ಬಿಜೆಪಿಯೊಳಗೆ ಯತ್ನಾಳ್ ಮತ್ತು ಈಶ್ವರಪ್ಪ ಒಂದೇ ನಾಣ್ಯದ ಎರಡು ಮುಖಗಳು. ಈ ಇಬ್ಬರೂ ನಾಯಕರು ಪಕ್ಷದೊಳಗೆ ತೀವ್ರ ಅಸಂತೃಪ್ತರು. ಯಡಿಯೂರಪ್ಪ ಕುಟುಂಬ ರಾಜಕಾರಣವನ್ನು ಏರುಧ್ವನಿಯಲ್ಲಿ ವಿರೋಧಿಸಬಲ್ಲ ನಾಯಕರು. ಹಿಂದುತ್ವದ ವಿಚಾರ ಬಂದಾಗ ನಾಲಿಗೆಯನ್ನು ಅಷ್ಟೇ ಹರಿತವಾಗಿ ಬಳಸುವವರು. ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡುವಲ್ಲಿ ಇವರಿಬ್ಬರೂ ನಿಸ್ಸೀಮರು. ಇವರಿಬ್ಬರಿಂದ ರಾಜ್ಯ ರಾಜಕಾರಣದಲ್ಲಿ ಬಿಜೆಪಿ-ಆರ್‌ಸಿಬಿ ಹೊಸ ಆಟ ಶುರುವಾಗುತ್ತಿದೆ.
ಆರ್‌ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಯಾರಿಗೆ ಗೊತ್ತಿಲ್ಲ ಹೇಳಿ? ರಾಜ್ಯ, ದೇಶ ಹಾಗೂ ಪ್ರಪಂಚದ ಕ್ರಿಕೆಟ್ ಆಟದ ಲೋಕದೊಳಗೆ ‘ಆರ್‌ಸಿಬಿ’ ಬಹಳ ಪ್ರಸಿದ್ಧಿ ಪಡೆದ ಹೆಸರು. ಈಗ ರಾಜ್ಯ ರಾಜಕೀಯದಲ್ಲೂ ‘ಆರ್‌ಸಿಬಿ’ ಹೆಸರು ಹೆಚ್ಚು ಮುನ್ನೆಲೆಗೆ ಬರುತ್ತಿದೆ. ಆದರೆ ಅದು ಕ್ರಿಕೆಟ್ ಆಟವಲ್ಲ, ರಾಜಕೀಯದ ಚದುರಂಗದಾಟವಾಡಲು!
ಇದೇನಿದು ‘ಆರ್‌ಸಿಬಿ’ ಅಂತ ಕುತೂಹಲ ಮೂಡಿರಬಹುದಲ್ಲ? ಈ ಹಿಂದೆ ‘ಸಂಗೊಳ್ಳಿ ರಾಯಣ್ಣ ಬ್ರಿಗೇಡ್’ ನಿರ್ಮಿಸುವ ಮೂಲಕ ಪರೋಕ್ಷವಾಗಿ ಬಿಜೆಪಿಗೆ ತಮ್ಮ ‘ಶಕ್ತಿ’ ತೋರಿಸಿದ್ದ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದಾರೆ. ರಾಜ್ಯದ ಬಲಿಷ್ಠ ಸಮುದಾಯ ಎನಿಸಿಕೊಂಡ ಪಂಚಮಸಾಲಿ ಸಮಾಜದ ಜೊತೆಗೆ ಸೇರಿಕೊಂಡು ಆರ್‌ಸಿಬಿ (ರಾಯಣ್ಣ ಚೆನ್ನಮ್ಮ ಬ್ರಿಗೇಡ್) ಸಂಘಟನೆಯ ಪ್ಲ್ಯಾನ್ ಮಾಡಿದ್ದಾರೆ.
