ತುಮಕೂರು ಜಿಲ್ಲೆಯಲ್ಲಿ ಕೃಷಿ ಕೂಲಿ ಕಾರ್ಮಿಕ ವೃದ್ದ ದಂಪತಿಗೆ ತೋಟದಲ್ಲಿ ಕೂಡಿ ಹಾಕಿ, ಮಾಲೀಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ.
ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಬೆಳಕಿಗೆ ಬಂದಿದ್ದು, ತಾಲೂಕಿನ ಬೆಲ್ಲದಮಡಗು ಗ್ರಾಮದಲ್ಲಿರುವ ತೋಟದ ಮಾಲೀಕ ಲಕ್ಷ್ಮೀನಾರಾಯಣ ಎಂಬಾತ ದೌರ್ಜನ್ಯ ಎಸಗಿರುವುದಾಗಿ ಕೃಷಿ ಕೂಲಿ ಕಾರ್ಮಿಕ ವೃದ್ದ ದಂಪತಿ ಆರೋಪಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಸಂತ್ರಸ್ತ ದಂಪತಿಗಳಾದ ಹನುಮಂತರಾಯಪ್ಪ, ರಾಮಕ್ಕ ಎಂಬುವವರು, ಮಾಲೀಕ ಲಕ್ಷ್ಮೀನಾರಾಯಣ ದೌರ್ಜನ್ಯ ಎಸಗುತ್ತಿದ್ದು, ಕೆಲಸಕ್ಕೆಂದು ಕರೆತಂದು ತೋಟದಲ್ಲಿ ಕೂಡಿ ಹಾಕಿರುವುದಾಗಿ ಆರೋಪಿಸಿದ್ದಾರೆ.
“ತಲಾ 14 ಸಾವಿರ ಸಂಬಳ, ವಸತಿ ನೀಡುವುದಾಗಿ ಒಂದು ವರ್ಷದಿಂದ ದುಡಿಸಿಕೊಳ್ಳಲಾಗುತ್ತಿದೆ. ಇದೀಗ ಇಬ್ಬರಿಗೂ ತಲಾ 7 ಸಾವಿರ ನೀಡುವುದಾಗಿ ಹೇಳಿ ಎರಡು ತಿಂಗಳಿಂದ ಸಂಬಳ ನೀಡಿಲ್ಲ. ಕೇಳಿದರೆ ಒಬ್ಬರಿಗಷ್ಟೇ ಕೊಡೋದು. ಇನ್ನೊಬ್ಬರಿಗೆ ಕೊಡಲ್ಲ ಎಂದು ಹೇಳುತ್ತಿದ್ದಾರೆ. ನಮಗೆ ಜೀವನ ನಡೆಸಲು ತುಂಬಾ ಕಷ್ಟವಾಗುತ್ತಿದೆ. ಸರಿಯಾಗಿ ಕುಡಿಯಲು ನೀರು ಕೂಡ ನಮಗೆ ಸಿಗುತ್ತಿಲ್ಲ. ಬೇರೆ ಕಡೆಯಿಂದ ತಂದು ಕುಡಿಯುತ್ತಿದ್ದೇವೆ. ಸಂಬಳ ಕೇಳಿದರೆ ದೌರ್ಜನ್ಯ ಎಸಗುತ್ತಿದ್ದಾರೆ. ವಾಸವಿರುವ ಶೆಡ್‌ಗೂ ಬೀಗ ಹಾಕಿ ಹೋಗ್ತಾರೆ” ಎಂದು ಮಾಲೀಕನ ವಿರುದ್ಧ ಆರೋಪಿಸಿದ್ದಾರೆ.
ವೃದ್ದ ದಂಪತಿಯನ್ನು ಕೂಡಿ ಹಾಕಿ ದೌರ್ಜನ್ಯ ಎಸಗುತ್ತಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯನ್ನು ಆಧರಿಸಿ ಡಾ. ಬಿ ಆರ್ ಅಂಬೇಡ್ಕರ್ ದಂಡು ತುಮಕೂರು ಜಿಲ್ಲಾಧ್ಯಕ್ಷ ಎನ್ ಕುಮಾರ್ ತೋಟಕ್ಕೆ ಬಂದಾಗ ತೋಟದ ಗೇಟಿಗೆ ಬೀಗ ಹಾಕಿರುವುದು ಕಂಡು ಬಂತು. ಕುಮಾರ್ ಅವರಲ್ಲಿ ದಂಪತಿ ತಮ್ಮ ನೋವನ್ನು ವೃದ್ಧ ದಂಪತಿ ತೋಡಿಕೊಂಡಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅಂಬೇಡ್ಕರ್ ದಂಡು ತುಮಕೂರು ಜಿಲ್ಲಾಧ್ಯಕ್ಷ ಎನ್ ಕುಮಾರ್, ವೃದ್ದ ದಂಪತಿಯನ್ನ ತೋಟದಲ್ಲಿ ಕೂಡಿ ಹಾಕಿ ದೌರ್ಜನ್ಯ ಎಸಗುತ್ತಿದ್ದಾರೆ. ತೋಟದಿಂದ ಹೊರಗೆ ಹೋಗಲು ಬಿಡದೇ ಗೇಟ್ ಗೆ ಬೀಗ ಹಾಕಿದ್ದಾರೆ. ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಬಂದಿದ್ದೇವೆ. ಸದ್ಯ ದಂಪತಿಗೆ ಹೊಟೇಲ್‌ನಿಂದ ಊಟ ಪಾರ್ಸೆಲ್ ತಂದು ನೀಡಿದ್ದೇವೆ. ಈ ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ತೋಟದ ಮಾಲೀಕರನ್ನು ಕರೆಸಿ, ಈ ವೃದ್ಧ ದಂಪತಿಗೆ ನ್ಯಾಯ ಕೊಡಿಸಬೇಕು. ವೃದ್ದ ದಂಪತಿಗಳ ರಕ್ಷಣೆ ಮಾಡಿ, ಮಾಲೀಕನ ವಿರುದ್ದ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಒತ್ತಾಯ” ಎಂದು ಆಗ್ರಹಿಸಿದ್ದಾರೆ.
