ಸಮಾಜದಲ್ಲಿರುವ ಪ್ರತಿಯೊಬ್ಬರೂ ಹೆಚ್ಚಿನ ಪ್ರಯತ್ನ ಮಾಡಿ ಸರ್ಕಾರಿ ಶಾಲೆಗಳಲ್ಲಿ ಮತ್ತಷ್ಟು ಉತ್ತಮ ಗುಮಟ್ಟದ ಶಿಕ್ಷಣ ಲಭ್ಯವಾಗುವಂತೆ ನೋಡಿಕೊಳ್ಳಬೇಕಿದೆ. ಖಾಸಗಿ ಶಾಲೆಯ ಮಕ್ಕಳೂ ಸರ್ಕಾರಿ ಶಾಲೆಗಳ ಕಡೆ ಮುಖಮಾಡುವಂತಹ ದಿನಗಳು ಶೀಘ್ರದಲ್ಲೇ ಬರಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.
ಸಿಎಸ್ಆರ್ ಫಂಡ್ ಹಾಗೂ ಉದ್ಯಮಿ ಆನಂದ್ ಪೈ ಕುಟುಂಬದವರ ಸಹಯೋಗದೊಂದಿಗೆ ಬ್ಯಾಟರಾಯನಪುರದಲ್ಲಿ 4.5 ಕೋಟಿ ರೂ. ವೆಚ್ಚದಲ್ಲಿ 17 ನೂತನ ತರಗತಿ ಕೊಠಡಿ, ಉತ್ತಮ ಗುಣಮಟ್ಟದ ಶೌಚಾಲಯ ಹಾಗೂ ಅಡುಗೆ ಕೊಣೆಯನ್ನು ಒಳಗೊಂಡ ಹೈಟೆಕ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
“ನಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ಆ ನಿಟ್ಟಿನಲ್ಲಿ ಖಾಸಗಿ ಶಾಲೆಯ ಮಕ್ಕಳಿಗೆ ಸಿಗುವಂತಹ ಉತ್ತಮ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಯ ಮಕ್ಕಳಿಗೂ ಸಿಗುವಂತಾಗಬೇಕು ಎಂಬುದೇ ಎಲ್ಲರ ಆಶಯ. ಆ ನಿಟ್ಟಿನಲ್ಲಿ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಪ್ರಸ್ತುತ ನಿರ್ಮಿಸಲಾಗಿರುವ ಈ ಶಾಲೆ ಯಾರೇ ಆದರೂ ಒಮ್ಮೆ ತಿರುಗಿ ನೋಡುವಂತೆ ಅಭಿವೃದ್ಧಿಯಾಗಿರುವುದು ಸಂತಸದ ವಿಚಾರ” ಎಂದು ಹೇಳಿದರು.
“ಬ್ಯಾಟರಾಯನಪುರದಲ್ಲಿ ಅನೇಕ ಸರ್ಕಾರಿ ಶಾಲೆಗಳನ್ನುಈಗಾಗಲೇ ಸಿಎಸ್ಆರ್ ಫಂಡ್ ಬಳಸಿ ಉನ್ನತ ಮಟ್ಟಕ್ಕೆ ಏರಿಸಲಾಗಿದೆ. ಖಾಸಗಿ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಕಟ್ಟಡ ಹಾಗೂ ಕಲಿಕಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಪರಿಣಾಮ ಸರ್ಕಾರಿ ಶಾಲೆಗಳಿಗೆ ಆಗಮಿಸುವ ಮಕ್ಕಳ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡಿದೆ. ಇದೇ ಮಾದರಿಯಲ್ಲಿ ಇದೀಗ ಮತ್ತೊಂದು ಶಾಲೆ ಲೋಕಾರ್ಪಣೆಯಾಗಿದ್ದು ನಿಜಕ್ಕೂ ಹೆಮ್ಮೆ ಪಡಬೇಕಾದ ವಿಚಾರ. ಈ ಮೂಲಕ ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ, ನಾಳಿನ ಸಮಾಜಕ್ಕೆ ಅವರನ್ನು ಆಸ್ತಿಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ” ಎಂದು ಅವರು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಕರಿಗೂ ಕಿವಿಮಾತು ಹೇಳಿದ ಸಚಿವ ಕೃಷ್ಣ ಬೈರೇಗೌಡ, “ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿದ ಕೂಡಲೇ ಶಾಲೆಗಳು ಉತ್ತಮಗೊಳ್ಳುವುದಿಲ್ಲ. ಬದಲಾಗಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಿದಾಗ ಮಾತ್ರ ನಮ್ಮ ಕೆಲಸ ಸಾರ್ಥಕವಾಗುತ್ತದೆ. ಆ ನಿಟ್ಟಿನಲ್ಲಿ ಶಿಕ್ಷಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಶಾಲೆಯ ಶಿಕ್ಷಕರು ನಮ್ಮ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಕೆಲಸ ಮಾಡಲಿ, ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳೂ ನಾಳೆ ದೊಡ್ಡ ಉದ್ಯಮಿಗಳಾಗಿ ನಮ್ಮ ಸಮಾಜಕ್ಕೆ ಹಾಗೂ ಎಲ್ಲಾ ಶಿಕ್ಷಕರಿಗೂ ಮತ್ತಷ್ಟು ಸ್ಫೂರ್ತಿ ಪ್ರೇರಣೆಯಾಗಲಿ” ಎಂದು ಆಶಿಸಿದರು.