ಜಾತಿ ರಾಜಕಾರಣವನ್ನೇ ಕೇಂದ್ರವಾಗಿಟ್ಟುಕೊಂಡ ಈಶ್ವರಪ್ಪ ಅವರು ಬಹುಸಂಖ್ಯಾತರಾಗಿರುವ ಕುರುಬ ಮತ್ತು ಪಂಚಮಸಾಲಿ ಸಮಾಜವನ್ನು ಒಂದೇ ಸಂಘಟನೆಯಡಿ ಸೇರಿಸಿ ಬ್ರಿಗೇಡ್ ಮಾಡುತ್ತಿರುವುದರಿಂದ ಸಹಜವಾಗಿಯೇ ಈ ಬೆಳವಣಿಗೆ ರಾಜ್ಯದಲ್ಲಿ ರಾಜಕೀಯ ಕಿಡಿ ಹಾರಿಸುವ ಸಾಧ್ಯತೆ ಇದೆ.
ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನನ್ನು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಜಾತಿ ಐಕಾನ್‌ಗಳನ್ನಾಗಿ ಮಾಡಿಕೊಂಡು, ಪಂಚಮಸಾಲಿ ಸಮುದಾಯಕ್ಕೆ ಚೆನ್ನಮ್ಮರನ್ನು ಹಾಗೂ ಕುರುಬ ಸಮುದಾಯಕ್ಕೆ ರಾಯಣ್ಣನ್ನು ಸೀಮಿತಗೊಳಿಸಿ ‘ಆರ್‌ಸಿಬಿ’ ಕಟ್ಟಲಾಗುತ್ತಿದೆ.
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿಜೆಪಿಯಿಂದ ಉಚ್ಚಾಟಿತರಾಗಿರುವ ಕೆ ಎಸ್ ಈಶ್ವರಪ್ಪ ಅವರಿಗೆ ರಾಯಣ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಈಶ್ವರಪ್ಪ ಮತ್ತು ಯತ್ನಾಳ್ ಅವರಿಗೆ ಕೂಡಲಸಂಗಮ ಪೀಠದ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು, “ರಾಯಣ್ಣ ಚೆನ್ನಮ್ಮ ಬ್ರಿಗೇಡ್ (ಆರ್‌ಸಿಬಿ) ಹೆಸರಿನಲ್ಲಿ ಸಂಘಟನೆ ಮಾಡಿ, ನೊಂದವರಿಗೆ, ಬಡವರಿಗೆ, ದಲಿತರಿಗೆ, ಹಿಂದುಳಿದವರಿಗೆ ಶಕ್ತಿ ತುಂಬಬೇಕು” ಎಂಬ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
‘ರಾಯಣ್ಣ ಚೆನ್ನಮ್ಮ ಬ್ರಿಗೇಡ್’ ಹೆಸರಿನಲ್ಲಿ ಸಂಘಟನೆ ಕಟ್ಟುವ ವಿಚಾರವಾಗಿ ವಿಜಯಪುರದಿಂದಲೇ ಮೊದಲ ಸಭೆ ಆರಂಭವಾಗಿದೆ. ವಿಜಯಪುರದ ಮಹಾಲ-ಐನಾಪುರದ ಹುಲಜಂತಿ ಮಠದಲ್ಲಿ ಸಮುದಾಯದ ಪ್ರಮುಖರ ಜೊತೆ ಕೆ ಎಸ್ ಈಶ್ವರಪ್ಪ ಮೊದಲ ಸಭೆ ನಡೆಸಿದ್ದಾರೆ. ಆರ್‌ಸಿಬಿ ರಚನೆ ಮಾಡುವುದು ಹೇಗೆ, ರೂಪುರೇಷೆ ಏನಿರಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.
