆ ಬಿಜೆಪಿ ನಿಮ್ಮ ವಿರುದ್ಧ ಪ್ರತಿಭಟನೆಯನ್ನೇ ಮಾಡುವುದಿಲ್ಲ” ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸವಾಲು ಹಾಕಿದರು.
“ಸಿದ್ದರಾಮ್ಯನವರೇ ನೀವು ವಿಧಾನಸಭೆ ವಿಸರ್ಜನೆಗೆ ಮುಂದಾದರೆ ಕಾಂಗ್ರೆಸ್ಸಿನ 136 ಶಾಸಕರ ಪೈಕಿ 135 ಜನ ಶಾಸಕರೂ ನಿಮ್ಮ ಜೊತೆ ಇರುವುದಿಲ್ಲ. ಜಮೀರ್, ಮಹದೇವಪ್ಪ, ಕಾಕಾ ಪಾಟೀಲ್ ಕೂಡ ಇರುವುದಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕನಸಿನ ಮಾತಾಗಿದೆ. ಲೂಟಿ, ಭ್ರಷ್ಟಾಚಾರ ಮಿತಿ ಮೀರಿದೆ. ಈ ಸರಕಾರಕ್ಕೆ ವಿಧಾನಸೌಧದಲ್ಲಿ ಕ್ಯಾಬಿನೆಟ್ ಸಭೆ ಮಾಡಲು ಅಧಿಕಾರ, ಯೋಗ್ಯತೆ ಇಲ್ಲ ಎಂದ ಅವರು, ರಾಜೀನಾಮೆ ಕೊಡುವುದೊಂದೇ ನಿಮ್ಮ ಮುಂದಿನ ದಾರಿ” ಎಂದರು.
“ಅರ್ಕಾವತಿ ಹಗರಣ ತಾವು ಬಿಳಿಬಟ್ಟೆಯಂತಿಲ್ಲ ಎಂಬುದನ್ನು ತೋರಿಸುತ್ತದೆ. ಸಿದ್ದರಾಮಯ್ಯನವರು ರೀಡೂ ಹೆಸರಿನಲ್ಲಿ 880 ಎಕರೆಯನ್ನು ರಿಯಲ್ ಎಸ್ಟೇಟ್ ಬ್ರೋಕರ್‌ಗಳಿಗೆ ಡೀನೋಟಿಫಿಕೇಶನ್ ಮಾಡಿದ್ದಾರೆ” ಎಂದು ವಿಧಾನಪರಿಷತ್ ಸದಸ್ಯ ಸಿ ಟಿ ರವಿ ಆರೋಪಿಸಿದರು.
ಪೊಲೀಸ್ ವಶಕ್ಕೆ
ರಾಜ್ಯ ಬಿಜೆಪಿ ವತಿಯಿಂದ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು, ಜನಪ್ರತಿನಿಧಿಗಳನ್ನು ಪೊಲೀಸರು ಬಂಧಿಸಿ, ಕರೆದೊಯ್ದರು.
ಮಹಾತ್ಮ ಗಾಂಧೀಜಿಯನ್ನು ಒಪ್ಪಿಕೊಳ್ಳದ ತತ್ವಸಿದ್ಧಾಂತಿಗಳು ಮತ್ತು ಅಪ್ಪಟ ಸತ್ಯ ಹರಿಶ್ಚಂದ್ರರು,, ಇವರೆಲ್ಲಾ ತಮ್ಮ ಹಿನ್ನೆಲೆಯೇನು ಒಮ್ಮೆ ತಿರುಗಿ ನೋಡಿಕೊಂಡರೆ ಏನಾದ್ರೂ ಒಂಚೂರು ಆತ್ಮಸಾಕ್ಷಿ ಅಂತಾ ಇದ್ದರೆ ತಮ್ಮ ಬಗ್ಗೆ ತಮಗೆ ಅಸಹ್ಯ ಅನಿಸಬೇಕು,,,