ಎರಡನೇ ಸಭೆಯನ್ನು ಬಾಗಲಕೋಟೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಮುಖಂಡರು, ಮಠಾಧೀಶರು, ಲಿಂಗಾಯತ-ಪಂಚಮಸಾಲಿ, ಕುರುಬ ಸಮುದಾಯದ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ, ಬಾಗಲಕೋಟೆಯ ಸಭೆಯೊಳಗೆ ಆರ್‌ಸಿಬಿ (ರಾಯಣ್ಣ ಚೆನ್ನಮ್ಮ ಬ್ರಿಗೇಡ್) ಹೆಸರನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪವನ್ – ಕಂಗನಾ ಎಂಬ ‘ಬುದ್ಧಿ’ವಂತರು ಮತ್ತು ಬಿಜೆಪಿ
‘ಸಂಕಟ ಬಂದಾಗ ವೆಂಕಟರಮಣ’ ಎನ್ನುವಂತೆ ಸಂಘಟನೆ ಕಟ್ಟುವುದು ಈಶ್ವರಪ್ಪಗೆ ಹೊಸದಲ್ಲ. 2018ರ ವಿಧಾನಸಭಾ ಚುನಾವಣೆ ವೇಳೆ ಶಿವಮೊಗ್ಗದಿಂದ ತಮಗೆ ಟಿಕೆಟ್ ಸಿಗುವುದಿಲ್ಲ ಎಂದು ಸುದ್ದಿಯಾಗುತ್ತಿದ್ದಂತೆ ಹುಟ್ಟಿಕೊಂಡಿದ್ದು ‘ಸಂಗೊಳ್ಳಿ ರಾಯಣ್ಣ ಬ್ರಿಗೇಡ್’. ಹಿಂದುಳಿದವರ ಅದರಲ್ಲೂ ವಿಶೇಷವಾಗಿ ಕುರುಬ ಜನಾಂಗದ ಮತಗಳನ್ನು ಸೆಳೆಯಬಹುದೆಂಬ ಲೆಕ್ಕಾಚಾರದಲ್ಲಿ ರಾಯಣ್ಣ ಬ್ರಿಗೇಡ್ ಒಂದಿಷ್ಟು ಸುದ್ದಿ ಕೂಡ ಆಯಿತು. ಆಮೇಲೆ ಏನಾಯಿತು ಎಂಬುದು ಗೊತ್ತಿರುವ ವಿಚಾರ. ಮೋದಿ ಅವರು ಯಡಿಯೂರಪ್ಪಗೆ ಕರೆ ಮಾಡಿ ಮಾತನಾಡಿದ್ದರಿಂದ ಈಶ್ವರಪ್ಪ ಅವರನ್ನು ಯಡಿಯೂರಪ್ಪ ಹತ್ತಿರಕ್ಕೆ ಸೇರಿಸಿಕೊಂಡರು. ಅಲ್ಲಿಗೆ ರಾಯಣ್ಣ ಬ್ರಿಗೇಡ್ ಹುಟ್ಟಿಕೊಂಡ ವೇಗದಲ್ಲೇ ಮಲಗಿತು. ಈಶ್ವರಪ್ಪಗೆ ವಿಧಾನಸಭೆಯಲ್ಲಿ ಟಿಕೆಟ್ ಲಭಿಸಿತು. ಮುಂದೆ ಆಪರೇಷನ್ ಕಮಲ ಸರ್ಕಾರದಲ್ಲಿ ಮಂತ್ರಿಯೂ ಆದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಪುತ್ರ ಕಾಂತೇಶ್‌ಗೆ ಹಾವೇರಿ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಈಶ್ವರಪ್ಪ ಬಿಜೆಪಿಯೊಳಗೆ ಬಂಡಾಯ ಎದ್ದು ಯಡಿಯೂರಪ್ಪ ಪುತ್ರ ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಹೀನಾಯವಾಗಿ ಸೋತರು. ಬಂಡಾಯದ ಪರಿಣಾಮ ಪಕ್ಷದಿಂದಲೂ ಉಚ್ಚಾಟಿತರಾಗಿ ಈಗ ಈಶ್ವರಪ್ಪ ರಾಜಕೀಯ ನೆಲೆ ಕಳೆದುಕೊಂಡಿದ್ದಾರೆ.
ಹಿಂದುತ್ವದ ಹೆಸರಿನಲ್ಲಿ ಬಂಡಾಯವೆದ್ದಿರುವ ಈಶ್ವರಪ್ಪ ಯಡಿಯೂರಪ್ಪ ವಿರೋಧಿ ಬಣದ ಜೊತೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಶಿವಮೊಗ್ಗದಲ್ಲಿ ಯಡಿಯೂರಪ್ಪ ಕುಟುಂಬ ಎದುರು ರಾಜಕೀಯ ಬೆಂಬಲ ತೀರಾ ಅಗತ್ಯ ಈಶ್ವರಪ್ಪಗಿದೆ. ಹೀಗಾಗಿ, ಮೋದಿ ಹೆಸರಿನಲ್ಲಿ ಹಿಂದುತ್ವ ನನ್ನದು ಎಂದು ಹೊರಟಿರುವ ಈಶ್ವರಪ್ಪ, ಮತ್ತೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಜೀವ ನೀಡಲು ಹೊರಟಿದ್ದಾರೆ. ಒಬ್ಬಂಟಿಯಾಗಿ ಹೋಗುವುದಕ್ಕಿಂತ ಯಡಿಯೂರಪ್ಪ ಕುಟುಂಬವನ್ನು ಕಟುವಾಗಿ ವಿರೋಧಿಸುವ ಯತ್ನಾಳ್ ಅವರನ್ನು ಜೊತೆ ಮಾಡಿಕೊಳ್ಳುತ್ತಿದ್ದಾರೆ.
ಬಿಜೆಪಿಯೊಳಗೆ ಯತ್ನಾಳ್ ಮತ್ತು ಈಶ್ವರಪ್ಪ ಒಂದೇ ನಾಣ್ಯದ ಎರಡು ಮುಖಗಳು. ಈ ಇಬ್ಬರೂ ನಾಯಕರು ಪಕ್ಷದೊಳಗೆ ತೀವ್ರ ಅಸಂತೃಪ್ತರು. ಯಡಿಯೂರಪ್ಪ ಕುಟುಂಬ ರಾಜಕಾರಣವನ್ನು ಏರುಧ್ವನಿಯಲ್ಲಿ ವಿರೋಧಿಸಬಲ್ಲ ನಾಯಕರು. ಹಿಂದುತ್ವದ ವಿಚಾರ ಬಂದಾಗ ನಾಲಿಗೆಯನ್ನು ಅಷ್ಟೇ ಹರಿತವಾಗಿ ಬಳಸುವವರು. ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡುವುದರಲ್ಲಿ ಇವರಿಬ್ಬರೂ ನಿಸ್ಸೀಮರು.
ಧರ್ಮ ದ್ವೇಷವನ್ನೇ ಉಸಿರಾಡುವ ಇವರಿಬ್ಬರೂ ಕೂಡಿ ಸಂಘಟನೆ ಕಟ್ಟಿದರೆ ಅದರ ಸ್ವರೂಪ ಹೇಗಿರಲಿದೆ ಎಂಬುದನ್ನು ವಿವರಿಸಬೇಕಿಲ್ಲ. ಬಿಜೆಪಿಯೊಳಗೆ ಹಿಂದುತ್ವ ಆರಾಧನೆಯ ಪ್ರಬಲ ಬಿ ಟೀಮ್ ಎಂದು ‘ಆರ್‌ಸಿಬಿ’ ಗುರುತಿಸಿಕೊಳ್ಳಬಹುದು. ಅದರಾಚೆಗೆ ಬಿಎಸ್‌ವೈ ವಿರುದ್ಧ ಬಲವಾದ ವಿರೋಧಿ ಗುಂಪನ್ನು ದೊಡ್ಡದಾಗಿ ಕಟ್ಟಬಲ್ಲರೇ? ಅದಕ್ಕೂ ಕೂಡ ಸ್ಪಷ್ಟತೆ ಇಲ್ಲ. ಬಿಎಸ್‌ವೈ ವಿರುದ್ಧದ ವಿರೋಧದ ಧ್ವನಿಯನ್ನು ತುಸು ಎತ್ತರಿಸಬಹುದು ಅಷ್ಟೇ! ಇದರಾಚೆಗೆ ಆರ್‌ಸಿಬಿ ಹಿಂದುಳಿದ ವರ್ಗದವರ, ಶೋಷಿತರ ಧ್ವನಿಯಾಗಿ ಬೆಳೆದು ನಿಲ್ಲುತ್ತಾ ಎಂಬುದನ್ನು ಹೇಳಲಾಗದು.
ರಾಜ್ಯದಲ್ಲಿ ಹೊಸ ಸಂಘಟನೆಯ ಹುಟ್ಟಿನ ಪ್ರಯೋಗ ಸಿದ್ದರಾಮಯ್ಯ ಅವರ ಮೂಲಕ ಯಶಸ್ವಿಯಾಗಿದೆ. ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ಶಕ್ತಿ ತುಂಬಿದ್ದೇ ‘ಅಹಿಂದ’ ಸಂಘಟನೆ. ಜೆಡಿಎಸ್‌ನಲ್ಲಿದ್ದ ಸಿದ್ದರಾಮಯ್ಯ ಅವರು 2005ರಲ್ಲಿ ಅಹಿಂದ ಸಂಘಟನೆ ಮೂಲಕ ಶಕ್ತಿ ಪ್ರದರ್ಶಿಸಲು ಮುಂದಾಗಿದ್ದರು. ಅದಕ್ಕೆ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ವಿರೋಧ ವ್ಯಕ್ತಪಡಿಸಿದ್ದರು. ನಂತರ ಆ ಪಕ್ಷದಿಂದ ಹೊರಬಿದ್ದು ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ನಡೆಸಿ ಕಾಂಗ್ರೆಸ್ ಸೇರಿ ರಾಜಕೀಯವಾಗಿ ಪರ್ಯಾಯ ಮಾರ್ಗ ಕಂಡುಕೊಂಡಿದ್ದು ಈಗ ಇತಿಹಾಸ.
ಸಿದ್ದರಾಮಯ್ಯ ಅವರ ಅಹಿಂದ ಸಂಘಟನೆಗೆ ಜನಪರ ಕಾಳಜಿ ಇತ್ತು. ಶೋಷಿತರ ಧ್ವನಿಯಾಗುವ ತುಡಿತ ಇತ್ತು. ದೀನ ದಲಿತರಿಗೆ ರಾಜಕೀಯ ಅವಕಾಶಗಳನ್ನು ಕಲ್ಪಿಸುವ ಉದ್ದೇಶ ಇತ್ತು. ಆ ನಿಟ್ಟಿನಲ್ಲಿ ಒಂದಿಷ್ಟು ಪ್ರಾಮಾಣಿಕ ಹೆಜ್ಜೆಯಿಟ್ಟ ಸಿದ್ದರಾಮಯ್ಯ ಅವರಿಗೆ ಅಹಿಂದ ವರವಾಯಿತು. ಪರಿಣಾಮ ಅವರನ್ನು ಎರಡು ಬಾರಿ ಮುಖ್ಯಮಂತ್ರಿಯಾಗಿ ನೋಡಲು ಸಾಧ್ಯವಾಗಿದೆ.
ಸದ್ಯದ ರಾಜಕೀಯ ಲಾಭವನ್ನಷ್ಟೇ ಹುಡುಕುವುದು ಈಶ್ವರಪ್ಪ ಅವರ ವರಸೆ ಎಂಬುದು ಅವರ ರಾಜಕೀಯ ಹೆಜ್ಜೆಗಳೇ ಸಾರುತ್ತವೆ. ಈ ಹಿಂದೆ ರಾಯಣ್ಣ ಬ್ರಿಗೇಡ್ ಅನ್ನು ಈಶ್ವರಪ್ಪ ತಮ್ಮ ರಾಜಕೀಯ ಲಾಭಕ್ಕಾಗಿಯೇ ಬಳಸಿಕೊಂಡರೇ ಹೊರತು ಯಾರನ್ನೂ ಬ್ರಿಗೇಡ್ ಆಗಿ ಬೆಳೆಸಲಿಲ್ಲ. ಅಗತ್ಯವಿದ್ದಾಗ ಮಾತ್ರ ಬ್ರಿಗೇಡ್ ಬಗ್ಗೆ ಮಾತನಾಡುವ ಈಶ್ವರಪ್ಪಗೆ ಹಿಂದುಳಿದವರ ಬಗ್ಗೆ, ಶೋಷಿತರ ಬಗ್ಗೆ ನೈಜ ಕಾಳಜಿ ಇಲ್ಲ. ಜನಪರ ಚಿಂತನೆ ಎಂಬುದು ಮುಖವಾಡ ಅಷ್ಟೇ!
ಇನ್ನು, ಪಂಚಮಸಾಲಿ 2ಎ ಮೀಸಲಾತಿ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿರುವ ಯತ್ನಾಳ್ ಅವರಿಗೆ ಬೇಕಿರುವುದು ಯಡಿಯೂರಪ್ಪ ಅವರನ್ನು ಹಣಿಯುವ ಒಂದು ವೇದಿಕೆ. ಇದರಾಚೆಗೆ ಯತ್ನಾಳ್ ಕೂಡ ಯೋಚಿಸಿರಲಿಕ್ಕಿಲ್ಲ. ಇವರಿಬ್ಬರ ಗುರಿ ಮಾತ್ರ ಒಂದೆ- ಅದು ಬಿಎಸ್‌ವೈ ಹಿಡಿತದಿಂದ ಪಕ್ಷವನ್ನು ಬಿಡಿಸಿಕೊಳ್ಳುವುದು. ಆ ಮೂಲಕ ತಮ್ಮ ರಾಜಕೀಯ ಲಾಭವನ್ನು ಹುಡುಕಿಕೊಳ್ಳುವುದು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪವನ್ – ಕಂಗನಾ ಎಂಬ ‘ಬುದ್ಧಿ’ವಂತರು ಮತ್ತು ಬಿಜೆಪಿ
ಜನಹಿತವೇ ಇಲ್ಲದ ಇಂತಹ ಸಂಘಟನೆಗಳಿಗೆ ಆಯಸ್ಸು ಕಡಿಮೆ. ರಾಜ್ಯದ ಜಾತಿ ರಾಜಕಾಣದ ಆಡುಂಬೊಲದೊಳಗೆ ಹೊಸ ಆಟ ಅಡಲು ‘ಆರ್‌ಸಿಬಿ’ ಬರುತ್ತಿದೆ. ಕ್ರಿಕೆಟ್ ಆಟದೊಳಗೆ ಈವರೆಗೂ ಕಪ್ ಗೆಲ್ಲದ ಆರ್‌ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಕೊನೆ ಪಕ್ಷ ಯಾವ ಟೀಮ್ ಕೂಡ ಗಳಿಸದಷ್ಟು ಅಪಾರ ಅಭಿಮಾನಿಗಳನ್ನು ಗಳಿಸಿದೆ. ಆದರೆ, ಈ ರಾಯಣ್ಣ ಚೆನ್ನಮ್ಮ ಬ್ರಿಗೇಡ್ (ಆರ್‌ಸಿಬಿ) ಕೊನೆ ಪಕ್ಷ ಒಂದಿಷ್ಟು ಮತದಾರರ ವಿಶ್ವಾಸ ಗಳಿಸಿಕೊಂಡು, ಒಂದಿಷ್ಟು ವರ್ಷವಾದರೂ ಜೀವಂತವಾಗಿರುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.